ಬೆಂಗಳೂರು: ಮುಖ್ಯಮಂತ್ರಿ ಯಡಿಯೂಪ್ಪನವರು ನಾಡಿನ ಅಭಿವೃದ್ಧಿಗೂ ಪಣತೊಟ್ಟು ನಿಂತವರು. ಕೋವಿಡ್-19 ಶುರುವಾದಗಲೇ ಲಾಕ್ ಡೌನ್ ಘೋಷಣೆ ಮಾಡಿ ಸಮಸ್ಯೆಗೆ ಸ್ಪಂದಿಸಿದ್ದಾರೆ. ಆಹಾರ ಪೂರೈಕೆಯಲ್ಲಿ ಕೂಡ ಯಾವುದೇ ಸಮಸ್ಯೆಯಾಗದ ಹಾಗೆ ನೋಡಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸರ್ಕಾರ ರಚನೆಯಾದ ಹೊಸತರಲ್ಲಿ ನೆರೆ ಹಾವಳಿ ವೇಳೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದಿನದ 24 ಗಂಟೆ ಮುಖ್ಯಮಂತ್ರಿಗಳು ಕೆಲಸ ಮಾಡಿದ್ದಾರೆ. ಅವರು ಸಮರ್ಥ ನಾಯಕರು ಎಂದರು.
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಬಸವರಾಜ್ ಪಾಟೀಲ್ ಯತ್ನಾಳ್, ನಿರಾಣಿ, ಕತ್ತಿಯವರು ನಮ್ಮ ಹಿರಿಯ ನಾಯಕರು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಜನರಲ್ಲಿ ಗೊಂದಲ ಉಂಟಾಗಬಾರದು. ಯಡಿಯೂರಪ್ಪ ಮುಂದಿನ ಮೂರು ವರ್ಷ ಮುಖ್ಯಮಂತ್ರಿಯಾಗಿ ಇರ್ತಾರೆ. ಎಲ್ಲಾ ಒಗ್ಗಟ್ಟಿನಿಂದ ಇದ್ದೇವೆ. ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲಎಂದರು.
ನಾನು ಮೂರನೇ ಬಾರಿ ಮಂತ್ರಿಯಾಗಿದ್ದೇನೆ. ಸ್ವಾರ್ಥದಿಂದ ರಾಜಕೀಯ ಮಾಡಿದ ವ್ಯಕ್ತಿ ಅಲ್ಲ ನಾನು. ಸಮರ್ಥವಾಗಿ ಈ ಹಿಂದೆ ಆರೋಗ್ಯ ಇಲಾಖೆ ನಿರ್ವಹಿಸಿದೆ. ಹಾಗಾಗೀ ಈ ಬಾರಿ ಅದೇ ಇಲಾಖೆಯನ್ನು ಕೊಟ್ಟಿದ್ದಾರೆ. ನಾನು ಡಿಸಿಎಂ ಕೊಟ್ಟಿಲ್ಲ ಅಂತ ಯಾವತ್ತು ನೋವು ಪಟ್ಟಿಲ್ಲ. ಪಕ್ಷ ನನಗೆ ರಾಜೀನಾಮೆ ಕೊಡೊದಕ್ಕೆ ತಿಳಿಸಿದರೆ ಖಂಡಿತವಾಗಿಯೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಶ್ರೀರಾಮುಲು ಹೇಳಿದರು.