Advertisement
ಘನತ್ಯಾಜ್ಯ ವಿಲೇವಾರಿ ಸಂಬಂಧ ಚರ್ಚಿಸಲು ಶನಿವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ವಿಸ್ತೃತ ಚರ್ಚೆ ಬಳಿಕ ನಿಷೇಧಿತ ಪ್ಲಾಸ್ಟಿಕ್ ಬಳಸುವ ಉದ್ದಿಮೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.
Related Articles
Advertisement
ತ್ಯಾಜ್ಯ ವಿಲೇವಾರಿಗೆ ಮರುಟೆಂಡರ್: ಗರದಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ಹಾಗೂ ವಿಲೇವಾರಿ ಅವ್ಯವಹಾರಗಳ ತಡೆಗೆ ವಾರ್ಡ್‌ವಾರು ತ್ಯಾಜ್ಯ ವಿಲೇವಾರಿಗೆ ಮರುಟೆಂಡರ್ ಕರೆಯಲು ಸಭೆ ನಿರ್ಧರಿಸಿತು. ತ್ಯಾಜ್ಯ ವಿಲೇವಾರಿ ಸಂಬಂಧ ಮೂರು ವರ್ಷಗಳ ಹಿಂದೆ ಕರೆಯಲಾಗಿದ್ದ ಟೆಂಡರ್ ನಿಯಮಾವಳಿಗಳು ಕಠಿಣವಾಗಿವೆ ಎಂದು ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ.
ಆ ಹಿನ್ನೆಲೆಯಲ್ಲಿ ತ್ಯಾಜ್ಯ ವಿಲೇವಾರಿ ಜವಾಬ್ದಾರಿಯನ್ನು ಪಾಲಿಕೆಯೇ ವಹಿಸಿಕೊಂಡಿತ್ತು. ಇದರಿಂದ ನಗರದಲ್ಲಿ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗುತ್ತಿಲ್ಲ. ಜತೆಗೆ ಹಲವಾರು ಅವ್ಯವಹಾರಗಳು ನಡೆಯುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕೊನೆಗೂ ಟೆಂಡರ್ ಕರೆಯಲು ಪಾಲಿಕೆ ಒಪ್ಪಿದೆ.
ಯಾರು ಏನು ಹೇಳಿದರು?ಎಂ.ಶಿವರಾಜ್, ಆಡಳಿತ ಪಕ್ಷ ನಾಯಕ: ನಗರ ವೇಗವಾಗಿ ಬೆಳೆಯುತ್ತಿದ್ದು, ನಿತ್ಯ 4 ಸಾವಿರ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಹಿಂದಿನ ಅವಧಿಯಲ್ಲಿ ಬೆಂಗಳೂರು ಗಾರ್ಬೇಜ್ ಸಿಟಿಯಾಗಿತ್ತು. ನಾವು ಆಡಳಿತಕ್ಕೆ ಬಂದ ನಂತರ ಅದನ್ನು ಸರಿಪಡಿಸುವ ಕೆಲಸ ಮಾಡಿದ್ದೇವೆ. ಸದ್ಯ ಶೇ.40ರಷ್ಟು ತ್ಯಾಜ್ಯ ವಿಂಗಡಣೆಯಾಗುತ್ತಿದೆ. ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆಗಾಗಿ 12 ಘಟಕಗಳನ್ನು ಸ್ಥಾಪಿಸಿದ್ದು, ವಾರ್ಷಿಕ 1 ಸಾವಿರ ಕೋಟಿ ವ್ಯಯಿಸಲಾಗುತ್ತಿದೆ. ಪದ್ಮನಾಭರೆಡ್ಡಿ, ವಿಪಕ್ಷ ನಾಯಕ: ಘನತ್ಯಾಜ್ಯ ವಿಲೇವಾರಿಯಲ್ಲಿ ಲೂಟಿ ನಡೆಯುತ್ತಿದ್ದು, ನಾವೆಲ್ಲ ಕಣ್ಣಿದ್ದೂ ಕುರುಡಾಗಿದ್ದೇವೆ. ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಸ್ಥಾಪಿಸಿರುವ 12 ಘಟಕಗಳು 2,300 ಟನ್ ಸಂಸ್ಕರಣಾ ಸಾಮಥ್ಯಧ ಹೊಂದಿದ್ದರೂ, ಸದ್ಯ ಪ್ರತಿ ಘಟಕಕ್ಕೆ ಹೋಗುತ್ತಿರುವುದು 30-40 ಟನ್ ಮಾತ್ರ. ಇದರೊಂದಿಗೆ ಮೂರು ವರ್ಷಗಳಿಂದ ತ್ಯಾಜ್ಯ ವಿಲೇವಾರಿಗೆ ಟೆಂಡರ್ ಕರೆದಿಲ್ಲ. ನಾವು ನಗರವನ್ನು ಡಸ್ಟ್ ಬಿನ್ ಫ್ರೀ ಸಿಟಿ ಮಾಡಿದ್ದೆವು. ನೀವು ಮತ್ತೆ ಡಸ್ಟ್ ಬಿನ್ ಸಿಟಿ ಮಾಡ ಹೊರಟಿರುವುದು ಇದು ನಿಮ್ಮ ಸಾಧನೆ. ಆರೋಪ-ಸ್ಪಷ್ಟನೆ
ಶಿವರಾಜ್ ಆರೋಪ: ಸ್ವತ್ಛ ಸರ್ವೆಕ್ಷಣ್ ಅಭಿಯಾನದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡಿದೆ. ಉಸಿರಾಡಲಾಗದಂತಹ ಪರಿಸ್ಥಿತಿಯಿರುವ ದೆಹಲಿಗೆ ಉತ್ತಮ ರ್‍ಯಾಂಕ್ ನೀಡಲಾಗಿದೆ. ಆದರೆ, ಹಲವು ಪರಿಣಾಮಕಾರಿ ಕ್ರಮಗಳಿಂದ ದೇಶಕ್ಕೆ ಮಾದರಿಯಾಗಿರುವ ಬೆಂಗಳೂರಿಗೆ ಕಡಿಮೆ ಸ್ಥಾನ ನೀಡಲಾಗಿದೆ. ಪ್ರಧಾನಿ ಭಾವಚಿತ್ರ ಬಳಸಿಲ್ಲ ಎಂದು ಕಳಪೆ ಸ್ಥಾನ ನೀಡಿ ಬೆಂಗಳೂರಿಗೆ ಅವಮಾನ ಮಾಡಲಾಗಿದೆ. ಪದ್ಮನಾಭರೆಡ್ಡಿ ಸ್ಪಷ್ಟನೆ: ನಗರದಲ್ಲಿ ಕಳೆದ ಮೂರು ತಿಂಗಳಿನಿಂದ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ ಎಂದು ಜಂಟಿ ಆಯುಕ್ತರೇ ಹೇಳಿದ್ದಾರೆ. ಜತೆಗೆ ಯಾವುದೇ ಕೇಂದ್ರ ಸರ್ಕಾರವಾಗಲಿ ಇಷ್ಟು ಕೆಳಮಟ್ಟಕ್ಕಿಳಿದು ರಾಜಕೀಯ ಮಾಡುವುದಿಲ್ಲ. ಪಾಲಿಕೆಯಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬ್ಯಾನ್ ಆಗಿಲ್ಲ. ಇಂತಹ ಕಾರಣಗಳಿಗೆ ಬೆಂಗಳೂರಿಗೆ ಕಡಿಮೆ ರ್‍ಯಾಂಕ್ ಸಿಕ್ಕಿದೆ. ಸಭಾ ಸ್ವಾರಸ್ಯ
ಕೆ.ಜಿ ಕಸ ವಿಲೇವಾರಿಗೆ 7.75 ರೂ.: ಪ್ರತಿ ತಿಂಗಳು ಕಸ ವಿಲೇವಾರಿಗಾಗಿ ಬಿಬಿಎಂಪಿ 100 ಕೋಟಿ ರೂ. ವೆಚ್ಚ ಮಾಡುತ್ತಿದೆ. ಪ್ರತಿ ಟನ್‌ಗೆ ತಿಂಗಳಿಗೆ 2.32 ಲಕ್ಷ ರೂ.ಗಳಂತೆ ಒಂದು ಕೆ.