Advertisement

ಅನುದಾನ ಬಳಸದಿದ್ದರೆ ಜೈಲು?

06:00 AM Aug 01, 2018 | Team Udayavani |

ಬೆಂಗಳೂರು: ಉದ್ದೇಶಪೂರ್ವಕವಾಗಿ ಅನುದಾನ ಬಳಕೆಗೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ಇನ್ಮುಂದೆ ಜೈಲು ಶಿಕ್ಷೆ ತಪ್ಪಿದ್ದಲ್ಲ! ಪರಿಶಿಷ್ಟ ಜಾತಿಗಳ ಉಪ ಯೋಜನೆ ಹಾಗೂ ಪಂಗಡದ ಉಪ ಯೋಜನೆ (ಯೋಜನೆ, ಹಂಚಿಕೆ ಮತ್ತು ಬಳಕೆ) ಕಾಯ್ದೆಯಡಿ ಒಟ್ಟಾರೆ ಬಜೆಟ್‌ನ ಯೋಜನಾ ಮೊತ್ತದ ಶೇಕಡಾ 24.1ರಷ್ಟು ಅನುದಾನ ಬಳಕೆ ಸಂಬಂಧ ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ಇದು ಅನ್ವಯವಾಗಲಿದೆ. ಶಿಸ್ತು ಕ್ರಮ ಹಾಗೂ ಜೈಲು ಶಿಕ್ಷೆ ವಿಧಿಸುವ ಕಾಯ್ದೆಗೆ ನಾಲ್ಕೂವರೆ ವರ್ಷಗಳ‌ ಬಳಿಕ ನಿಯಮಾವಳಿ ರೂಪಿಸಲಾಗಿದೆ.

Advertisement

2013ರಲ್ಲಿ ಜಾರಿಯಾದ ಕಾಯ್ದೆಯಲ್ಲಿ ಜೈಲುಶಿಕ್ಷೆ ವಿಧಿಸುವ ಬಗ್ಗೆ ಉಲ್ಲೇಖಿಸಲಾಗಿತ್ತು. ಆದರೆ ಸೂಕ್ತ ನಿಯಮಾವಳಿ ರೂಪಿಸಿರಲಿಲ್ಲ. ಇದರಿಂದಾಗಿ ಬಜೆಟ್‌ನಲ್ಲಿ ಕಾಯ್ದಿರಿಸಿದ ಅನುದಾನ ಸಮರ್ಪ ಕವಾಗಿ ಬಳಕೆಯಾಗುತ್ತಿಲ್ಲ ಎಂಬ ಆರೋಪವಿತ್ತು. ಪ್ರತಿ ವರ್ಷದ ಬಜೆಟ್‌ನಲ್ಲಿ ಎಸ್‌ಸಿಪಿ- ಟಿಎಸ್‌ಪಿ ಯೋಜನೆಗೆ ಕಾಯ್ದಿರಿಸುವ ಅನುದಾ ನವನ್ನು ಆಯಾ ವರ್ಷದಲ್ಲೇ ಬಳಸಬೇಕು. ಒಂದೊಮ್ಮೆ ಆ ವರ್ಷದಲ್ಲಿ ಬಳಸಲು ಸಾಧ್ಯವಾಗದಿದ್ದರೆ ಮುಂದಿನ ಹಣಕಾಸು ವರ್ಷಕ್ಕೆ ವರ್ಗಾಯಿಸಬೇಕೆಂಬ ನಿಯಮವಿದೆ. ಜತೆಗೆ ಯಾವುದೇ ಇಲಾಖೆಯ ಅಧಿಕಾರಿ, ನೌಕರರು ಉದ್ದೇಶಪೂರ್ವಕವಾಗಿ ಅನುದಾನ ಬಳಕೆಗೆ ನಿರ್ಲಕ್ಷ é ತೋರಿದರೆ ಅವರಿಗೆ ಗರಿಷ್ಠ ಆರು ತಿಂಗಳವರೆಗೆ ವಿಸ್ತರಿಸಬಹುದಾದ ಜೈಲುಶಿಕ್ಷೆಗೂ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ, ಪ್ರಶಂಸಾರ್ಹ ಕಾರ್ಯ ನಿರ್ವಹಣೆಗೆ ಪ್ರೋತ್ಸಾಹ ಧನ ನೀಡಲು ಕಾರ್ಯಕ್ರಮ ರೂಪಿಸಬೇಕೆಂದು ಉಲ್ಲೇಖೀಸಲಾಗಿತ್ತು.

