ಸಿಂಧನೂರು: ಯಾವುದೇ ರಂಗದಲ್ಲಿ ರಚನಾತ್ಮಕ ಮುನ್ನಡೆಯನ್ನು ಸಾಧಿ ಸಬೇಕಾದರೆ, ಪರಿವರ್ತನೆಯೊಂದಿಗೆ ನಾವು ಮುನ್ನಡೆಯಬೇಕು. ಹಳೇ ಬೇರು, ಹೊಸ ಚಿಗುರು ಸೇರಿಕೊಂಡಾಗ ಹೊಸ ಸೊಬಗು ಸಾಧ್ಯವಿದೆ ಎಂದು ಸಹನಾ ಆಸ್ಪತ್ರೆಯ ವೈದ್ಯ ಡಾ| ಕೆ.ಶಿವರಾಜ್ ಹೇಳಿದರು.
ನಗರದ ಬಸವ ಚಾರಿಟಬಲ್ ಟ್ರಸ್ಟ್ ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಳೇ ತತ್ವ, ಹೊಸ ಧರ್ಮ ಕೂಡಿದಾಗ ಅದೊಂದು ಧರ್ಮವಾಗುತ್ತದೆ. ಅದೇ ರೀತಿಯಲ್ಲಿ ಬಸವ ಚಾರಿಟಬಲ್ ಟ್ರಸ್ಟ್‌ನಲ್ಲೂ 2ನೇ ಹಂತದ ನಾಯಕರನ್ನು ತೊಡಗಿಸಿಕೊಳ್ಳಬೇಕು. ಅವರನ್ನೆಲ್ಲ ಸಾಮಾಜಿಕ ಕಾರ್ಯಗಳತ್ತ ಮುನ್ನಡೆಸಲು ಹಿರಿಯರು ಸನ್ನದ್ಧರಾಗಬೇಕು. ಟ್ರಸ್ಟ್ ನಿಂದ ಮತ್ತಷ್ಟು ಸಮಾಜಮುಖೀ ಕೆಲಸಗಳು ನಡೆಯಬೇಕಿದೆ ಎಂದರು.
ಬಳಿಕ ಬಸವಚಾರಿಟಬಲ್ ಟ್ರಸ್ಟ್ ನ ನೂತನ ಪದಾಧಿಕಾರಿಗಳಿಗೆ ಅವರು ಪದಗ್ರಹಣ ಬೋಧಿಸಿದರು. ಪ್ರವೇಶ ಸಂಖ್ಯೆ ಏರಿಕೆಯಾಗಲಿ: ಬಸವಕೇಂದ್ರ ಜಿಲ್ಲಾಧ್ಯಕ್ಷ ಪಿ.ವೀರಭದ್ರಪ್ಪ ಕುರುಕುಂದಿ ಮಾತನಾಡಿ, ಮುಂದಿನ ದಿನಗಳಲ್ಲಿ ಹೊಸ ಅಧ್ಯಕ್ಷರು ನಾಲ್ಕು ಎಕರೆ ಭೂಮಿಯನ್ನು ಖರೀದಿ ಮಾಡಿ, ಎಲ್ಲ ಸಮಾಜಕ್ಕೆ ಅನುಕೂಲವಾಗುವ ರೀತಿಯಲ್ಲಿ ಹಾಸ್ಟೆಲ್ ಸ್ಥಾಪನೆ ಮಾಡಬೇಕಿದೆ. ಸ್ಥಳೀಯ ಬಸವ ಚಾರಿಟಬಲ್ ಟ್ರಸ್ಟ್‌ನಲ್ಲಿ 50 ವಿದ್ಯಾರ್ಥಿನಿಯರಿಗೆ ಉಚಿತ ಹಾಸ್ಟೆಲ್ ಇದ್ದು, ಅದನ್ನು 100ಕ್ಕೆ ಹೆಚ್ಚಿಸುವ ಪ್ರಯತ್ನ ನಡೆಯಬೇಕಿದೆ ಎಂದರು.
ಒಕ್ಕಲಿಗ ಮುದ್ದಣ್ಣನವರ ಕುರಿತು ವೀರಭದ್ರಗೌಡ ಅಮರಾಪುರ, ಫ.ಗು.ಹಳಕಟ್ಟಿ ಕುರಿತು ಗೋವಿಂದರಾಜ ಬಾರಿಕೇರ್, ಡಾ| ಬವರಾಜ, ಗುರುಪಾದಸ್ವಾಮಿ ಅನುಭಾವ ಮಂಡಿಸಿದರು. ನೂತನ ಅಧ್ಯಕ್ಷ ಟಿ.ಎಂ. ಪಾಟೀಲ್, ಕಾರ್ಯಾಧ್ಯಕ್ಷ ಶರಣಪ್ಪ ಟೆಂಗಿನಕಾಯಿ, ಕಾರ್ಯದರ್ಶಿ ಪಿ.ರುದ್ರಪ್ಪ, ಸಹಕಾರ್ಯದರ್ಶಿ ಸುಮಂಗಲಾ ಚಿಂಚರಕಿ, ಖಜಾಂಚಿ ಪಂಪನಗೌಡ ಮಲ್ಲಾಪುರ, ಮಲ್ಲಿಕಾರ್ಜುನ ಹೊಗರನಾಳ, ಬಸವಲಿಂಗಪ್ಪ ಬಾದರ್ಲಿ ಇದ್ದರು. ಶರಣೇಗೌಡ ಚಿಂತಮಾನದೊಡ್ಡಿ, ಬಸವ ಚಾರಿಟಬಲ್ ಟ್ರಸ್ಟ್‌ನ ಪಂಪಣ್ಣ ಹಳ್ಳಿ ಅವರನ್ನು ಸನ್ಮಾನಿಸಲಾಯಿತು.