Advertisement

ಮೌಲ್ಯ ಅಳವಡಿಸಿಕೊಂಡರೆ ಜಯಂತಿ ಸಾರ್ಥಕ

12:37 PM Aug 15, 2017 | |

ಬಸವಕಲ್ಯಾಣ: ಮಹಾತ್ಮರು ಸಾರಿದ ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು. ನಗರದ ಸರ್ಕಾರಿ ಸಮುದಾಯ ಭವನದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾಧವ ಸಮಾಜದ ಜನರು ಹೆಚ್ಚಿ ಸಂಖ್ಯೆಯಲ್ಲಿ ವಾಸಿಸುವ ತಾಲೂಕಿನ ಮುಡಬಿ ವಾಡಿಯನ್ನು ಕಂದಾಯ ಗ್ರಾಮವನ್ನಾಗಿ ಸರ್ಕಾರ ಘೋಷಿಸಿದೆ. ಇನ್ನು ಮುಂದೆ ಈ ವಾಡಿಯನ್ನು ಕೃಷ್ಣ ನಗರವೆಂದು ಕರೆಯಬೇಕು ಎಂದರು. ಒಂದೆರಡು ಗಂಟೆಯಲ್ಲಿ ಜಯಂತಿ ಕಾರ್ಯಕ್ರಮ ಮುಗಿಸುವ ಬದಲಿಗೆ ವರ್ಷದಲ್ಲಿ ಒಂದು ಸಲ ಮೂರು ದಿನಗಳ ವರೆಗೆ ತಾಲೂಕು ಮಟ್ಟಗಳಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲ ಮಹಾತ್ಮರ ಸಂದೇಶಗಳನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ತಿಳಿಸಿಕೊಡುವ ಕಾರ್ಯಕ್ರಮ ನಡೆಯಬೇಕು. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಆಯುಕ್ತ ಶರಣಬಸಪ್ಪ
ಕೊಟಪ್ಪಗೋಳ ಮಾತನಾಡಿ, ಶ್ರೀಕೃಷ್ಣನ ಜೀವನ ಮನುಕುಲಕ್ಕೆ ಬೇಕಾದ ಮೌಲ್ಯಯುತ, ಸ್ಫೂರ್ತಿದಾಯಕ ಸಂದೇಶವಾಗಿದೆ.
ಭಗವದ್ಗೀತೆ ಮನುಕುಲಕ್ಕೆ ನೀಡಿದ ಧರ್ಮ ಗ್ರಂಥವಾಗಿದೆ. ಭಕ್ತಿ, ಕರ್ಮ, ಯೋಗ ಮಾರ್ಗದಿಂದ ದೇವರನ್ನು ಕಾಣುವ ಸಂದೇಶ ಇದರಲ್ಲಿದೆ. ಶ್ರೀ ಕೃಷ್ಣನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ಇತಿಹಾಸವನ್ನು
ಅರಿತು ಇದರಿಂದ ಸ್ಫೂರ್ತಿ ಪಡೆಯಬೇಕು ಎಂದು ಹೇಳಿದರು. ನೀಲಾಂಬಿಕಾ ಕಾಲೇಜು ಉಪನ್ಯಾಸಕ ಅಮೃತರೆಡ್ಡಿ ವಿಶೇಷ
ಉಪನ್ಯಾಸ ನೀಡಿದರು. ನಗರಸಭೆ ಅಧ್ಯಕ್ಷ ಮೀರ ಅಜರಅಲಿ ನವರಂಗ, ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಜಿಪಂ ಸದಸ್ಯೆ ಅಮ್ರಪಾಲಿ ವೀರಣ್ಣ, ತಹಶೀಲ್ದಾರ ಕೀರ್ತಿ, ನಗರಸಭೆ ಪೌರಾಯುಕ್ತ ಮಹ್ಮದ ಯೂಸೂಫ ಉಪಸ್ಥಿತರಿದ್ದರು. ಡಾ| ರವೀಂದ್ರನಾಥ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next