ಧಾರವಾಡ: ಕೋವಿಡ್ ವೈರಾಣು ಹರಡದಂತೆ ಸೀಲ್‌ಡೌನ್ ಮಾಡಿರುವ ಪ್ರದೇಶಗಳಿಂದ ಅನುಮತಿ ಪಡೆಯದೆ ಮತ್ತು ಅನಗತ್ಯವಾಗಿ ಹೊರಬರುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ದೀಪಾ ಚೋಳನ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಡಿಸಿ ಕಚೇರಿಯಲ್ಲಿ ನಡೆದ ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಸೀಲ್‌ಡೌನ್ ಪ್ರದೇಶಗಳಲ್ಲಿ ನಿಯಮಗಳ ಪಾಲನೆ ಕಟ್ಟುನಿಟ್ಟಾಗಿ ಆಗುತ್ತಿಲ್ಲ. ಅದರಲ್ಲೂ ವಿಶೇಷವಾಗಿ ಮೊರಬ ಗ್ರಾಮದಲ್ಲಿ ಸೀಲ್ ಡೌನ್ ನಿಯಮಗಳನ್ನು ಬಿಗಿಗೊಳಿಸಿ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮೂರು ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು. ಪೊಲೀಸ್, ಆರೋಗ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ದಿನದ 24 ಗಂಟೆ ಸ್ಥಳದಲ್ಲಿದ್ದು ಕಾವಲು ಕಾಯಬೇಕು ಎಂದು ಸೂಚಿಸಿದರು.
ಸೀಲ್‌ಡೌನ್ ಪ್ರದೇಶದಲ್ಲಿ ಮನೆ ಮನೆಗೆ ಹೋಗಿ ಆರೋಗ್ಯ ಕಾರ್ಯಕರ್ತರು ಸಮೀಕ್ಷೆ ಮಾಡಿ ಮಾಹಿತಿ ಸಂಗ್ರಹಿಸಿಬೇಕು. ಮಾಹಿತಿ ನೀಡದ, ಅಸಹಕಾರ ನೀಡುವ, ದುರ್ವತನೆ ತೋರುವವರ ವಿರುದ್ಧ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳವಂತೆ ಸೂಚಿಸಿದರು. ಎಪಿಎಂಸಿ, ಬಸ್‌ನಿಲ್ದಾಣ ಸೇರಿದಂತೆ ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳಗಳಲ್ಲಿ ಮತ್ತು ಮಾಸ್ಕ್ ಧರಿಸದೆ ಸಂಚರಿಸುವವರ ವಿರುದ್ಧ ಕಾರ್ಯಾಚರಣೆ ಮಾಡಿ, ದಂಡ ವಿಧಿಸಿ, ಎಚ್ಚರಿಕೆ ನೀಡುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಾಗೂ ತಹಶೀಲ್ದಾರ್‌ಗೆ ಸೂಚಿಸಿದರು. ಸೀಲ್‌ಡೌನ್ ಪ್ರದೇಶದಲ್ಲಿ ಸಂಪೂರ್ಣ ಸೀಲ್‌ಡೌನ್ ಪಾಲನೆ ಆಗದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಿ, ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಶಿವಕುಮಾರ ಮಾನಕರ, ಮಹಾನಗರ ಪಾಲಿಕೆ ಜಂಟಿ ಆಯುಕ್ತ ಅಜಿಜ್ ದೇಸಾಯಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಯಶವಂತ ಮದೀನಕರ, ತಹಶೀಲ್ದಾರ್ ನವೀನ ಹುಲ್ಲೂರ, ಆರ್‌ಸಿಎಚ್‌ಒ ಡಾ| ಎಸ್.ಎಂ. ಹೊನಕೇರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಸುಜಾತಾ ಹಸವಿಮಠ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ| ಶಶಿ ಪಾಟೀಲ, ಡಾ| ಕೆ.ಎನ್. ತನುಜಾ, ಡಾ| ಎಸ್.ಬಿ. ನಿಂಬಣ್ಣವರ ಮೊದಲಾದವರಿದ್ದರು.