Advertisement
ಇತಿಹಾಸ ಸೇರಿದ 2018ನೇ ಇಸವಿಯತ್ತ ಒಮ್ಮೆ ತಿರುಗಿ ನೋಡಿದಾಗ ಎದ್ದು ಕಾಣಿಸುವುದು ರೈತರ ಪ್ರತಿಭಟನೆ. ಕಳೆದ ಫೆಬ್ರವರಿಯಲ್ಲಿ ಶುರುವಾದ ಈ ಪ್ರತಿಭಟನೆ ವರ್ಷದುದ್ದಕ್ಕೂ ಮುಂದುವರಿಯಿತು.
Related Articles
Advertisement
ಡಿಸೆಂಬರ್ 2018ರಲ್ಲಿ ಮಹಾರಾಷ್ಟ್ರದ ನಾಸಿಕದ ಈರುಳ್ಳಿ ಬೆಳೆಗಾರ ಸಂಜಯ ಸಾಥೆ, ತನ್ನ 750 ಕಿ.ಗ್ರಾಂ ಈರುಳ್ಳಿ ಫಸಲು ಮಾರಿದಾಗ ಅವರ ಕೈಗೆ ಬಂದದ್ದು ಕೇವಲ 1,064 ರೂಪಾಯಿ! ಹತಾಶರಾದ ಸಾಥೆ ಅದನ್ನು ಪ್ರಧಾನ ಮಂತ್ರಿಯವರಿಗೆ ರವಾನಿಸಿದ್ದು ದೊಡ್ಡ ಸುದ್ದಿಯಾಯಿತು. ಗಮನಿಸಿ: 2010ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಭಾರತಕ್ಕೆ ಭೇಟಿಯಿತ್ತಿದ್ದರು; ಆಗ, ಅವರೊಂದಿಗೆ ಸಂವಾದಕ್ಕಾಗಿ ದೆಹಲಿಯ ಕೃಷಿ ಮಂತ್ರಾಲಯ ಆಯ್ಕೆ ಮಾಡಿದ ಪ್ರಗತಿಶೀಲ ರೈತರಲ್ಲಿ ಈ ಸಂಜಯ ಸಾಥೆ ಒಬ್ಬರು. ತನ್ನ ಪ್ರತಿಭಟನೆಯ ಬಗ್ಗೆ ಅವರ ಒಡಲಾಳದ ಮಾತು ಹೀಗಿದೆ; ನಾಲ್ಕು ತಿಂಗಳ ನನ್ನ ದುಡಿತಕ್ಕೆ ಸಿಕ್ಕಿದ ಅತ್ಯಲ್ಪ ಪ್ರತಿಫಲ ಕಂಡು ಸಂಕಟವಾಯಿತು. ಅದಕ್ಕಾಗಿ 1,064 ರೂಪಾಯಿಗಳನ್ನು ಪ್ರಧಾನ ಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ಕಳಿಸಿದೆ. ಇದು ನನ್ನ ಪ್ರತಿಭಟನೆಯ ಪಾವತಿ ಎಂದು. ಆ ಹಣವನ್ನು ಮನಿಆರ್ಡರ್ ಮಾಡಲಿಕ್ಕಾಗಿ ನನಗೆ ಇನ್ನೂ 54 ರೂಪಾಯಿ ಖರ್ಚಾಯಿತು. ಅವರೊಬ್ಬರೇ ಅಲ್ಲ, ನವೆಂಬರ್, ಡಿಸೆಂಬರ್ 2018ರಲ್ಲಿ ಮಿಜೋರಾಂನಿಂದ ಕರ್ನಾಟಕದವರೆಗೆ ಸಾವಿರಾರು ರೈತರು ತಮ್ಮ ಫಸಲಿನ ಬೆಲೆ ಕುಸಿತದ ವಿರುದ್ಧ ರಸ್ತೆಗಿಳಿದು ಪ್ರತಿಭಟಿಸಿದರು. ತಾವು ಬೆಳೆಸಿದ್ದಕ್ಕೆ ಸೂಕ್ತ ಬೆಲೆ ಬೇಕೆಂಬುದು ಸರಕಾರಕ್ಕೆ ಅವರ ಅಹವಾಲು.