ಜಿ ಕಸ ವಿಲೇವಾರಿಗೆ 7.75 ರೂ. ವೆಚ್ಚ ಮಾಡಲಾಗುತ್ತಿದೆ. ಇಷ್ಟು ವೆಚ್ಚ ಮಾಡಿದರೂ, ಕಸದ ಸಮಸ್ಯೆ ಮಾತ್ರ ನಿವಾರಣೆಯಾಗಿಲ್ಲ. ಕೋಟ್ಯಂತರ ರೂ. ಖರ್ಚು ಮಾಡಿ ಕಸ ಸಂಗ್ರಹ ಡಬ್ಬಿ ಇಟ್ಟರೂ ನಿರ್ವಹಣೆಯಾಗುತ್ತಿಲ್ಲ. ಹೀಗಾಗಿ ಕಸ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ವಹಿಸಬೇಕು ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ವಾದ ಮಂಡಿಸಿದರು. ಹೊಸ ಹಿಟಾಚಿ ಕೊಡಿಸಬಹುದಿತ್ತಲ್ಲ!: ದೊಡ್ಡಬಳ್ಳಾಪುರದ ಎಂಎಸ್‌ಜಿಪಿ ತ್ಯಾಜ್ಯ ಘಟಕದಲ್ಲಿ ಹಿಟಾಚಿ ಯಂತ್ರದ ಬಾಡಿಗೆಗೆ ಪಾಲಿಕೆ ಅಧಿಕಾರಿಗಳು 54 ಲಕ್ಷ ರೂ. ಹೆಚ್ಚುವರಿ ಬಿಲ್ ಪಾವತಿಸಿದ್ದಾರೆ. ಅದರ ಬದಲಿಗೆ ಹೊಸ ಹಿಟಾಚಿ ಯಂತ್ರವನ್ನೇ ಖರೀದಿಸಿ ಅವರಿಗೆ ಉಡುಗೊರೆಯಾಗಿ ನೀಡಬಹುದಾಗಿತ್ತು ಎಂದು ಕಾಲೆಳೆದ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಮಂಡೂರು ಘಟಕ ಸ್ಥಗಿತಕ್ಕೆ ಮೊದಲು ಘಟಕದ ಸುತ್ತಲಿನ ಜಮೀನನ್ನು ಯಾರು ಖರೀದಿ ಮಾಡಿದ್ದಾರೆ ಎಂದು ಪರಿಶೀಲಿಸಿದರೆ ಘಟಕ ಮುಚ್ಚಲು ಕಾರಣ ತಿಳಿಯುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು. ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಹಾಕುವುದನ್ನು ತಪ್ಪಿಸಲು ನಿವೇಶನಗಳಿಗೆ ಬಿಡಿಎ ಮಾದರಿಯಲ್ಲಿ ಹೆಚ್ಚಿನ ತೆರಿಗೆ ವಿಧಿಸುವ ಕುರಿತು ಚರ್ಚಿಸಬೇಕಿದೆ. ಇದರಿಂದಾಗಿ ಖಾಲಿ ನಿವೇಶನಗಳ ಸಂಖ್ಯೆ ಕಡಿಮೆಯಾಗುತ್ತದೆ.
-ಆರ್.ಸಂಪತ್‌ರಾಜ್, ಮೇಯರ್ ರಸ್ತೆ ಬದಿ, ಖಾಲಿ ನಿವೇಶನಗಳಲ್ಲಿ ಕಸ ಎಸೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಾಣಿ ಜನ್ಯ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕಿದ್ದು, 24 ಗಂಟೆ ಕಾರ್ಯನಿರ್ವಹಿಸುವ ವಿಶೇಷ ತಂಡ ರಚಿಸಬೇಕಿದೆ.
-ಸೌಮ್ಯಾ ರೆಡ್ಡಿ, ಶಾಸಕಿ 18 ರಂದು ಕೆಂಪೇಗೌಡ ಜಯಂತಿ: ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಜು.18ರಂದು ಆಚರಿಸಲು ಸಿದ್ಧತೆ ನಡೆಸಿದ್ದು, ಆ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಸಮಿತಿಗಳನ್ನು ರಚಿಸಲಾಗಿದೆ. ಎಲ್ಲ ಸಮಿತಿಗಳ ಅಧ್ಯಕ್ಷತೆಯನ್ನು ಮೇಯರ್ ಆರ್.ಸಂಪತ್‌ರಾಜ್ ವಹಿಸಿಕೊಂಡಿದ್ದಾರೆ.