Advertisement

ಬ್ಯಾಂಕ್‌ ಠೇವಣಿ ಇದ್ದರೆ ಸಾಲಮನ್ನಾ ಇಲ್ಲ!

06:00 AM Aug 25, 2018 | |

ಬೆಂಗಳೂರು: ಸಹಕಾರ ಸಂಘಗಳಲ್ಲಿ ರೈತರ ಸಾಲಮನ್ನಾ ವಿಚಾರದಲ್ಲಿ ಇನ್ನೂ ಗೊಂದಲಕ್ಕೆ ಬ್ರೇಕ್‌ ಬಿದ್ದಿಲ್ಲ. ಸರ್ಕಾರದ ಘೋಷಣೆಯಿಂದ ಸಂಪೂರ್ಣ ರೈತರ ಸಾಲ ಮನ್ನಾ ಅನುಮಾನವಾಗಿದೆ.

Advertisement

ಜುಲೈ 10, 2018ಕ್ಕೆ ಸಾಲಮನ್ನಾ ವ್ಯಾಪ್ತಿಗೆ ಒಳ ಪಡುವ ರೈತರು ರಾಜ್ಯದ ಡಿಸಿಸಿ, ವಾಣಿಜ್ಯ ಬ್ಯಾಂಕ್‌ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ಪ್ಯಾಕ್ಸ್‌)ಗಳಲ್ಲಿ ನಿಶ್ಚಿತ ಠೇವಣಿ (ಮುದ್ದತ್ತು ಠೇವಣಿ) ಇಟ್ಟಿದ್ದರೆ, ಅವರ ಠೇವಣಿ ಹಣವನ್ನು ಸಾಲಮನ್ನಾದಲ್ಲಿ ಕಡಿತಗೊಳಿಸಲು ರಾಜ್ಯ ಸರ್ಕಾರ ಆದೇಶಿಸಿದೆ.

ಹೀಗಾಗಿ, ರೈತರು 1ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಯಾವುದೇ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ರೈತರಿಗೆ ಸಾಲಮನ್ನಾ ಪ್ರಯೋಜನ ದೊರೆಯುವುದಿಲ್ಲ. ಸುಮಾರು 10ಲಕ್ಷ ರೈತರು ಐದು ಸಾವಿರ ಕೋಟಿ ರೂ.ವರೆಗೆ ಜಿಲ್ಲಾ ಸಹಕಾರ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿದ್ದು, ಅಂತಹ ರೈತರಿಗೆ ಸಾಲಮನ್ನಾ ಪೂರ್ಣ ಆಗುವುದಿಲ್ಲ.

ಸಹಕಾರಿ ಬ್ಯಾಂಕ್‌ಗಳ ಸಾಲಮನ್ನಾ ಮಾಡುವ ಕುರಿತಂತೆ ಆಗಸ್ಟ್‌ 14 ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಈ ರೀತಿಯ ನಿಬಂìಧ ಹೇರುವ ಮೂಲಕ ಲಕ್ಷಾಂತರ ರೈತರನ್ನು ಯೋಜನೆ ಫ‌ಲಾನುಭವಿಯಾಗುವುದರಿಂದ ಹೊರಗಿಡುವ ಪ್ರಯತ್ನ  ಮಾಡಲಾಗಿದೆ.

ಸಾಲಮನ್ನಾ ಸೌಲಭ್ಯದ ಲಾಭ ಪಡೆಯಲು 11 ಷರತ್ತುಗಳನ್ನು ವಿಧಿಸಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಏಳನೇ ಅಂಶದಲ್ಲಿ ಯಾವ ವರ್ಗದ ರೈತರಿಗೆ ಸಾಲಮನ್ನಾ ಸೌಲಭ್ಯ ದೊರೆಯುವುದಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ.
ಬೆಳೆ ಸಾಲ ಪಡೆದ ರೈತರು ಸರಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ಮಾಡುತ್ತಿದ್ದು, ಕನಿಷ್ಠ 20 ಸಾವಿರ ಸಂಬಳ ಅಥವಾ ಪಿಂಚಣಿ ಪಡೆಯುತ್ತಿರುವ ರೈತರು. ಕಳೆದ ಮೂರು ವರ್ಷಗಳಲ್ಲಿ ಯಾವುದಾದರೂ ಒಂದು ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದ್ದರೆ, ಚಿನ್ನಾಭರಣ ಸಾಲ, ವಾಹನ ಖರೀದಿ, ಪಶು ಭಾಗ್ಯ ಹಾಗೂ ಸ್ವಸಹಾಯ ಗುಂಪುಗಳಿಗೆ ಸಾಲಮನ್ನಾ ಅನ್ವಯ ಆಗುವುದಿಲ್ಲ ಎಂದು ಈ ಮೊದಲೇ ಘೋಷಣೆ ಮಾಡಲಾಗಿತ್ತು.

