Advertisement
ಇದು ಕನ್ಯಾಡಿಯ ರಾಕೇಶ್ ಪ್ರಭು ಮನೆಯಲ್ಲಿ ಶನಿವಾರ 12 ಗಂಟೆಗೆ ಕಂಡ ದೃಶ್ಯ. ಹಸುಗೂಸು ಹಿಡಿದ ತಂಗಿ. ವಯಸ್ಸಾದ ತಾಯಿ. ಮನೆಯವರ ದುಃಖಕ್ಕೆ ಅಕ್ಷರಗಳೇ ಇಲ್ಲ. ಯಾರನ್ನೂ ಯಾರೂ ಮಾತನಾಡಿಸುವಂತಿರಲಿಲ್ಲ. ಮೌನದಿಂದ ದುಃಖವನ್ನು ಸಹಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು.
ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿಯಾಗಿದ್ದ ರಾಮದಾಸ ಪ್ರಭು ಎಂ. ಅವರು 2015 ಅ.12ರಂದು ಅಸೌಖ್ಯದಿಂದ ನಿಧನ ಹೊಂದಿದ್ದರು. ಮೃತರು ಧರ್ಮಸ್ಥಳ, ಬೆಳ್ತಂಗಡಿ, ದಿಲ್ಲಿ, ಬೆಳಗಾವಿ ಸಹಿತ ವಿವಿಧೆಡೆ ಸೇವೆ ಸಲ್ಲಿಸಿದ್ದರು. ಆರ್‌ಎಸ್‌ಎಸ್‌ನ ಮಂಡಲ ಕಾರ್ಯವಾಹ ಆಗಿದ್ದರು. ನಿವೃತ್ತಿ ಹೊಂದಿ ಒಂದೂವರೆ ವರ್ಷದಲ್ಲಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಮನೆ ನಿರ್ವಹಣೆ ಹೊಣೆ ರಾಕೇಶ್ ಮೇಲಿತ್ತು. ತಂಗಿ ರಕ್ಷಾಗೆ 20 ದಿನಗಳ ಹಿಂದಷ್ಟೇ ಹೆರಿಗೆಯಾಗಿತ್ತು. ಮೂರು ದಿನಗಳ ರಜೆ ಇದ್ದ ಕಾರಣ ರಾಕೇಶ್, ತನ್ನ ತಂಗಿ ಹಾಗೂ ಮಗುವನ್ನು ನೋಡಿ ಅಮ್ಮನನ್ನು ಮಾತನಾಡಿಸಲೆಂದು ಬರುತ್ತಿದ್ದರು. ಈ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.
Related Articles
ಐರಾವತ ಬಸ್ ಬೆಂಗಳೂರಿನಿಂದ ಧರ್ಮಸ್ಥಳ ಕಡೆಗೆ ತೆರಳುತಿತ್ತು. ಚಾಲಕನ ನಿಯಂತ್ರಣ ತಪ್ಪಿ ಬಸ್ ತಡೆಗೋಡೆಗೆ ಢಿಕ್ಕಿ ಹೊಡೆದು ಕಮರಿಗೆ ಉರುಳಿ ಬಿತ್ತು. ಬಸ್ ನಜ್ಜುಗುಜ್ಜಾಗಿದೆ. ಇಬ್ಬರು ಚಾಲಕರು, ಗಂಗಾಧರ್, ವೈದ್ಯಕೀಯ ವಿದ್ಯಾರ್ಥಿನಿ ಬೆಳ್ತಂಗಡಿ ಗಂಡಿಬಾಗಿಲಿನ ಡಯಾನಾ, ಸೋನಿಯಾ, ಬಿಜೋ ಜಾರ್ಜ್ ಸಹಿತ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Advertisement
7 ಮಂದಿ ಪೈಕಿ ಮೂವರು ಬೆಳ್ತಂಗಡಿ ತಾ| ನೆರಿಯ ಗ್ರಾಮದ ಗಂಡಿಬಾಗಿಲು ದೇವಗಿರಿ ಪುತ್ತೋಟ್ ಪೊರವಿಲ್ ನಿವಾಸಿಗಳಾದ ಬಿಜೋ (25), ಸೋನಿಯಾ (27), ಡಯಾನಾ (20). ಇವರು ದೇವಗಿರಿ ಚರ್ಚ್‌ನ ವಾರ್ಷಿಕ ಮಹೋತ್ಸವಕ್ಕಾಗಿ ಬರುತ್ತಿದ್ದರು. ಇವರ ಜತೆಗಿದ್ದ ಸೋನಿಯಾ ಅವರ ಪತಿ ವಿನು ತೀವ್ರವಾಗಿ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.