ಲಿಂಗಾಯತ ಸಮಾಜದ ಘನತೆ ಕಾಪಾಡಬೇಕೆಂದು ಜಲ ಸಂಪನ್ಮೂಲ ಸಚಿವ ಎಂ.ಬಿ .ಪಾಟೀಲ್ ಆಗ್ರಹಿಸಿದ್ದಾರೆ.
Advertisement
ಬುಧವಾರ ಖಾಸಗಿ ಹೋಟೆಲ್ ವೊಂದರಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಸಚಿವರಾದ ವಿನಯ ಕುಲಕರ್ಣಿ, ಎಂ.ಬಿ. ಪಾಟೀಲ್ ಅವರು, ಆರ್‌ಎಸ್‌ಎಸ್ ದಕ್ಷಿಣ ಭಾರತ ಪ್ರಾಂತ ಪ್ರಚಾರಕ ಸು. ರಾಮಣ್ಣ ಲಿಂಗಾಯತರ ಕುರಿತು ನೀಡಿದ ವಿವಾದಿತ ಹೇಳಿಕೆಯನ್ನು ಕಟುವಾಗಿ ಖಂಡಿಸಿದರು. ಸು. ರಾಮಣ್ಣ ಲಿಂಗಾಯತರು ಶನಿ ಸಂತಾನ ಎಂದು ಹೇಳಿ ಲಿಂಗಾಯತರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಜ್ಜೆಗೇಡಿತನ. ಲಿಂಗಾಯತ ಧರ್ಮಕ್ಕೆ ಐತಿಹಾಸಿಕ ಪರಂಪರೆ ಇದೆ. ಸು. ರಾಮಣ್ಣ ಎನ್ನುವ ವ್ಯಕ್ತಿ ಇಡೀ ಲಿಂಗಾಯತ ಸಮುದಾಯಕ್ಕೆ ಹಾಗೂ ಸ್ವಾಮೀಜಿಗಳಿಗೆ ಅವಮಾನ ಮಾಡಿದ್ದಾರೆ. ಅವರ ಹೇಳಿಕೆಯನ್ನು ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರಾದ ಯಡಿಯೂರಪ್ಪ, ಸೋಮಣ್ಣ, ಮುರುಗೇಶ್ ನಿರಾಣಿ, ಲಕ್ಷ್ಮಣ ಸವದಿ, ಉಮೇಶ್ ಕತ್ತಿಯಂತ ನಾಯಕರು ಖಂಡಿಸಬೇಕಿತ್ತು ಎಂದರು. ಲಿಂಗಾಯತರದು ದಾಸೋಹ ಪರಂಪರೆ, ನಮ್ಮ ಮಠ ಹಾಗೂ ಸ್ವಾಮೀಜಿಗಳ ಬಗ್ಗೆ ಮಾತನಾಡಲು ಇವರಿಗೇನು ಅಧಿಕಾರ ಇದೆ. ಸು. ರಾಮಣ್ಣ ಕೂಡಲೇ ಲಿಂಗಾಯತ ಮಠಾಧೀಶರ ಹಾಗೂ ಸಮಾಜದ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ಆರ್‌ಎಸ್‌ಎಸ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
Related Articles
Advertisement
ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಮಾತನಾಡಿ, ದೇಶದಲ್ಲಿ ಶನಿ ಸಂತಾನ ಯಾರದ್ದು ಎಂದು ಎಲ್ಲರಿಗೂ ಗೊತ್ತಿದೆ. ನಮ್ಮ ಧರ್ಮದ ವಿಷಯದಲ್ಲಿ ಮೂಗು ತೂರಿಸಲು ಸು. ರಾಮಣ್ಣ ಅವರಿಗೇನು ಕೆಲಸ. ನಮ್ಮಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದೆ. ಅದನ್ನು ನಾವೇ ಸರಿಪಡಿಸಿಕೊಳ್ಳುತ್ತೇವೆ. ನಮ್ಮ ವಿಷಯದಲ್ಲಿ ಆರ್‌ಎಸ್‌ಎಸ್‌ನವರು ಮೂಗು ತೂರಿಸುವುದು ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.
ಸು.ರಾಮಣ್ಣ ಕ್ಷಮೆಯಾಚನೆ ಹಿಂದೂ ಸಮಾಜದ ಎಲ್ಲಾ ಜಾತಿ, ಮತ, ಪಂಥ, ಸಂಪ್ರದಾಯಗಳ ಬಗ್ಗೆ ಸಮಾನ ಗೌರವ ಹೊಂದಿ ಎಲ್ಲರನ್ನೂ
ಒಗ್ಗೂಡಿಸುವ ಕಾರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿದೆ. ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಸಮಾಜವನ್ನು ನೋಯಿಸುವ ಉದ್ದೇಶ ನಮ್ಮದಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ.
●ಸು. ರಾಮಣ್ಣ, ಆರ್‌ಎಸ್‌ಎಸ್ ಪ್ರಚಾರಕ, ಹುಬ್ಬಳ್ಳಿ