Advertisement

ಮಳೆ ಬಂದರೆ ತಿಳಿಯಲಿದೆ ಅಸಲೀಯತ್ತು!

04:12 PM Aug 12, 2019 | Lakshmi GovindaRaj |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಳೆಗಾಲಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಹೇಳಿದರೂ, ಅದರ ಅಸಲಿತನ ಮಳೆ ಬಂದಾಗ ತೆರೆದುಕೊಳ್ಳುತ್ತದೆ! ಮಳೆ ಅನಾಹುತ ತಪ್ಪಿಸುವುದಕ್ಕೆ ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಹೇಳಿದೆ. ಆದರೆ, ವಾಸ್ತವದಲ್ಲಿ ಬಿಬಿಎಂಪಿ ಹೇಳಿಕೊಂಡಿರುವಷ್ಟು ಸಿದ್ಧತೆಗಳನ್ನು ಮಾಡಿಕೊಂಡಿಲ್ಲ ಎನ್ನುವುದು ನಗರದಲ್ಲಿ ಸಣ್ಣ ಮಳೆಯಾದರೂ ಸಾಬೀತಾಗುತ್ತಿದೆ.

Advertisement

ಇತ್ತೀಚಿನ ದಿನಗಳಲ್ಲಿ ನಗರದ ಒಳಭಾಗದ ಕೆಲವೆಡೆ 10ರಿಂದ 15 ಮಿ.ಮೀ.ನಷ್ಟೂ ಮಳೆ ಆಗಿಲ್ಲ. ಈ ಭಾಗಗಳಲ್ಲೇ ಮಳೆ ನೀರು ನಿಂತು ವಾಹನ ಸವಾರರು ಮತ್ತು ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ನಗರದ ಹಲವು ತಗ್ಗು ಪ್ರದೇಶಗಳು ಇಂದಿಗೂ 12 ಮಿ.ಮೀಗಿಂತ ಹೆಚ್ಚು ಮಳೆಯಾದರೆ ಅಕ್ಷರಶಃ ಜಲಾವೃತವಾಗುತ್ತವೆ.

2018ರ ಡಿಸೆಂಬರ್‌ನಿಂದ ಮಳೆ ಅನಾಹುತ ತಪ್ಪಿಸುವುದಕ್ಕೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಹಿಂದೆ ಅನಾಹುತ ಸಂಭವಿಸಿದ ಪ್ರದೇಶಗಳಲ್ಲಿ ಸಮಸ್ಯೆಗೆ ಪರಿಹಾರ ನೀಡುವ ಬಿಬಿಎಂಪಿಯ ಭರವಸೆ ಈಡೇರಿಲ್ಲ. ಪ್ರವಾಹ ಪೂರ್ವ ಪ್ರದೇಶಗಳನ್ನು ಪಟ್ಟಿ ಮಾಡಿ, ಅಲ್ಲಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದ್ದೇವೆ ಎಂದು ಬಿಬಿಎಂಪಿ ಹೇಳುತ್ತಿದೆ. ಆದರೆ, ಪಟ್ಟಿ ಮಾಡಿರುವ ಬಹುತೇಕ ಪ್ರದೇಶಗಳಲ್ಲಿ ಸಮಸ್ಯೆ ಜೀವಂತವಾಗಿದೆ.

ಕಿರು ಚರಂಡಿ ಹೂಳೆತ್ತಿಲ್ಲ: ನಗರದ ಪ್ರಮುಖ ರಸ್ತೆಗಳ ನಿರ್ವಹಣೆಗೆ 26 ಮತ್ತು ವಾರ್ಡ್‌ ಮಟ್ಟದ ಸ್ವತ್ಛತೆ 63 ತಿಂಡಗಳನ್ನು ಮಾಡಿಕೊಳ್ಳಲಾಗಿದೆ ಮತ್ತು ಇವು ಕಳೆದ ಮೂರು ತಿಂಗಳಿದ ಕಾರ್ಯನಿರ್ವಹಿಸುತ್ತಿವೆ. ಈ ತಂಡಗಳು ಸಕ್ರಿಯವಾಗಿಲ್ಲ ಎನ್ನುವುದು ನಗರದಲ್ಲಿ 10 ಮಿ.ಮೀ ಮಳೆ ಬಂದರೂ ಸಾಬೀತಾಗುತ್ತಿದೆ. ಮೆಜೆಸ್ಟಿಕ್‌ ಬಳಿಯ ಓಕಳಿಪುರ ಜಂಕ್ಷನ್‌, ಮೇಖ್ರೀ ವೃತ್ತ, ಕಾವೇರಿ ಚಿತ್ರಮಂದಿರ, ಕೆ.ಆರ್‌.ವೃತ್ತ ಹಾಗೂ ಸ್ಯಾಂಕಿ ಅಂಡರ್‌ ಪಾಸ್‌ಗಳಲ್ಲಿ ಈಗಲೂ ಮಳೆ ಬಂದರೆ ನೀರು ನಿಲ್ಲುವುದು ನಿಂತಿಲ್ಲ.