Advertisement

ಆದರೆ, ಈಗ ಅದರ ಜೊತೆಗೆ ಮತ್ತೂಂದು ಷರತ್ತು ವಿಧಿಸಲಾಗಿದ್ದು, ಬೇರೆ ಆದಾಯದ ಮೂಲ ಇಲ್ಲದೇ ಕೇವಲ ಕೃಷಿಯನ್ನೇ ನಂಬಿರುವ ರೈತರಿಗೂ ಈ ಯೋಜನೆಯ ಪ್ರಯೋಜನ ದೊರೆಯದಂತೆ ತಪ್ಪಿಸುವ ಪ್ರಯತ್ನವನ್ನು ಸರ್ಕಾರ ನಡೆಸಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ರೈತರ ಠೇವಣಿಯೇ ಹೆಚ್ಚು:
ರಾಜ್ಯದ ಸಹಾಕಾರಿ ಪತ್ತಿನ ಸಂಘಗಳು ಹಾಗೂ ಡಿಸಿಸಿ ಬ್ಯಾಂಕ್‌ಗಳಲ್ಲಿ ಕನಿಷ್ಠ 5 ಸಾವಿರ ಕೋಟಿ ರೂಪಾಯಿ ಠೇವಣಿ ಇಡಲಾಗಿದೆ. ಸಹಕಾರಿ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರೇ ಠೇವಣಿ ಇಟ್ಟಿರುವುದರಿಂದ ಅಂತಹ ರೈತರಿಗೆ ಸಾಲಮನ್ನಾ ಯೋಜನೆ ಲಾಭ ದೊರೆಯುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಸರ್ಕಾರದ ಈ ನಿರ್ಬಂಧ ರೈತರಿಗಷ್ಟೇ ಅಲ್ಲ. ಭವಿಷ್ಯದಲ್ಲಿ ಸಹಕಾರಿ ಬ್ಯಾಂಕ್‌ಗಳಿಗೂ ದೊಡ್ಡ ನಷ್ಟವುಂಟು ಮಾಡುವ ಸಾಧ್ಯತೆ ಇದೆ.

ಸಹಕಾರಿ ಬ್ಯಾಂಕ್‌ಗಳಿಗೆ ಆತಂಕ:
ರೈತರು ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವುದನ್ನು ನಿಲ್ಲಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಒಂದೊಮ್ಮೆ ಹಿಂದೇಟು ಹಾಕಿದರೆ, ಗ್ರಾಮೀಣ ಪ್ರದೇಶ ಸಹಕಾರಿ ಸಂಘಗಳು ನಷ್ಟ ಅನುಭವಿಸಲಿವೆ. ಇದರಿಂದ ಸಹಕಾರಿ ವ್ಯವಸ್ಥೆೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚು. ಈಗಾಗಲೇ ಹಿಂದಿನ ಸರ್ಕಾರ ಮಾಡಿರುವ ಸಾಲ ಮನ್ನಾದ 4 ಸಾವಿರ ಕೋಟಿ ಹಣ ಬಿಡುಗಡೆ ಮಾಡದಿರುವುದರಿಂದ ಸಂಕಷ್ಟ ಅನುಭವಿಸುತ್ತಿದ್ದು, ರೈತರಿಗೆ ಹೊಸ ಸಾಲ ಕೊಡುವುದೂ ಕಷ್ಟವಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಸಹಕಾರಿ ಬ್ಯಾಂಕ್‌ ಅಧಿಕಾರಿಗಳು ಹೇಳುತ್ತಾರೆ. 

ರೈತರ ಠೇವಣಿ ದುಡ್ಡನ್ನು ಸಾಲ ಮನ್ನಾದಲ್ಲಿ ವಜಾ ಮಾಡಲು ಹೇಗೆ ಸಾಧ್ಯ ? ಈ ರೀತಿಯ ಷರತ್ತು ವಿಧಿಸಲು ಹೇಗೆ ಸಾಧ್ಯ.  ಠೇವಣಿ ದುಡ್ಡಿಗೂ ಸಾಲ ಮನ್ನಾಕ್ಕೂ ಏನು ಸಂಬಂಧ ? ಸರ್ಕಾರದ ಈ ನಿರ್ಧಾರವನ್ನು ಸಹಕಾರಿ ರಂಗದಲ್ಲಿರುವವರೆಲ್ಲರೂ ವಿರೋಧಿಸುತ್ತೇವೆ.
– ಡಾ. ರಾಜೇಂದ್ರಕುಮಾರ್‌, ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ.

ಬ್ಯಾಂಕ್‌ನಲ್ಲಿ ಠೇವಣಿ ಇಟ್ಟವರಿಗೆ ಸಾಲ ಮನ್ನಾ ಅನ್ವಯ ಆಗುವುದಿಲ್ಲ ಅಂತ ಸರ್ಕಾರದ ಆದೇಶದಲ್ಲಿ  ಸ್ಪಷ್ಟವಾಗಿ ಹೇಳಲಾಗಿದೆ. ಠೇವಣಿ ಇಟ್ಟವರಿಗೆ ಮನ್ನಾ ಅನ್ವಯ ಆಗುವುದಿಲ್ಲ ಎಂದಿರುವುದು ಸಹಕಾರಿ ಕ್ಷೇತ್ರದಲ್ಲಿ  ಸಾಲ ಪಡೆದ ಶೇ. 50 ರಷ್ಟು ರೈತರು ಸಾಲ ಮನ್ನಾ ವ್ಯಾಪ್ತಿಯಿಂದ ಹೊರಗುಳಿಯುತ್ತಾರೆ.
– ಲಕ್ಷ್ಮಣ ಸವದಿ, ಮಾಜಿ ಸಹಕಾರ ಸಚಿವ

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next