Advertisement

ಅಧಿಕಾರಕ್ಕೆ ಬಂದರೆ ಪಿ4 ಆಡಳಿತ

09:31 AM Nov 20, 2017 | |

ಬೆಂಗಳೂರು: ಸರ್ಕಾರ ಜನಪರವಾಗಿರಬೇಕು ಎಂಬ ಉದ್ದೇಶದಿಂದ ಪ್ರೈವೇಟ್‌, ಪಬ್ಲಿಕ್‌, ಪೀಪಲ್ಸ್‌ ಪಾರ್ಟಿಸಿಪೇಷನ್‌ (ಪಿ4) ಆಡಳಿತ ನೀಡಲು ಬಿಜೆಪಿ ಮುಂದಾಗಿದ್ದು, ಅದಕ್ಕಾಗಿಯೇ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲು ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

Advertisement

ಬಸವನಗುಡಿಯ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ “ನವ ಕರ್ನಾಟಕ- ಜನಪರ ಶಕ್ತಿ’ ಎಂಬ ಘೋಷ ವಾಕ್ಯದೊಂದಿಗೆ ಬಿಜೆಪಿ ಹಮ್ಮಿಕೊಂಡಿರುವ ಪ್ರಣಾಳಿಕೆ ಪೂರ್ವ ಅಭಿಯಾನ ಮತ್ತು ಪ್ರಣಾಳಿಕೆಗೆ ಸಲಹೆಗಳನ್ನು ನೀಡುವ ವೆಬ್‌ಸೈಟ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಎಲ್ಲಾ ಯೋಜನೆಗಳನ್ನೂ ಜನರ ಸಹಭಾಗಿತ್ವದಲ್ಲಿ ಜಾರಿಗೊಳಿಸುತ್ತಿದೆ. ಅದೇ ರೀತಿ ರಾಜ್ಯದಲ್ಲೂ ಜನರ ಸಹಭಾಗಿತ್ವದ ಆಡಳಿತ ನೀಡಬೇಕು ಎನ್ನುವುದು ಬಿಜೆಪಿ ಉದ್ದೇಶ. ಆ ನಿಟ್ಟಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆ‌ ಪ್ರಣಾಳಿಕೆಯೂ ಜನಾಭಿಪ್ರಾಯದಂತೆ ಸಿದ್ಧವಾಗಬೇಕು ಎಂಬ ಉದ್ದೇಶದಿಂದ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಈ ಅಭಿಪ್ರಾಯಗಳನ್ನು ಪ್ರಣಾಳಿಕೆ ಮಾತ್ರವಲ್ಲ, ಪಕ್ಷ ಅಧಿಕಾರಕ್ಕೆ ಬಂದ ಮೇಲೆ ನವ ಕರ್ನಾಟಕದ ಕುರಿತ ದೃಷ್ಟಿಕೋನಕ್ಕೂ ಅದನ್ನು ಬಳಸಿಕೊಳ್ಳ ಲಾಗುತ್ತದೆ ಎಂದರು. 

ಪ್ರಸ್ತುತ ಸರ್ಕಾರದ ಯೋಜನೆಗಳೆಂದರೆ ಅದು ಪಬ್ಲಿಕ್‌, ಪ್ರೈವೇಟ್‌ ಪಾರ್ಟ್‌ನರ್‌ಶಿಪ್‌ (ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವ ಪಿ3-ಪಿಪಿಪಿ) ಆಗಿದೆ. ಇದನ್ನು ಪಬ್ಲಿಕ್‌, ಪ್ರೈವೇಟ್‌, ಪೀಪಲ್ಸ್‌ ಪಾರ್ಟಿಸಿ ಪೇಷನ್‌ (ಸರ್ಕಾರ, ಖಾಸಗಿ, ಜನರ ಸಹಭಾಗಿತ್ವ ಪಿ4) ಆಗಿ ರೂಪಿಸಲಾಗುತ್ತದೆ. ಆ ಮೂಲಕ ಜನರಿಂದ ಆಯ್ಕೆಯಾದವರು ತಮ್ಮನ್ನು ಆಯ್ಕೆ ಮಾಡಿದವರು ಹೇಳಿದಂತೆ ಕೆಲಸ ಮಾಡಬೇಕು ಎಂಬ ಸಂಪ್ರದಾಯವನ್ನು ಅಳವಡಿಸಿ ಕೊಳ್ಳಲಾಗುತ್ತದೆ ಎಂದರು. ಕಾಂಗ್ರೆಸ್‌ ಪಾಲಿಗೆ ಪಕ್ಷದ ಪ್ರಣಾಳಿಕೆ ಎಂದರೆ ಏನಾದರೂ ಘೋಷಣೆ ಮಾಡು ಮತ್ತು ಅದಷ್ಟು ಬೇಗ ಅದನ್ನು ಮರೆತುಬಿಡು ಎನ್ನುವಂತಾಗಿದೆ. ಆದರೆ, ಬಿಜೆಪಿ ಪಾಲಿಗೆ ಪ್ರಣಾಳಿಕೆ ಎಂದರೆ ಅದೊಂದು ಜನರ ದೃಷ್ಟಿಕೋನ ಆಗಿದೆ. ಇದಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸ್ವತ್ಛ ಭಾರತ, ಉಜಾಲಾ (ಎಲ್‌ಇಡಿ ಬಲ್ಬ್), ಗಿವ್‌ ಇಟ್‌ಅಪ್‌ (ಗ್ಯಾಸ್‌ ಸಬ್ಸಿಡಿ) ಮತ್ತಿತರ ಯೋಜನೆಗಳೇ ಸಾಕ್ಷಿ ಎಂದು ಹೇಳಿದರು. 