ಸಮಸ್ಯೆಯ ಮೂಲ ಜೀವಂತ: ನಗರದ ಹಲವು ಭಾಗದಲ್ಲಿ ವಿವಿಧ ಉದ್ದೇಶಗಳಿಗಾಗಿ ರಾಜಕಾಲುವೆ ಪಥವನ್ನು ಬದಲಾಯಿಸಲಾಗಿದೆ. ಇದರಿಂದ ನೀರು ದಿಕ್ಕಾಪಾಲಾಗಿ ಹರಿಯುತ್ತದೆ. ವೇಗ ಹೆಚ್ಚಾದಂತೆ ಪ್ರವಾಹ ಸೃಷ್ಟಿಯಾಗುತ್ತಿದೆ. 2016ರಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಚರಣೆಯನ್ನು ಬಿಬಿಎಂಪಿ ಪ್ರಾರಂಭಿಸಿದಾಗ, ಎಲ್ಲ ಭಾಗದ ರಾಜಕಾಲುವೆ ಒತ್ತುವರಿಯನ್ನು ತೆರವು ಮಾಡುವುದಾಗಿ ತಿಳಿಸಿತ್ತು. ಆದರೆ, ಪ್ರಭಾವಿಗಳ ಕಟ್ಟಡಗಳು ಬರುತ್ತಿದ್ದಂತೆ ತೆರವು ಕಾರ್ಯಾಚರಣೆ ಕೈಬಿಟ್ಟಿದೆ. 2 ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡುವುದು ಇಂದಿಗೂ ಬಾಕಿ ಇದೆ. ಈ ಬಗ್ಗೆ ಬಿಬಿಎಂಪಿ ಚಕಾರ ಎತ್ತುತ್ತಲೇ ಇಲ್ಲ.

Advertisement

ರಾಜಕಾಲುವೆ ನಿಜಕ್ಕೂ ಸತ್ಛವಾಗುತ್ತಿದೆಯೆ?: ಬಿಬಿಎಂಪಿ ವ್ಯಾಪ್ತಿಯಲ್ಲಿ 842 ಕಿ.ಮೀ ಉದ್ದದ ರಾಜಕಾಲುವೆ ಇದೆ. ಇದರಲ್ಲಿ ಬಿಬಿಎಂಪಿ 184 ಕಿ.ಮೀ ಅಷ್ಟೇ ಸಂಪೂರ್ಣವಾಗಿ ಸ್ವತ್ಛಮಾಡಿದೆ. 440 ಕಿ.ಮೀ ಉದ್ದವನ್ನು ನವೀಕರಣ ಮಾಡಿರುವುದಾಗಿಯೂ ಹೇಳಿದೆ. ರಾಜಕಾಲುವೆ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ನೀಡಿ, ಬಿಬಿಎಂಪಿ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಂಡಿದೆ. ಈಗ ಖಾಸಗಿ ಕಂಪನಿ ಎಷ್ಟರ ಮಟ್ಟಿಗೆ ರಾಜಕಾಲುವೆ ನಿರ್ವಹಣೆ ಮಾಡಿದೆ ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಬಿಬಿಎಂಪಿ ಗುರುತಿಸಿರುವ ಅನಾಹುತ ಉಂಟಾಗಬಹುದಾದ ಪ್ರದೇಶಗಳ ಪಟ್ಟಿಯಲ್ಲಿ ರಾಜಕಾಲುವೆಗಳು ಇವೆ. ಹಲವು ರಾಜಕಾಲುವೆಗಳು ತ್ಯಾಜ್ಯ ಮತ್ತು ಹೂಳಿನಿಂದ ತುಂಬಿಕೊಂಡಿದ್ದು, ಖಾಸಗಿ ಕಂಪನಿ ಸರ್ಮಪಕವಾಗಿ ಕೆಲಸ ಮಾಡುತ್ತಿದೆಯಾ ಇಲ್ಲವಾ ಎನ್ನುವುದನ್ನು ಬಿಬಿಎಂಪಿಯ ಅಧಿಕಾರಿಗಳು ಪರಿಶೀಲನೆ ಮಾಡಬೇಕಾಗಿದೆ.

ಕಳೆದ ಮೂರು ವರ್ಷಗಳಲ್ಲಿ 400ಕ್ಕೂ ಹೆಚ್ಚು ಪ್ರದೇಶಗಳು ಮಳೆಯಿಂದ ಅನಾಹುತಕ್ಕೆ ಒಳಗಾಗಿವೆ. ಈ ಬಾರಿ ಬಿಬಿಎಂಪಿಯು 182 ತಗ್ಗು ಪ್ರದೇಶಗಳನ್ನು ಪಟ್ಟಿ ಮಾಡಿಕೊಂಡಿದ್ದು, ಅಲ್ಲಿನ ಸಮಸ್ಯೆ ಬಗೆಹರಿಸಿರುವುದಾಗಿ ಹೇಳಿದೆ. ಈ ಭಾಗದಲ್ಲಿ ಎಷ್ಟರ ಮಟ್ಟಿಗೆ ಸಮಸ್ಯೆಯ ಬಗೆಹರಿಸಿದೆ ಎನ್ನುವುದು ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಮಳೆ ಬಂದ ಮೇಲಷ್ಟೇ ತಿಳಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next