ಹೀಗೆ ತುಂಬಾ ವಿಶ್ವಾಸದಲ್ಲಿ ಖುಷಿಯಿಂದ ಹೇಳಿಕೊಂಡರು ನಿರ್ಮಾಪಕ ಸುರೇಶ್. “ಈ “ರಾಜು ಕನ್ನಡ ಮೀಡಿಯಂ’ಗೆ ಎಲ್ಲೆಡೆಯಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದೆ. ಒಂದು ಸಿನಿಮಾದಲ್ಲಿ ಮೂರು ಸಿನಿಮಾಗಳನ್ನು ನೋಡಿದ ಖುಷಿ ಪ್ರೇಕ್ಷಕರದ್ದು. ಹಾಗಾಗಿ, ನಾನು ಈಗಲೇ ಗಳಿಕೆ ಬಗ್ಗೆ ಹೇಳುವುದು ಕಷ್ಟ. ಆದರೆ ಒಂದಂತೂ ಸತ್ಯ. “ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ’,” ಮುಂಗಾರು ಮಳೆ’ ಮತ್ತು “ರಾಜಕುಮಾರ’ ಚಿತ್ರಗಳಂತೆ ಇದೂ ಆ ಸಾಲಿಗೆ ಸೇರುವ ಸಿನಿಮಾ ಆಗುತ್ತೆ ಎಂಬ ನಂಬಿಕೆ ನನ್ನದು. ಗೊತ್ತಿಲ್ಲ, ಈ ಮೂರು ಚಿತ್ರಗಳಲ್ಲಿ ಇದು ಯಾವ ರೀತಿಯ ಚಿತ್ರವಾಗುತ್ತೋ ಎಂಬುದು. ಇದೇ ಲೆವೆಲ್‌ನಲ್ಲಿ ಸಿನಿಮಾ ಹೋದರೆ, ದೊಡ್ಡ ಸಿನಿಮಾಗಳ ಲಿಸ್ಟ್‌ಗೆ ಸೇರುವುದು ಖಚಿತ’ ಎಂದು ಹೆಮ್ಮೆಯಿಂದ ಹೇಳಿಕೊಂಡರು ಸುರೇಶ್.
Advertisement
“ಆರಂಭದಲ್ಲಿ ಕಥೆ ಕೇಳಿ, ಸಿನಿಮಾ ಮಾಡುವುದು ಪಕ್ಕಾ ಆದಮೇಲೆ, ಚಿತ್ರ ಹೀಗೆಯೇ ಮಾಡಬೇಕು, ಹಾಗೇ ಜನರಿಗೆ ತಲುಪಿಸಬೇಕು, ಇಂತಿಷ್ಟು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಬೇಕು ಎಂಬ ಬಗ್ಗೆ ಸ್ಪಷ್ಟತೆ ಇಟ್ಟುಕೊಂಡು ಚಿತ್ರ ಮಾಡಿದೆವು. ನಮ್ಮ ಪ್ಲಾನ್ ಸಕ್ಸಸ್ ಆಯ್ತು. ಜನರು ಮೆಚ್ಚಿದರು. ಚಿತ್ರವೂ ಸಕ್ಸಸ್ ಆಯ್ತು. ಮೈಸೂರಿನಲ್ಲಿ ಈ ವಾರದಿಂದ ಚಿತ್ರಮಂದಿರ ಹೆಚ್ಚುತ್ತಿದೆ. ವಿದೇಶದಲ್ಲೂ ಎರಡು ವಾರಗಳ ಬಳಿಕ ತೆರೆ ಕಾಣುತ್ತಿದೆ. ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳು ಗ್ರೂಪ್ಸ್ ಟಿಕೆಟ್ ಬುಕ್ ಮಾಡಿ ಚಿತ್ರ ವೀಕ್ಷಿಸುತ್ತಿದ್ದಾರೆ. ಐಎಂಡಿಬಿಯಲ್ಲಿ 9.1 ರೇಟಿಂಗ್ ಬಂದಿದೆ. ಕನ್ನಡ ಚಿತ್ರಕ್ಕೆ ಇಷ್ಟೊಂದು ರೇಟಿಂಗ್ ಸಿಕ್ಕಿದ್ದು ಇದೇ ಮೊದಲು ಎಂಬ ಖುಷಿ ಇದೆ. ಈ ಗೆಲುವಿನ ಹಿಂದೆ ಇಡೀ ತಂಡದ ಶ್ರಮವಿದೆ. ಇಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರ ಸಹಕಾರ ಮರೆಯುವುದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೂ ಚಿತ್ರ ತೋರಿಸುವ ಯೋಚನೆ ಇದೆ. ಸರ್ಕಾರದ ಮಟ್ಟದಲ್ಲಿ ಪರ್ಮಿಷನ್ ಪಡೆದು ಆ ಬಗ್ಗೆ ಯೋಚಿಸುವುದಾಗಿ’ ಹೇಳಿದರು ಸುರೇಶ್.