ಆ ಬೆಳೆಗಾರನಿಗೆ ದಕ್ಕಿದ ಈರುಳ್ಳಿಯ ಬೆಲೆಯನ್ನು ಗ್ರಾಹಕ ಪಾವತಿಸುವ ಬೆಲೆಯೊಂದಿಗೆ ಹೋಲಿಸಿರಿ. 2 ಡಿಸೆಂಬರ್ 2018ರಂದು ದಾಖಲಾಗಿರುವ ಈರುಳ್ಳಿಯ ಚಿಲ್ಲರೆ ಮಾರಾಟದ ಬೆಲೆ ಕಿ.ಲೋಗ್ರಾಂಮಿಗೆ ರೂ.25. ಅಂದರೆ, ಸಂಜಯ ಸಾಥೆಗೆ ದಕ್ಕಿದ ಬೆಲೆಯ ಇಪ್ಪತ್ತು ಪಟ್ಟು. ಕೃಷಿ ಉತ್ಪನ್ನಗಳು ಗ್ರಾಹಕನ ಕೈಸೇರುವ ಮುನ್ನ, ಹಲವು ಮಧ್ಯವರ್ತಿಗಳ ಮೂಲಕ ಹಾದು ಹೋಗುತ್ತವೆ ಮತ್ತು ಪ್ರತಿಯೊಬ್ಬ ಮಧ್ಯವರ್ತಿಯೂ ಕೂತಲ್ಲೇ ಲಾಭದ ಕೊಳ್ಳೆ ಹೊಡೆಯುತಾನೆ ಎಂಬುದನ್ನು ಇದು ಸಾಬೀತು ಪಡಿಸುತ್ತದೆ.
ಆದರೆ, ಈ ಹಿನ್ನೆಲೆಯಲ್ಲಿ ಕೇಳಲೇಬೇಕಾದ ಪ್ರಶ್ನೆ: ತಾವು ಬೆಳೆಸಿದ್ದನ್ನು ಮಾರಾಟ ಮಾಡಿ, ರಖಂ (ಸಗಟು) ಬೆಲೆ ಪಡೆಯುವಾಗ ರೈತರು ಲಾಭಗಳಿಸುತ್ತಿದ್ದಾರೆಯೇ? ಲಾಭದ ಮಾತು ಹಾಗಿರಲಿ; ಬೆಳೆ ಬೆಳೆಸಲು ಮಾಡಿದ ಖರ್ಚನ್ನೂ ಫಸಲಿನ ಮಾರಾಟದಿಂದ ರೈತರು ಹಲವಾರು ವರ್ಷಗಳಿಂದ ಹಿಂಪಡೆಯುತ್ತಿಲ್ಲ ಎನ್ನುತ್ತದೆ ಅದೇ ಸಮಿತಿಯ ವರದಿ. ಇದಕ್ಕೆ ಮುಖ್ಯ ಕಾರಣ, ಕೃಷಿಯ ಒಳಸುರಿಗಳಾದ ನೀರಾವರಿ, ವಿದ್ಯುತ್, ಗೊಬ್ಬರಗಳು ಮತ್ತು ಪೀಡೆನಾಶಕಗಳ ವೆಚ್ಚದಲ್ಲಿ ಆಗಿರುವ ಏರಿಕೆ.
ಅದೇನಿದ್ದರೂ, 2008-2009ರಿಂದ ಆಹಾರ ವಸ್ತುಗಳ ಬೆಲೆಗಳಲ್ಲಿ ಆಗಿರುವ ಹೆಚ್ಚಳ ನಿಚ್ಚಳವಾಗಿದೆ. ಅಂದರೆ, ಗ್ರಾಹಕರಾಗಿ ನಾವು ಹೆಚ್ಚೆಚ್ಚು ಬೆಲೆ ಪಾವತಿಸುತ್ತಿದ್ದರೂ ರೈತರಿಗೆ ಅದರಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ. ಆ ಸಮಿತಿಯ ವರದಿಯ ಅನುಸಾರ, 2002-2003ರಿಂದ 201-213 ಅವಧಿಯಲ್ಲಿ, ಕೃಷಿ ಕುಟುಂಬಗಳ ಆದಾಯದ ವಾರ್ಷಿಕ ಹೆಚ್ಚಳ ಕೇವಲ ಶೇ.3.6.
