ಧಾರವಾಡ: ಮಹಿಳೆ ಸಬಲಳಾದರೆ ಕುಟುಂಬವೇ ಸಶಕ್ತವಾಗುತ್ತದೆ. ಮೊದಲು ಉದ್ಯೋಗಂ ಪುರುಷ ಲಕ್ಷಣಂ ಎಂಬ ಮಾತು ಚಾಲ್ತಿಯಲ್ಲಿತ್ತು. ಆದರೆ ಇಂದು ಪ್ರತಿಯೊಂದು ಕುಟುಂಬದಲ್ಲೂ ಮಹಿಳೆಯರು ಉದ್ಯೋಗ ಮಾಡುತ್ತಿದ್ದು, ಮಹಿಳೆ ಉದ್ಯೋಗ ಮಾಡಿ ಆರ್ಥಿಕವಾಗಿ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದಾಳೆ ಎಂದು ಜೆಎಸ್ಸೆಸ್ ವಿತ್ತಾಧಿಕಾರಿ ಡಾ| ಅಜಿತ ಪ್ರಸಾದ ಹೇಳಿದರು.
ವಿದ್ಯಾಗಿರಿಯ ಜೆಎಸ್ಸೆಸ್ ಆವರಣದಲ್ಲಿ ರಾಪಿಡ್ ಸಂಸ್ಥೆ, ಜೆಎಸ್ಸೆಸ್ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಜಿಲ್ಲಾ ಕೌಶಲ್ಯಾಭಿವೃದ್ಧಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮತ್ತು ರೋಟರಿ ಕ್ಲಬ್ ಸೆಂಟ್ರಲ್-ಹುಬ್ಬಳ್ಳಿ ಆಶ್ರಯದಲ್ಲಿ ಮಹಿಳೆಯರಿಗಾಗಿ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ದುಶ್ಚಟಗಳಿಲ್ಲದೆ ಹಣ ಉಳಿತಾಯ ಮಾಡುವ ಪ್ರವೃತ್ತಿ ಮಹಿಳೆಯಲ್ಲಿ ಇರುವುದರಿಂದ, ಕುಟುಂಬ ಆರ್ಥಿಕವಾಗಿ, ಸಾಮಾಜಿಕ ಪ್ರಗತಿ ಸಾಧಿಸುತ್ತಿದೆ. ಪ್ರತಿಯೊಂದು ಕಂಪನಿಯು ಮಹಿಳೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತವೆ. ಯಾವುದೇ ಉದ್ಯೋಗವಿರಲಿ ಪ್ರಾಮಾಣಿಕತೆ, ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಸಂಕೋಚ ಸ್ವಭಾವದಿಂದ ಹೊರಬಂದು ತಮ್ಮಲ್ಲಿನ ಕೌಶಲ್ಯಗಳನ್ನು ಹೊರ ಹಾಕಬೇಕು ಎಂದರು.
ಬೆಂಗಳೂರಿನ ಕಲೆ-ನೆಲೆ ಸಂಸ್ಥೆಯ ಸಂಸ್ಥಾಪಕ ಜಾಹ್ನವಿ ಕುಲಕರ್ಣಿ ಮಾತನಾಡಿ, ಯಾವುದೇ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದಲ್ಲಿ ಯಶಸ್ಸು ಸಾಧ್ಯ. ವಿದ್ಯಾರ್ಹತೆ ಒಂದೇ ಮಾನದಂಡವಲ್ಲ. ಬದಲಾಗಿ ಕೌಶಲ್ಯವೇ ನಿರ್ಣಾಯಕ ಎಂದು ಹೇಳಿದರು.
ಕ್ಲಾಸಿಕ್ ಎಜುಕೇಶನ್ ಗ್ರೂಪ್‌ನ ಮುಖ್ಯಸ್ಥ ಲಕ್ಷ್ಮಣ ಉಪ್ಪಾರ ಮಾತನಾಡಿ, ಸ್ವ-ಸಾಮರ್ಥ್ಯದಿಂದ ಕೆಲಸ ಪಡೆದುಕೊಂಡು ಅರ್ಹತೆ ಸಾಬೀತುಪಡಿಸಬೇಕು. ಕೇವಲ ಸಂಬಳಕ್ಕಾಗಿ ಕೆಲಸ ಮಾಡಬೇಡಿ. ಆತ್ಮ ಸಂತೋಷವಿರಲಿ ಎಂದರು. ಉದ್ಯೋಗದಾತರ ಪರವಾಗಿ ಸೇಫ್ ಹ್ಯಾಂಡ್ಸ್ ಶ್ರಾವಣಿ ಹಾಗೂ ವಾಲ್ ಚಂದ್ ಇಂಡಸ್ಟ್ರೀಜ್‌ನ ಲಕ್ಷ್ಮೀ ಅನಿಸಿಕೆಗಳನ್ನು ಹಂಚಿಕೊಂಡರು.
ಶ್ರೇಯಾ ದೇಶಪಾಂಡೆ ಪ್ರಾರ್ಥಿಸಿದರು. ಮಹಾವೀರ ಉಪಾಧ್ಯೆ ಸ್ವಾಗತಿಸಿದರು. ಮಾಳವಿಕಾ ಕಡಕೋಳ ಪ್ರಾಸ್ತಾವಿಕ ಮಾತನಾಡಿದರು. ಡಾ| ಅಜಿತ್ ಪ್ರಸಾದ್, ಮಹಾವೀರ ಉಪಾಧ್ಯೆ ಹಾಗೂ ಮಾಳವಿಕಾ ಕಡಕೋಳ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕೌಶಲ್ಯಾಭಿವೃದ್ಧಿ ಅ ಧಿಕಾರಿ ಚಂದ್ರಪ್ಪ, ಎಸ್‌ಕೆಡಿಆರ್‌ಡಿಪಿಯ ಮಮತಾ ಭಟ್, ರೋಟರಿ ಕ್ಲಬ್ ಹುಬ್ಬಳ್ಳಿ ಸೆಂಟ್ರಲ್‌ನ ಸಂಜನಾ ಮಹೇಶ್ವರಿ, ಸೂರಜ್ ಜೈನ್ ಇದ್ದರು. ಮಾಯಾ ರಾಮನ್ ನಿರೂಪಿಸಿದರು. ಸಹನಾ ದೇಶಪಾಂಡೆ ವಂದಿಸಿದರು.
85 ಅಭ್ಯರ್ಥಿಗಳಿಗೆ ಆದೇಶ ಪತ್ರ
ಉದ್ಯೋಗ ಮೇಳದಲ್ಲಿ 45 ಕಂಪನಿಗಳು 6500ಕ್ಕೂ ಹೆಚ್ಚು ವಿವಿಧ ರೀತಿಯ ಹುದ್ದೆಗಳಿಗೆ ಸಂದರ್ಶನ ನಡೆಸಿದವು. ಒಟ್ಟು 2000 ಮಹಿಳಾ ಅಭ್ಯರ್ಥಿಗಳು ಹೆಸರನ್ನು ನೋಂದಾಯಿಸಿಕೊಂಡಿದ್ದರು. ಈ ಪೈಕಿ 979 ಅಭ್ಯರ್ಥಿಗಳು ಕೊನೆಯ ಸುತ್ತಿನ ಸಂದರ್ಶನಕ್ಕೆ ಆಯ್ಕೆಯಾದರು. 85 ಮಹಿಳಾ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಆದೇಶ ಪತ್ರಗಳನ್ನು ನೀಡಲಾಯಿತು.