ಬೆಂಗಳೂರು: ತಲೆ ನೋವು ಎಂದು ಬಂದವನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ತಲೆಯ ಚಿಪ್ಪು ತೆಗೆದು ಬಿಸಾಡಿದ್ದಾರೆ ಎಂದು ಆರೋಪಿಸಿ ಮಂಜುನಾಥ್ ಎಂಬುವವರ ತಾಯಿ ರುಕ್ಮಿಣಿ ಎಂಬುವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಂಜುನಾಥ್ ಕೆಲ ವರ್ಷಗಳಿಂದ ವರ್ತೂರಿನಲ್ಲಿ ನೆಲೆಸಿದ್ದು, ಗಾರೆ ಕೆಲಸ ಮಾಡಿಕೊಂಡಿದ್ದಾರೆ.
ಕಳೆದ ವರ್ಷ ಫೆ.2ರಂದು ವೈಟ್‌ಫೀಲ್ಡ್‌ನಲ್ಲಿರುವ ದೊಡ್ಡಮ್ಮನ ಮನೆಗೆ ಹೋಗಿದ್ದ ಮಂಜುನಾಥ್‌ಗೆ ತಲೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಭದ್ರಾವತಿಯಿಂದ ಬಂದ ಮಂಜುನಾಥ್ ತಾಯಿ ಮನೆ ಸಮೀಪದ ವೈದೇಹಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ನೀಡಿದ ವೈದ್ಯರು ಆತನ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಗಾಬರಿಗೊಂಡ ಕುಟುಂಬ ಸಾಲ ಮಾಡಿ ಪುತ್ರನ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ವೈದ್ಯರು ಮಂಜುನಾಥ್ ತಲೆಯ ಒಂದು ಭಾಗದ ಚಿಪ್ಪು ಹೊರಗೆ ತೆಗೆದಿದ್ದಾರೆ. ಕೆಲ ದಿನಗಳ ಬಳಿಕ ವಿಶ್ರಾಂತಿ ಪಡೆದ ಮಂಜುನಾಥ್ ತಾಯಿಯೊಂದಿಗೆ ಭದ್ರಾವತಿಗೆ ತೆರಳಿದ್ದರು. ಐದಾರು ತಿಂಗಳ ಬಳಿಕ ಮಂಜುನಾಥ್‌ಗೆ ಮತ್ತೆ ತಲೆನೋವು ಕಾಣಿಸಿಕೊಂಡಿದೆ.
ಕೂಡಲೇ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದಾಗ ಮಂಜುನಾಥ್ ತಲೆಯಲ್ಲಿ ಚಿಪ್ಪಿಲ್ಲ. ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಚರ್ಮವನ್ನೇ ಹೊಂದಿಸಿ ಹೊಲಿಗೆ ಹಾಕಿದ್ದಾರೆ ಎಂದು ಮಾಹಿತಿ ನೀಡಿದರು. ಇದರಿಂದ ಇನ್ನಷ್ಟು ಗಾಬರಿಗೊಂಡ ತಾಯಿ ರುಕ್ಮಿಣಿ ಜ.26ರಂದು ವೈದೇಹಿ ಆಸ್ಪತ್ರೆಯಲ್ಲಿ ಈ ಕುರಿತು ವಿಚಾರಿಸಿದಾಗ ಅಲ್ಲಿನ ವೈದ್ಯರು ನಿರ್ಲಕ್ಷ್ಯದ ಮಾತುಗಳನ್ನಾಡಿದಲ್ಲದೇ,
ಚಿಪ್ಪನ್ನು ಬಿಸಾಡಿದ್ದೇವೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು. ಈ ಸಂಬಂಧ ಆಸ್ಪತ್ರೆಯ ವೈದ್ಯ ಗುರುಪ್ರಸಾದ್ ಹಾಗೂ ರಾಜೇಶ್ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ವೈಟ್‌ಫೀಲ್ಡ್ ಪೊಲೀಸರು ತಿಳಿಸಿದ್ದಾರೆ.