Advertisement

ಮರುಸೇರ್ಪಡೆಗೆ ಆಗ್ರಹಿಸಿ ಮುಂದುವರಿದ ಹೋರಾಟ

05:32 PM Jul 05, 2018 | Team Udayavani |

ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯಲ್ಲಿ 2012 ರಿಂದ ಹೊರಗುತ್ತಿಗೆ ಆಧಾರದಲ್ಲಿ ಮನೆಮನೆ ಕಸ ಸಂಗ್ರಹ ಮಾಡುತ್ತಿದ್ದ 12 ಜನ ಮಹಿಳಾ ಕಾರ್ಮಿಕರು ತಮ್ಮನ್ನು ಕೆಲಸಕ್ಕೆ ಮರು ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ಮಂಗಳವಾರದಿಂದ ಪುರಸಭೆ ಮುಂದೆ ನಡೆಸುತ್ತಿರುವ ಧರಣಿ ಸತ್ಯಾಗ್ರಹ 2ನೇ ದಿನವಾದ ಬುಧವಾರ ವಿವಿಧ ಸಂಘಟನೆಗಳ ಬೆಂಬಲ ಮತ್ತು ರಸ್ತೆ ತಡೆ ಪ್ರತಿಭಟನೆ ಮೂಲಕ ತೀವ್ರ ಸ್ವರೂಪ ಪಡೆದುಕೊಂಡಿತು.

Advertisement

ಗಾಳೆಮ್ಮ ನಿರಂತರ ಉಳಿತಾಯ ಮತ್ತು ಸ್ವಸಹಾಯ ಗುಂಪಿನಿಂದ ಮನೆ ಮನೆಗೆ ಕಸ ಸಂಗ್ರಹ ಮಾಡುವ ಕಾರ್ಯಕ್ಕೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 12 ಮಹಿಳಾ ಕಾರ್ಮಿಕರು ತಮ್ಮನ್ನು ಟೆಂಡರ್‌ ಅವಧಿ ಮುಗಿದಿದೆ ಎಂಬ ಕಾರಣ ನೀಡಿ ಕೆಲಸದಿಂದ ಬಿಡಿಸಿದ್ದಾರೆ. ಪ್ರಶ್ನಿಸಿದ್ದಕ್ಕೆ ಮರು ಟೆಂಡರ್‌ ಕರೆದು ಮತ್ತೇ ಕೆಲಸಕ್ಕೆ ಸೇರಿಸಿಕೊಳ್ಳುವುದಾಗಿ ಹೇಳಿದ್ದರು. ನಮನ್ನು ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಹಿರಿಯರು, ಸದಸ್ಯರು, ಅಧ್ಯಕ್ಷರು, ಅಧಿಕಾರಿಗಳಲ್ಲಿ ಅಂಗಲಾಚಿದರೂ ಯಾವುದೇ ಪ್ರಯೋಜನವಾಗದ್ದರಿಂದ ಜಿಲ್ಲಾಧಿಕಾರಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಧರಣಿ ಸತ್ಯಾಗ್ರಹ ಹೂಡಿರುವುದಾಗಿ ಹೇಳಿದ್ದಾರೆ.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್‌ ಡಾ|ವೆಂಕಟೇಶ ನಾಯಕ ಅವರು ಪ್ರತಿಭಟನಾನಿರತರಿಗೆ ತಮ್ಮ ಬೇಡಿಕೆಯ ಬಗ್ಗೆ ಪುರಸಭೆ ಆಡಳಿತ ಮಂಡಳಿ, ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸದ್ಯದಲ್ಲಿಯೇ ನಡೆಯುವ ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿಮ್ಮ ಪರವಾದ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಕೆಲ ದಿನ ಕಾಲಾವಕಾಶ ನೀಡಿ ಪ್ರತಿಭಟನೆಯಿಂದ ಹಿಂದೆ ಸರಿಯುವುವಂತೆ ಹೇಳಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರರು ಪುರಸಭೆ ಸಾಮಾನ್ಯ ಸಭೆ ಮುಗಿಯುವವರೆಗೂ ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ. ಸಭೆಯಲ್ಲಿ ನಮ್ಮ ಪರ ಕೈಗೊಳ್ಳುವ ತೀರ್ಮಾನದ ಮೇಲೆ ಹಿಂದೆ ಸರಿಯುವ ಬಗ್ಗೆ ನಿರ್ಧರಿಸುತ್ತೇವೆ. ಕೆಲಸಕ್ಕೆ ಸೇರಿಸಿಕೊಳ್ಳದಿದ್ದರೆ ಪುರಸಭೆ ಮುಂದೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆಯರು ಹೇಳಿದರು.

ಪ್ರತಿಭಟನೆಗೆ ಸಾಥ್‌ ನೀಡಿ ಇನ್ನು ಮಹಿಳೆಯರ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟಕ್ಕಿಳಿಯುವುದಾಗಿ ಹೇಳಿದ ಶರಣು ಗೋಡಿ ನೇತೃತ್ವದ ಕರವೇ, ಸುರೇಶ ನಂದೆಣ್ಣವರ ನೇತೃತ್ವದ ದಲಿತ ಸಂಘರ್ಷ ಸಮಿತಿ, ರಮೇಶ ಗಡದವರ ನೇತೃತ್ವದ ಅಂಬೇಡ್ಕರ ಸೇನೆ, ಸುರೇಶ ಹಟ್ಟಿ ನೇತೃತ್ವದ ಸಂಗೊಳ್ಳಿ ರಾಯಣ್ಣ ಯುವಶಕ್ತಿ ವೇದಿಕೆ, ಕರ್ನಾಟಕ ಜನಪರ, ಜಯಕರ್ನಾಟಕ, ಟಿಪ್ಪು ಸುಲ್ತಾನ ಸಂಘಟನೆಗಳ ಕಾರ್ಯಕರ್ತರು ತಹಸೀಲ್ದಾರರು, ಮುಖ್ಯಾಧಿಕಾರಿಗಳು, ಪುರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next