ದಾವಣಗೆರೆ: ನಾವು ಕೇಳಿದ ಪ್ರಶ್ನೆಗಳಿಗೆ ಒಂದಕ್ಕೂ ಉತ್ತರಿಸದ ಶಾಸಕ ಶಾಮನೂರು ಶಿವಶಂಕರಪ್ಪನವರ ಬಗ್ಗೆ ಮಾತನಾಡುವುದೇ ವೇಸ್ಟ್ ಎಂದೇಳಿರುವ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ನನ್ನ ವಿರುದ್ಧ ಯಾವುದಾದರೂ ಆರೋಪ ಸಾಬೀತಾದಲ್ಲಿ ನಾನೂ ಸಹ ರಾಜಕೀಯ ನಿವೃತ್ತಿ ಹೊಂದುವೆ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂಬುದಾಗಿ ಶಾಸಕ ಶಾಮನೂರು ಶಿವಶಂಕರಪ್ಪನವರು ಟೀಕಿಸಿರುವ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಶಿವಶಂಕರಪ್ಪ ಸುಮ್ಮನೆ ವಯಸ್ಸು ಕಳೆದಿದ್ದಾರೆ. ಅವರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು ಎಂದರು.
ನಾವೇನು ಅವರಂತೆ ಯಾರದೋ ಆಸ್ತಿ ಕಬಳಿಸಿದವರಲ್ಲ. ಗಾಂಜಿವೀರಪ್ಪನವರ ಸಮಾಧಿ ಜಾಗದ ಕಬಳಿಕೆ ಬಗ್ಗೆ ನಾನೇ ದಾಖಲೆ ಸಮೇತ ಚರ್ಚೆ ಬರುವಂತೆ ಆಹ್ವಾನಿಸಿದ್ದೆ. ಆ ಜಾಗ ಯಾರದ್ದೆಂದು ದಾಖಲೆ ಇದೆ. ಆ ದಾಖಲೆ ನಾವು ಸೃಷ್ಟಿ ಮಾಡಿದ್ದಲ್ಲ. ಎಲ್ಲವನ್ನೂ ಆರ್ ಟಿಐ ಮುಖಾಂತರ ಪಡೆದದ್ದು. ಸಾರ್ವಜನಿಕವಾಗಿ ಆ ದಾಖಲೆಗಳ ಚರ್ಚೆಗೆ ಬರಲು ಸವಾಲು ಹಾಕಿದ್ದೆ. ಈವರೆಗೂ ಅದಕ್ಕೆ ಅವರಿಂದ ಉತ್ತರವಿಲ್ಲ.
ಶಾಮನೂರು ಶಿವಶಂಕರಪ್ಪ 2ನೇ ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಾರೆ. ಅವರು ಸತ್ಯವಂತರೇ ಆಗಿದ್ದಲ್ಲಿ ಸಾರ್ವಜನಿಕ ಚರ್ಚೆಗೆ ಬರಲಿ. ನಾನು ಈಗಲೂ ಅದಕ್ಕೆ ಸಿದ್ಧ ಎಂದು ಹೇಳಿದರು.
