Advertisement

ಸಮಸ್ಯೆ ಬಗೆಹರಿಸಿದರೆ ರಾಜ್ಯ ಹೆದ್ದಾರಿ ಕಾಮಗಾರಿ ಪೂರ್ಣ

10:06 AM Jun 11, 2019 | Suhan S |

ಮುದ್ದೇಬಿಹಾಳ: ಪಟ್ಟಣದಲ್ಲಿ ಆಮೆಗತಿಯಲ್ಲಿ ಸಾಗಿರುವ ಹುನಗುಂದ-ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿ ಕಾಮಗಾರಿ ಮುಕ್ತಾಯಗೊಳಿಸಲು ಅಂತಿಮ ಹಂತದ ಕೆಲಸಗಳು ಕೆಲ ಸಮಸ್ಯೆಗಳ ಕಾರಣದಿಂದಾಗಿ ಬಾಕಿ ಉಳಿದಿವೆ. ಪುರಸಭೆ ಈ ಸಮಸ್ಯೆಗಳನ್ನು ಬಗೆಹರಿಸಿಕೊಟ್ಟಲ್ಲಿ ಹೆದ್ದಾರಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣ ಗೊಳಿಸಿಕೊಡುತ್ತೇವೆ ಎಂದು ಕೆಆರ್‌ಡಿಸಿಎಲ್ ಮತ್ತು ಅಶೋಕಾ ಬಿಲ್ಡಕಾನ್‌ ಅಧಿಕಾರಿಗಳು ಸೋಮವಾರ ಪುರಸಭೆ ಮುಖ್ಯಾಧಿಕಾರಿ ಎಸ್‌.ಎಫ್‌. ಈಳಗೇರಗೆ ಮನವಿ ಮಾಡಿದ್ದಾರೆ.

Advertisement

ಈ ಕುರಿತು ಪುರಸಭೆ ಕಚೇರಿಯಲ್ಲಿ ಸೋಮವಾರ ಮುಖ್ಯಾಧಿಕಾರಿ ಎಸ್‌.ಎಫ್‌. ಈಳಗೇರ ಜೊತೆ ಸಭೆ ನಡೆಸಿದ ಕೆಆರ್‌ಡಿಸಿಎಲ್ನ ಸಹಾಯಕ ಎಂಜಿನಿಯರ್‌ ಮಂಜುನಾಥ, ಅಶೋಕಾ ಬಿಲ್ಡಕಾನ್‌ ಕಂಪನಿ ಯೋಜನಾ ವ್ಯವಸ್ಥಾಪಕ ಗಿರೀಶ ಅವರು, ಈಗ ರಸ್ತೆ ನಿರ್ಮಾಣ ಮುಗಿದಿದೆ. ರಸ್ತೆಪಕ್ಕದಲ್ಲಿ ಎರಡೂ ಕಡೆ ಪಾದಚಾರಿ ಮಾರ್ಗ, ಚರಂಡಿ, ರಸ್ತೆ ವಿಭಜಕ, ಡೆಕ್‌, ವಿದ್ಯುತ್‌ ಕಂಬ ಅಳವಡಿಕೆ ಮುಂತಾದ ಅಂತಿಮ ಹಂತದ ಕೆಲಸಗಳು ಬಾಕಿ ಇವೆ. ಕೆಲವರು ಕಾರಣ ಇಲ್ಲದೆ ಕೆಲಸ ಬಂದ್‌ ಮಾಡಿಸುತ್ತಿದ್ದಾರೆ. ಇದರಿಂದ ನಮಗೆ ಕೆಲಸ ಮಾಡಲು ತೊಂದರೆ ಆಗುತ್ತಿದೆ ಎಂದು ಗಮನ ಸೆಳೆದರು.

ಇತ್ತೀಚೆಗೆ ಕೆಆರ್‌ಡಿಸಿಎಲ್ನ ಎಂಡಿಯವರು ಹೊಸ ಆದೇಶವೊಂದನ್ನು ಹೊರಡಿಸಿ ರಸ್ತೆ ಅಗಲೀಕರಣಕ್ಕೆ ಎಷ್ಟು ಸರ್ಕಾರಿ ಜಾಗ ಲಭ್ಯವಿದೆಯೋ ಅಷ್ಟನ್ನೂ ಬಳಕೆ ಮಾಡಿಕೊಳ್ಳಲು ತಿಳಿಸಿದ್ದಾರೆ. ಇದನ್ನು ಪಾಲಿಸಬೇಕಾದರೆ ಬಸ್‌ ನಿಲ್ದಾಣದ ಮುಂದೆ ಇರುವ ಡಬ್ಟಾ ಅಂಗಡಿಗಳು, ಜ್ಞಾನಭಾರತಿ ಶಾಲೆ, ಖಾದಿ ಗ್ರಾಮೋದ್ಯೋಗ ಕೇಂದ್ರ, ಓಸ್ವಾಲ್ ಅವರ ಕಟ್ಟಿಗೆ ಅಡ್ಡೆ, ಕೃಷಿ ಇಲಾಖೆ ಕಾಂಪೌಂಡ್‌ ಮುಂತಾದವುಗಳನ್ನು ತೆರವುಗೊಳಿಸಿಕೊಡಬೇಕು. ಕೆಲವೆಡೆ ಸಣ್ಣ ಪುಟ್ಟ ಸಮಸ್ಯೆಗಳು ಇದ್ದು ಇವುಗಳನ್ನು ಸಹಿತ ಬಗೆಹರಿಸಿಕೊಡಬೇಕು. ಕೆಲವೆಡೆ ವಿದ್ಯುತ್‌ ಕಂಬ ಸ್ಥಳಾಂತರಿಸಿಲ್ಲ, ಇದನ್ನೂ ಸ್ಥಳಾಂತರಿಸಿಕೊಡಬೇಕು ಎಂದು ಮನವಿ ಮಾಡಿದರು.

