Advertisement

ಮಹನೀಯರ ಚಿಂತನೆ ತಿಳಿದರೆ ಜಯಂತಿ ಆಚರಣೆ ಸಾರ್ಥಕ

09:15 PM May 11, 2019 | Lakshmi GovindaRaj |

ಕೆ.ಆರ್‌.ನಗರ: ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ ಅವರ ಚಿಂತನೆಗಳ ಬಗ್ಗೆ ಇಂದಿನ ಯುವ ಪೀಳಿಗೆಯಲ್ಲಿ ಅರಿವು ಮೂಡಿಸಿದರೆ ಆಚರಣೆಗೆ ಅರ್ಥ ಬರಲಿದೆ ಎಂದು ತಹಶೀಲ್ದಾರ್‌ ಎಂ.ಮಂಜುಳಾ ಹೇಳಿದರು.

Advertisement

ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ ಹಾಗೂ ತಾಲೂಕು ಉಪ್ಪಾರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಭಗೀರಥ ಜಯಂತಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದ ಪೂರ್ವಜರಿಗೆ ಮುಕ್ತಿ ನೀಡಿ ಸದ್ಗತಿ ಕೊಡಿಸಲು ದೇವಗಂಗೆಯನ್ನು ಧರೆಗೆ ತಂದವರು ಭಗೀರಥ ಮರ್ಹಗಳು ಎಂದರು.

ಹಲವಾರು ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಳ್ಳುವ ಮೂಲಕ ಕಠಿಣ ಪರಿಶ್ರಮಕ್ಕೆ ಹೆಸರುವಾಸಿಯಾದ ಭಗೀರಥ ಮರ್ಹಗಳ ಜಯಂತಿ ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಬಾರದು. ಮಹನೀಯರ ತತ್ವಾದರ್ಶಗಳನ್ನು ಯುವಜನತೆ ಅಳವಡಿಸಿಕೊಳ್ಳಬೇಕು ಎಂದರು.

ಯಾವುದೇ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅತ್ಯಂತ ಪ್ರಮುಖವಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಇದರಿಂದ ಸಮಾಜದಲ್ಲಿ ಹರಡಿರುವ ಮೌಡ್ಯತೆ ತೊಲಗಿಸಿ ಸಮ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗಲಿದೆ ಎಂದರು.

ನಾವು ಆಚರಿಸುವ ಎಲ್ಲಾ ಮಹನೀಯರ ಜಯಂತಿಗಳು ಒಂದಲ್ಲ ಒಂದು ವಿಶೇಷತೆಯಿಂದ ಕೂಡಿದ್ದು, ಅವರ ಚಿಂತನೆಗಳ ಬಗ್ಗೆ ಒಮ್ಮೆಯಾದರೂ ಯುವ ಜನತೆಯಲ್ಲಿ ಅರಿವು ಮೂಡಿಸುವ ಸಲುವಾಗಿ ಇಂತಹ ಜಯಂತಿಗಳನ್ನು ಆಚರಿಸುತ್ತೇವೆ. ಗಣ್ಯರ ಚಿಂತನೆಗಳು ಮಕ್ಕಳು ತಮ್ಮ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಲು ನೆರವಾಗಲಿವೆ ಎಂದು ತಿಳಿಸಿದರು.

Advertisement

ನಿತ್ಯ ಜೀವನದಲ್ಲಿ ಭಗೀರಥ ಪಯತ್ನ ಮಾಡಬೇಕು ಎಂದು ಹೇಳುತ್ತೇವೆ. ಅದರರ್ಥ ಪ್ರತಿಯೊಬ್ಬರೂ ಸತತ ಪರಿಶ್ರಮವನ್ನು ನಿರಂತರವಾಗಿ ಶ್ರದ್ಧಾ ಭಕ್ತಿಯಿಂದ ಗುರಿ ತಲುಪುವವರೆಗೂ ಪ್ರಯತ್ನಿಸಬೇಕು.ಇದರಿಂದ ನಮ್ಮ ಗುರಿ ಈಡೇರಲಿದೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಬದಲಾವಣೆಗೆ ಮುಂದಾಗೋಣ ಎಂದು ತಿಳಿಸಿದರು.

ತಾಪಂ ಮಾಜಿ ಅಧ್ಯಕ್ಷ ಎಚ್‌.ಟಿ. ಮಂಜುನಾಥ್‌ ಮಾತನಾಡಿ, ರಾಜ್ಯದಲ್ಲಿ 40 ಲಕ್ಷ ಮಂದಿ ಉಪ್ಪಾರ ಸಮುದಾಯದವಿದ್ದು, ಶೈಕ್ಷಣಿಕ ಹಿಂದುಳಿದಿರುವುದರಿಂದ ಕೇವಲ ಓರ್ವ ಶಾಸಕರು ಮಾತ್ರ ಇದ್ದಾರೆ. ಅಲ್ಲದೇ ಬೆರಳೆಣಿಕೆಯಷ್ಟು ತಾಪಂ, ಜಿಪಂ ಸದಸ್ಯರು ಆಯ್ಕೆಯಾಗಿದ್ದಾರೆ. ಆದ್ದರಿಂದ ಸಮಾಜದ ಜನತೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಅಧಿಕಾರ ಪಡೆಯಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ಡಿ.ತಮ್ಮಯ್ಯ, ಕಾರ್ಯದರ್ಶಿ ಟಿ.ರಾಜೇಗೌಡ, ನಗರಾಧ್ಯಕ್ಷ ನಟರಾಜು, ತಿಪ್ಪೂರು ಗ್ರಾಪಂ ಸದಸ್ಯ ರವಿ, ಮುಖಂಡರಾದ ಕೆ.ಎಲ್‌.ಜಯರಾಮ್‌, ಸೋಮಣ್ಣ, ಮಹದೇವ್‌, ಕುಮಾರ್‌, ಗವಿಗೌಡ, ಗಿರೀಶ್‌, ಟಿ.ಎಲ್‌.ಸಂತೋಷ್‌, ರಘು, ಯೋಗೇಶ್‌, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್‌.ಯಧುಗಿರೀಶ್‌, ಪೊಲೀಸ್‌ ವೃತ್ತ ನಿರೀಕ್ಷಕ ಪಿ.ಕೆ.ರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next