ನಿಯಮಾವಳಿ ಮುಖ್ಯಾಂಶ
ಯಾವುದೇ ಇಲಾಖೆಯ ನಿರ್ದಿಷ್ಟ ಹುದ್ದೆಯ ಲ್ಲಿರುವ ಅಧಿಕಾರಿ ಅನುದಾನ ಬಳಕೆಗೆ ಆಸಕ್ತಿ ತೋರದಿರುವ ಬಗ್ಗೆ ಸಾರ್ವಜನಿಕರು ಹಾಗೂ ಇತರೆ ಯಾರಾದರೂ ಮಾಹಿತಿ ದೂರು ನೀಡಬಹುದು. ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯ ನೋಡಲ್‌ ಇಲಾಖೆ ಕಾಯ್ದೆ ಪ್ರಕಾರ ಕರ್ತವ್ಯ ನಿರ್ವಹಣೆ, ಅನುದಾನ ಬಳಕೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವ ಅಧಿಕಾರಿ, ನೌಕರರ ವಿರುದ್ಧ ಶಿಸ್ತು ಕ್ರಮ ಜರಗಿಸಲು ಅವಕಾಶ ಕಲ್ಪಿಸಲಾಗಿದೆ.

ದೂರು ಸ್ಪಷ್ಟವಾಗಿರಬೇಕು. ನೋಡಲ್‌ ಇಲಾಖೆಯು ದೂರಿನ ವಾಸ್ತವಾಂಶಗಳ ಬಗ್ಗೆ ವರದಿ ನೀಡುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸೂಚಿಸಬಹುದು. ವಿಚಾರಣ ಪ್ರಾಧಿಕಾರವು 90 ದಿನದೊಳಗೆ ವಿಚಾರಣೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ವರದಿಯ ಆಧಾರದ ಮೇಲೆ ನೋಡಲ್‌ ಏಜೆನ್ಸಿಯ ಪೂರ್ವಾನುಮತಿ ಪಡೆದು ಸೂಕ್ತ ಕ್ರಮ ಜರಗಿಸಬಹುದು. ಕರ್ತವ್ಯ ಲೋಪ ಗಂಭೀರ ಸ್ವರೂಪದ್ದಾಗಿದ್ದರೆ ಪೊಲೀಸ್‌ ಠಾಣೆ ಯಲ್ಲೂ ಪ್ರಕರಣ ದಾಖಲಿಸಬಹುದು.

ಎಸ್‌ಸಿಪಿ- ಟಿಎಸ್‌ಪಿ ಕಾಯ್ದೆ
ರಾಜ್ಯದಲ್ಲಿನ ಎಸ್‌ಸಿ-ಎಸ್‌ಟಿ ಸಮುದಾಯದ ಬಲವರ್ಧನೆಗಾಗಿ ಎಸ್‌ಸಿಪಿ- ಟಿಎಸ್‌ಪಿ ಕಾಯ್ದೆ 2013ರಲ್ಲಿ ಜಾರಿಯಾಯಿತು. ಅದರಂತೆ ಈ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಶೇ.24.1ರಷ್ಟು ಹಣ ಮೀಸಲಿಡುವುದು. ಅದರಂತೆ ಕಳೆದ ಐದು ವರ್ಷಗಳಲ್ಲಿ ಸುಮಾರು 88,000 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಶೇ.92ರಷ್ಟು ಬಳಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಅನುದಾನದಲ್ಲಿ ಸ್ವಲ್ಪ ಮೊತ್ತ ಸಮಾಜ ಕಲ್ಯಾಣ ಇಲಾಖೆಗೆ ಹಂಚಿಕೆಯಾಗಲಿದ್ದು, ಉಳಿದದ್ದು ಆಯಾ ಇಲಾಖೆ ವತಿಯಿಂದಲೇ ಅನುಷ್ಠಾನವಾಗಲಿದೆ.

Advertisement

ಎಸ್‌ಸಿಪಿ- ಟಿಎಸ್‌ಪಿ ಕಾಯ್ದೆಯಡಿ ಕಾಯ್ದಿರಿಸಿದ ಅನುದಾನ ಕೆಲ ಇಲಾಖೆಗಳಲ್ಲಿ  ಕಾಲಮಿತಿಯೊಳಗೆ ಬಳಸದೆ ನಿರ್ಲಕ್ಷಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಅಂಥವರ ವಿರುದ್ಧ ಕ್ರಮಕ್ಕೆ ನಿಯಮಾವಳಿ ರಚಿಸಿ ಪ್ರಕಟಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದು ನಮ್ಮ ಉದ್ದೇಶವಲ್ಲ.
ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ

ಎಂ. ಕೀರ್ತಿ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next