ಅಧಿಕಾರಿಗಳು, ಮುಖ್ಯಾಧಿಕಾರಿ ನಡುವೆ ಚರ್ಚೆ ನಡೆದಾಗ ಮಧ್ಯಪ್ರವೇಶಿಸಿದ ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ ಅವರು ರಾಜ್ಯ ಹೆದ್ದಾರಿ ನಿಯಮದ ಪ್ರಕಾರ ಕೆಲಸ ಮಾಡಬೇಕು. ಯೋಜನಾ ವರದಿಯಲ್ಲಿರುವಷ್ಟು ಅಳತೆಯನ್ನು ಮಾತ್ರ ಬಳಸಿಕೊಳ್ಳಬೇಕು. ಬಸ್‌ ನಿಲ್ದಾಣ ಎದುರು ಇರುವ ಡಬ್ಟಾ ಅಂಗಡಿಗಳಿಂದ ಪುರಸಭೆಗೆ ಆದಾಯ ಬರುತ್ತದೆ. ಮೇಲಾಗಿ ಇವು ನಿಗದಿಪಡಿಸಿದ ಅಳತೆಯಿಂದ ಹೊರಗೆ ಇವೆ. ಸ್ಥಳೀಯ ಶಾಸಕರು ಈ ಡಬ್ಟಾ ಅಂಗಡಿಗಳನ್ನು ಕಿತ್ತಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ನಾವು ಆಸ್ಪದ ಕೊಡುವುದಿಲ್ಲ ತಕರಾರು ತೆಗೆದರು.

ಇದರಿಂದ ವಿಚಲಿತರಾದ ಅಶೋಕಾ ಬಿಲ್ಡಕಾನ್‌ ಯೋಜನಾ ವ್ಯವಸ್ಥಾಪಕ ಗಿರೀಶ ಅವರು, ಶಾಸಕರು ಹೆಚ್ಚುವರಿ ಜಾಗೆಯನ್ನೂ ರಸ್ತೆ ಅಗಲೀಕರಣಕ್ಕೆ ಬಳಸಿಕೊಳ್ಳಲು ಸರ್ಕಾರದಿಂದ ಅನುಮತಿ ಪಡೆದುಕೊಂಡಿದ್ದಾರೆ. ನಾವು ಹೊಸ ಆದೇಶದಂತೆ ಕೆಲಸ ಮಾಡಬೇಕಾಗಿದೆ. ಇಷ್ಟಕ್ಕೂ ಡಬ್ಟಾ ಅಂಗಡಿಗಳಿಂದ ಪುರಸಭೆಗೆ ಎಷ್ಟು ಆದಾಯ ಬರುತ್ತದೆ. ಈಗಾಗಲೇ ವಾಣಿಜ್ಯ ಮಳಿಗೆಗಳನ್ನೇ ಕೆಡವಲು ಸಹಕರಿಸಿದ್ದೀರಿ. ಈಗಲೂ ಸಹಕರಿಸಿ. ಶಾಸಕರು ಅತಿಕ್ರಮಣ ತೆರವುಗೊಳಿಸಬೇಕು ಅಂತಾರೆ ಪುರಸಭೆ ಸದಸ್ಯರಾದ ನೀವು ಬೇಡ ಅಂತೀರಿ. ನಾವು ಯಾರ ಮಾತು ಕೇಳಬೇಕು ಎಂದು ಸಿಡಿಮಿಡಿಗೊಂಡರು.

Advertisement

ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ, ಹೆದ್ದಾರಿ ಪಟ್ಟಣ ಪ್ರವೇಶಿಸುವ ಕೊನೇ ಹಂತದಿಂದ ಕೆಲಸ ಪ್ರಾರಂಭಿಸಿ. ಎಲ್ಲೆಲ್ಲಿ ಸಮಸ್ಯೆ ಉಂಟಾಗುತ್ತದೆಯೋ ಅವೆಲ್ಲವನ್ನೂ ಬಗೆಹರಿಸಿಕೊಡಲಾಗುತ್ತದೆ. ಪುರಸಭೆಯವರಾದ ನಾವು ನಿಮಗೆ ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಇದರಿಂದ ಸಮಾಧಾನಗೊಂಡ ಕೆಆರ್‌ಡಿಸಿಎಲ್, ಅಶೋಕಾ ಬಿಲ್ಡಕಾನ್‌ ಪ್ರತಿನಿಧಿಗಳು ಕೆಲಸವನ್ನು ಈವತ್ತಿಂದಲೇ ಪ್ರಾರಂಭಿಸುವುದಾಗಿ ತಿಳಿಸಿ ಏನಾದರೂ ಸಮಸ್ಯೆ ಉಂಟಾದಲ್ಲಿ ಮುಖ್ಯಾಧಿಕಾರಿ ಗಮನಕ್ಕೆ ತಂದೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next