ಚಿತ್ರದುರ್ಗ: ಬಡವರ ಅನ್ನಕ್ಕೆ ಕನ್ನ ಹಾಕುವ ಪ್ರಶ್ನೆಯೇ ಇಲ್ಲ. ಡಿ ಕೆ ಶಿವಕುಮಾರ್ ಬಳಿ ದಾಖಲೆ ಇದ್ದರೆ ಬಹಿರಂಗಪಡಿಸಲಿ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿರುಗೇಟು ನೀಡಿದರು.
ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಡವರಿಗೆ ಆಹಾರ ತಲುಪಿಸುವಲ್ಲಿ ಸರ್ಕಾರದಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದರು.
ಪಾದರಾಯನಪುರ ಪುಂಡರನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಯಿಸಿದ ಅವರು, ಭದ್ರತಾ ದೃಷ್ಟಿಯಿಂದ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡಲಾಗಿತ್ತು. ಸರ್ಕಾರಕ್ಕೆ ರಾಮನಗರದ ವಾತಾವರಣ ಕೆಡಿಸುವ ಯಾವ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಡಿ.ಕೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುವುದು ಬೇಡ ಎಂದರು.
ಯಾರೇ ಆಗಲಿ ಸರ್ಕಾರದ ಲಾಕ್ ಡೌನ್ ಆದೇಶ ಪಾಲಿಸಿದಾಗ ಮುಂದಾಗುವ ತೊಂದರೆಗಳಿಗೆ ಸರ್ಕಾರ ಹೊಣೆಯಾಗುತ್ತದೆ. ಏನಾದರೂ ಆಗಲಿ ಎಂದು ಸ್ವೇಚ್ಛಾಚಾರದಿಂದ ರಸ್ತೆಯಲ್ಲಿ ಓಡಾಡಿದರೆ ಅದಕ್ಕೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ ಎಂದು ಲಾಕ್ ಡೌನ್ ಪಾಲಿಸದವರಿಗೆ ಎಚ್ಚರಿಸಿದರು.