ಉಜ್ಜೆ„ನಿ/ಇಂದೋರ್: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಹತ್ತು ದಿನಗಳ ಒಳಗಾಗಿ ರೈತರ ಸಾಲಮನ್ನಾ ಮಾಡುತ್ತೇವೆ. ಇಲ್ಲದೇ ಇದ್ದರೆ ಮುಖ್ಯಮಂತ್ರಿಯನ್ನೇ ಬದಲು ಮಾಡುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಘೋಷಣೆ ಮಾಡಿದ್ದಾರೆ. 2 ದಿನಗಳ ಪ್ರವಾಸಕ್ಕಾಗಿ ಮಧ್ಯ ಪ್ರದೇಶಕ್ಕೆ ಆಗಮಿಸಿರುವ ಅವರು ಉಜ್ಜೆ„ನಿಯ ಮಹಾಕಾಲೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
“ಸುಳ್ಳು ಭರವಸೆ ನೀಡಲು ನಾನು ಇಲ್ಲಿಗೆ ಬಂದಿಲ್ಲ. ಕರ್ನಾಟಕ ಮತ್ತು ಪಂಜಾಬ್‌ನಲ್ಲಿ ರೈತರ ಸಾಲಮನ್ನಾ ಮಾಡುವ ವಾಗ್ಧಾನ ಮಾಡಿ, ಅದನ್ನು ಪೂರೈಸಿದ್ದೇವೆ. ಅದೇ ಮಾದರಿಯ ನಿಲುವನ್ನು ಮಧ್ಯಪ್ರದೇಶದಲ್ಲಿಯೂ ಕೈಗೊಳ್ಳಲಿದ್ದೇವೆ’ ಎಂದಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರಕಾರದ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ಹತ್ತು ದಿನಗಳಲ್ಲಿ ಸಾಲ ಮನ್ನಾ ಜಾರಿ ಮಾಡದೇ ಇದ್ದರೆ, ಅವರನ್ನೇ ಬದಲು ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ಪ್ರಧಾನಿ ತಪ್ಪು: ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ತಪ್ಪು ನಿರ್ಧಾರಗಳಿಂದ ಜಮ್ಮು ಮತ್ತು ಕಾಶ್ಮೀರ ಹೊತ್ತಿ ಉರಿಯುತ್ತಿದೆ. ಸಮಾನ ಹುದ್ದೆ; ಸಮಾನ ಪಿಂಚಣಿಯನ್ನು ಜಾರಿ ಮಾಡಲಾಗಿಲ್ಲ. ಈ ಬಗ್ಗೆ ಪ್ರಧಾನಿ ಸುಳ್ಳು ಹೇಳು ತ್ತಿದ್ದಾರೆ ಎಂದಿದ್ದಾರೆ. ರಫೇಲ್ ಡೀಲ್, ಪಿಎನ್‌ಬಿ ಹಗರಣದ ಬಗ್ಗೆಯೂ ರಾಹುಲ್ ಟೀಕಿಸಿದ್ದಾರೆ.
ನಿಮ್ಮ ಗೋತ್ರವೇನು?: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಹಾಕಾಲೇಶ್ವರ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ ಕ್ರಮನ್ನು ಟೀಕಿಸಿರುವ ಬಿಜೆಪಿ, “ಕಾಂಗ್ರೆಸ್ ಅಧ್ಯಕ್ಷರ ಗೋತ್ರವೇನು?’ ಎಂದು ಪ್ರಶ್ನಿಸಿದೆ. “ಜನಿವಾರ ಧರಿಸಿ ರಾಹುಲ್ ಗಾಂಧಿ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಯಾವ ರೀತಿಯ ಜನಿವಾರ ಧಾರಿ? ಅವರ ಗೋತ್ರವೇನು?’ ಎಂದು ಪಕ್ಷದ ವಕ್ತಾರ ಸಂಬಿತ್ ಪಾತ್ರಾ ಪ್ರಶ್ನಿಸಿದ್ದಾರೆ. ಇದರ ಜತೆಗೆ ರಾಹುಲ್ ಹಿಂದೂ ಧರ್ಮವನ್ನು ತಮಾಷೆಯ ವಸ್ತುವನ್ನಾಗಿ ತಿಳಿದು ಕೊಂಡಿದ್ದಾರೆ. ತಮ್ಮ ವೇಷದ ಮೂಲಕ ಹಿಂದೂಗಳನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದೂ ಪಾತ್ರಾ ಆರೋಪಿಸಿದ್ದಾರೆ.