ಕೃಷಿ ಕುಟುಂಬಗಳ ಶೋಚನೀಯ ಆದಾಯದ ಕಾರಣ, ಈ ಅಂಕಿ ಸಂಖ್ಯೆಗಳಲ್ಲಿ ಅಡಗಿದೆ. ಸರಕಾರದ ಲೆಕ್ಕಾಚಾರದಲ್ಲಿ, 2015-16ರಲ್ಲಿ ಕೃಷಿ ಕುಟುಂಬದ ವಾರ್ಷಿಕ ಆದಾಯ ರೂ.96,703. (ಪ್ರತಿಯೊಂದು ಕುಟುಂಬದ ಸದಸ್ಯರ ಸಂಖ್ಯೆ ಐದು ಎಂಬುದು ಲೆಕ್ಕಾಚಾರಗಳಿಗೆ ಆಧಾರ). ಆದರೆ, ಎರಡು ಹೆಕ್ಟೇರ್ ಅಥವಾ ಅದಕ್ಕಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳ ಆದಾಯ ಇನ್ನೂ ಕಡಿಮೆ. ಅದು ವರ್ಷಕ್ಕೆ ರೂ.79,779 ಅಥವಾ ಐದು ಸದಸ್ಯರ ಕುಟುಂಬಕ್ಕೆ ದಿನಕ್ಕೆ ರೂ.221. ಇಂತಹ ಕುಟುಂಬಗಳೇ ನಮ್ಮ ದೇಶದ ಒಟ್ಟು ಜಮೀನಿನ ಶೇ.82 ಹೊಂದಿವೆ. ಈ ಕುಟುಂಬಗಳ ಅಲ್ಪ ಆದಾಯದಲ್ಲಿ, ಕೃಷಿ ಆದಾಯ ಸರಾಸರಿ ಶೇ.41 ಎಂದು ಅಂದಾಜಿಸಲಾಗಿದೆ. ಅಂತಿಮವಾಗಿ, ಈ ಬಡ ಕುಟುಂಬಗಳು ಕೃಷಿಯಿಂದ ಪಡೆಯುವ ಆದಾಯ ದಿನಕ್ಕೆ ರೂ.90.
ಕೃಷಿಕರು ತಮ್ಮ ಫಸಲಿನಿಂದ ಲಾಭ ಗಳಿಸುತ್ತಿಲ್ಲ ಎಂಬುದು ಕಠೊರ ಸತ್ಯ. 2004-14ರ ಅವಧಿಯಲ್ಲಿ 23 ಬೆಳೆಗಳ ಕೃಷಿ ವೆಚ್ಚ ಮತ್ತು ಫಸಲಿನ ಆದಾಯದ ಸರ್ವೆ ನಡೆಸಲಾಯಿತು. ಅದರ ಪ್ರಕಾರ, ಕೆಲವೇ ಬೆಳೆಗಳ ಕೃಷಿಯಿಂದ ರೈತರಿಗೆ ಲಾಭ; ಉಳಿದೆಲ್ಲ ಬೆಳೆಗಳ ಕೃಷಿಯಿಂದ ನಷ್ಟ! ಉದಾಹರಣೆಗೆ, ಮುಖ್ಯ ಆಹಾರ ಬೆಳೆಗಳಾದ ಭತ್ತ ಮತ್ತು ಗೋಧಿ. ಇವೆರಡರ ಬೇಸಾಯದಿಂದಲೂ ತಮಗೆ ನಷ್ಟ ಎನ್ನುತ್ತಾರೆ ಹಲವು ರಾಜ್ಯಗಳ ರೈತರು.
ಇವೆಲ್ಲದರ ಜೊತೆಗೆ, ರೈತರಿಗೆ ತಾವು ಬೆಳೆದ ಫಸಲನ್ನೆಲ್ಲ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನೂ ಅದೇ ಸಮಿತಿಯ ವರದಿ ದಾಖಲಿಸಿದೆ. ಈ ಮಾರಲಾಗದ ಫಸಲಿನ ಬೆಲೆಯೇ ವರ್ಷಕ್ಕೆ ರೂ.63,000 ಕೋಟಿ ಎಂದು ಆ ಸಮಿತಿ ಅಂದಾಜಿಸಿದೆ. ಇಷ್ಟು ಬೃಹತ್ ಮೊತ್ತದ ಫಸಲು ಉತ್ಪಾದಿಸಲು ರೈತರು ಮಾಡಿದ ವೆಚ್ಚವೂ ಅವರಿಗೆ ದಕ್ಕುತ್ತಿಲ್ಲ.
ಇವೆಲ್ಲವನ್ನೂ ಪರಿಶೀಲಿಸಿದಾಗ, ಅನ್ನದಾತರ ಹತಾಶೆ ಮತ್ತು ಅಸಹಾಯಕತೆ ಯಾಕೆ ಆಕ್ರೋಶಕ್ಕೆ ಕಾರಣವಾಗಿದೆ ಎಂಬುದು ಮನದಟ್ಟಾಗುತ್ತದೆ. ಅನ್ನದಾತರ ಕೈ ಕೆಸರಾದರೆ ಬಾಯಿ ಮೊಸರಾಗುತ್ತಿಲ್ಲ.
– ಅಡ್ಡೂರು ಕೃಷ್ಣ ರಾವ್