ಕುಂದುವಾಡ ಕೆರೆ ಬಳಿ ನಿರ್ಮಿಸಿರುವ ಗಾಜಿನಮನೆಗೆ ಜೀವಂತ ಇರುವ ಯಾವುದೇ ವ್ಯಕ್ತಿ ಹೆಸರಿಡುವುದು ಸಮಂಜಸವಲ್ಲ. ಮೇಲಾಗಿ ಬದುಕಿರುವ ವ್ಯಕ್ತಿಗಳ ಹೆಸರಿಡಕೂಡದೆಂದು ನ್ಯಾಯಾಲಯ ಸಹ ಆದೇಶಿಸಿದೆ. ಹಾಗಾಗಿ ಚನ್ನಗಿರಿಯಲ್ಲಿ ಕ್ರೀಡಾಂಗಣಕ್ಕೆ ನಮ್ಮ ಪಕ್ಷದ ಶಾಸಕ ಮಾಡಾಳು ವಿರುಪಾಕ್ಷಪ್ಪರ ಹೆಸರಿಟ್ಟದ್ದನ್ನು ತೆರವುಗೊಳಿಸಲಾಯಿತು. ಹಾಗಾಗಿ ಗಾಜಿನಮನೆಗೂ ಸಹ ಜೀವಂತವಾಗಿರುವ ಯಾವುದೇ ವ್ಯಕ್ತಿಗಳ ಹೆಸರಿಡಕೂಡದೆಂದು ಆಗ್ರಹಿಸಿದ ಜಾಧವ್, ದಾವಣಗೆರೆ ನಗರ ಹಾಗೂ ಜಿಲ್ಲೆ ಅಭಿವೃದ್ಧಿಗೆ ಶ್ರಮಿಸಿದ ಯಾವುದೇ ಪಕ್ಷದ ವ್ಯಕ್ತಿ ಹೆಸರಿಡಲಿ. ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್, ಜಿ. ಮಲ್ಲಿಕಾರ್ಜುನಪ್ಪ, ಪಂಪಾಪತಿ, ಕೆ.ಟಿ. ಜಂಬಣ್ಣ, ಚೆನ್ನಯ ಒಡೆಯರ್, ದಾನಿಗಳಾದ ರಾಜನಹಳ್ಳಿ ಹಾಗೂ ಚಿಗಟೇರಿ ಮನೆತನದ ಹೆಸರಿಡಲಿ. ಒಟ್ಟಾರೆ ಜೀವಂತ ಇರುವವರ ನಾಮಕರಣಕ್ಕೆ ನಮ್ಮ ವಿರೋಧ ಇದೆ ಎಂದು ಹೇಳಿದರು.
ಈಗಾಗಲೇ ದಾವಣಗೆರೆ ನಗರದ ಪ್ರಮುಖ ರಸ್ತೆ, ಉದ್ಯಾನವನ, ವೃತ್ತಕ್ಕೆ ಜೀವಂತವಾಗಿರುವ ಕೆಲವರ ಹೆಸರಿಡಲಾಗಿದೆ. ನಗರದ ಯಾವ್ಯಾವ ಸಾರ್ವಜನಿಕ ರಸ್ತೆ, ವೃತ್ತ, ಪಾರ್ಕ್‌ಗಳಿಗೆ ಯಾರ್ಯಾರ ಹೆಸರಿಡಲಾಗಿದೆ ಎಂಬ ವಿವರ ಸಂಗ್ರಹಿಸುತ್ತಿದ್ದೇವೆ. ಜೀವಂತವಾಗಿರುವ ವ್ಯಕ್ತಿಗಳ ಹೆಸರಿರುವ ಎಲ್ಲವನ್ನೂ ತೆರವುಗೊಳಿಸಲು ನಾವು ನ್ಯಾಯಾಲಯದ ಮೊರೆ ಹೋಗಲಿದ್ದೇವೆ ಎಂದು ತಿಳಿಸಿದರು. ಬರಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಕಾರ್ಯಕ್ಕೆ ಸಜ್ಜಾಗುತ್ತಿದ್ದು, ದೇಶದ ಎಲ್ಲಾ ರಾಜಕೀಯ ಪಕ್ಷಗಳು ಒಂದಾದರೂ ದಾವಣಗೆರೆ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ತಪ್ಪಿಸಲು ಸಾಧ್ಯವಿಲ್ಲ. ಹಿಂದೆಯೂ ಗೆದ್ದು ತೋರಿಸಿದ್ದೇವೆ. ಮುಂದೆಯೂ ಜಯ ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಮುಖಂಡರಾದ ರಮೇಶನಾಯ್ಕ, ಎ. ಸಿ. ರಾಘವೇಂದ್ರ, ಹೇಮಂತಕುಮಾರ್, ಎಲ್.ಡಿ.ಗೋಣೆಪ್ಪ, ಅಕ್ಕಿ ಚಂದ್ರು, ಟಿಂಕರ್ ಮಂಜಣ್ಣ, ಪ್ರವೀಣ್ ಜಾಧವ್ ಪತ್ರಿಕಾಗೋಷ್ಠಿಯಲ್ಲಿದ್ದರು.