ಸಚಿವ ಜಾರ್ಜ್‌ ರಾಜೀನಾಮೆಗೆ ಆಗ್ರಹ: ಡಿವೈಎಸ್ಪಿ ಗಣಪತಿ  ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ದಾಖಲಿಸಿರುವ ಎಫ್ಐಆರ್‌ನಲ್ಲಿ ಪ್ರಥಮ ಆರೋಪಿಯಾಗಿರುವ ಸಚಿವ ಕೆ.ಜೆ.ಜಾರ್ಜ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರಕಾಶ್‌ ಜಾವಡೇಕರ್‌ ಇದೇ
ವೇಳೆ ಆಗ್ರಹಿಸಿದರು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕುರಿತು ಸಿಐಡಿ ತನಿಖೆ ನಡೆಸಿತ್ತು. ಆದರೆ, ಘಟನೆ ನಡೆದು ಒಂದೂವರೆ ವರ್ಷದ ಬಳಿಕ ಸಿಬಿಐ ತನಿಖೆ ಆರಂಭವಾದಾಗ ಅವರು ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಬುಲೆಟ್‌ ಪತ್ತೆಯಾಗಿದೆ. ಇದನ್ನು
ಗಮನಿಸಿದಾಗ ಸಿಐಡಿ ತನಿಖೆ ಯಾವ ರೀತಿ ನಡೆದಿದೆ ಎಂಬುದು ಗೊತ್ತಾಗುತ್ತದೆ. ಅಷ್ಟೇ ಅಲ್ಲ, ಆ ಬುಲೆಟ್‌ ಪತ್ತೆಯಾಗಿದ್ದಕ್ಕೆ ಈಗ ಮತ್ತೂಂದು ಕಥೆ ಸೃಷ್ಟಿಸಲಾಗಿದೆ. ಗಣಪತಿ ಅವರು ಹಗ್ಗದಲ್ಲಿ ನೇತಾಡುತ್ತಿರುವಾಗ ಅವರಿಗೆ ಮತ್ತೆ ಬದುಕುವ ಆಸೆಯಾಯಿತು. ಅದಕ್ಕಾಗಿ ತಮ್ಮ ಪಿಸ್ತೂಲ್‌ನಿಂದ ಹಗ್ಗಕ್ಕೆ ಗುಂಡು ಹಾರಿಸಿದ್ದರು. ಆ ಬುಲೆಟ್‌ ಈಗ ಸಿಕ್ಕಿದೆ ಎನ್ನುತ್ತಾರೆ. ಅಂದರೆ ರಾಜ್ಯದ ಆಡಳಿತ
ಯಾವ ರೀತಿ ಇದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ವ್ಯಂಗ್ಯವಾಡಿದರು. 

ಕೇಂದ್ರ ಸಚಿವ ಅನಂತಕುಮಾರ್‌, ಸಂಸದ ಪಿ.ಸಿ.ಮೋಹನ್‌, ಪ್ರಣಾಳಿಕಾ ಪೂರ್ವಅಭಿಯಾನದ ಉಸ್ತುವಾರಿ ಹಾಗೂ ಶಾಸಕ
ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಶಾಸಕರಾದ ಅರವಿಂದ ಲಿಂಬಾವಳಿ, ರವಿ ಸುಬ್ರಮಣ್ಯ, ವಿಧಾನ ಪರಿಷತ್‌ ಸದಸ್ಯ ಲೆಹರ್‌ ಸಿಂಗ್‌, ಮಾಜಿ ಸಚಿವರಾದ ಎಸ್‌.ಎ.ರಾಮದಾಸ್‌, ಜಯಪ್ರಕಾಶ್‌ ಹೆಗ್ಡೆ, ಬಿಎಂಎಸ್‌ ಸಮೂಹದ ದಯಾನಂದ ಪೈ ಮತ್ತಿತರರು ಇದ್ದರು.

Advertisement

ಪ್ರಣಾಳಿಕೆಗೆ ಅಭಿಪ್ರಾಯ ತಿಳಿಸುವುದು ಹೇಗೆ?
ಬಿಜೆಪಿ ಪ್ರಣಾಳಿಕೆಗೆ ಸಂಬಂಧಿಸಿದಂತೆ ವೆಬ್‌ಸೈಟ್‌ ಮತ್ತು ವಾಟ್ಸ್‌ಆ್ಯಪ್‌ ಗ್ರೂಪ್‌ ಆರಂಭಿಸಲಾಗಿದೆ. ಪ್ರಣಾಳಿಕೆಗೆ ಸಲಹೆಗಳನ್ನು ನೀಡುವವರು www. navakarnatakabjp.com ಮತ್ತು ವಾಟ್ಸ್‌ಆ್ಯಪ್‌ ಸಂಖ್ಯೆ 9108123123ಗೆ ಅವುಗಳನ್ನು ಕಳುಹಿಸಿಕೊಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next