Advertisement

ಅನುದಾನ ಸದ್ಬಳಕೆಯಾದರೆ ಅಭಿವೃದ್ಧಿ

10:34 AM Jan 10, 2019 | |

ಆಲಮಟ್ಟಿ: ಸರ್ಕಾರದ ಯೋಜನೆಗಳು ಸದ್ಬಳಕೆಯಾಗುವಲ್ಲಿ ಗ್ರಾಮ ಪಂಚಾಯತ್‌ ಆಡಳಿತ ವ್ಯವಸ್ಥೆ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವುದು ಮುಖ್ಯವಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು.

Advertisement

ಬೇನಾಳ ಆರ್‌ಸಿಯ ಗ್ರಾಪಂ ನೂತನ ಕಟ್ಟಡ, ದ್ವಾರ ಬಾಗಿಲು, ಕಾಂಪೌಂಡ್‌, ಕಸ ವಿಲೇವಾರಿ ವಾಹನ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಗಳು ಗ್ರಾಮೀಣ ಪ್ರದೇಶ ಅಭಿವೃದ್ಧಿಗೆ ಹಲವಾರು ಯೋಜನೆ ಅನುಷ್ಠಾನಗೊಳಿಸಲು ಶಾಸಕರ ನಿಧಿ ಹಾಗೂ ವಿವಿಧ ಇಲಾಖೆ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಗ್ರಾಮಗಳ ಸಮಸ್ಯೆಗಳು ಸಂಬಂಧಿಸಿದ ಶಾಸಕರಿಗಿಂತ ಗ್ರಾಪಂ ಸದಸ್ಯರುಗಳಿಗೆ ಹೆಚ್ಚಾಗಿ ಗೊತ್ತಿರುತ್ತವೆ. ಅವುಗಳು ಸದ್ಬಳಕೆಯಾಗುವಲ್ಲಿ ಗ್ರಾಪಂ ಪಾತ್ರ ಮಹತ್ವದ್ದಾಗಿದೆ.

ಬಸವನಬಾಗೇವಾಡಿ ಮತಕ್ಷೇತ್ರದ ಶೇ. 95 ಹಳ್ಳಿಗಳಿಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಪೂರೈಕೆಯ ಶಾಶ್ವತ ವ್ಯವಸ್ಥೆ ಯೋಜನೆ, 12 ಬಾಂದಾರ್‌ 14 ಕೆರೆಗಳನ್ನು ಈ ಬಾರಿ ಕೃಷ್ಣಾ ನದಿಯಿಂದ ಭರ್ತಿ ಮಾಡಲಾಗಿದ್ದು, ಇದರಿಂದ ಮುಂದಿನ ಜೂನ್‌ವರೆಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ, ಇದರಿಂದ ಅಂತರ್ಜಲ ಮಟ್ಟವೂ ಹೆಚ್ಚಳವಾಗಲಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು, ಚರಂಡಿ ನೀರು ರಸ್ತೆಗೆ ಬರದಂತೆ ಚರಂಡಿ ವ್ಯವಸ್ಥೆ, ವೈಯಕ್ತಿಕ ಶೌಚಾಲಯ ಹಾಗೂ ಗುಂಪು ಶೌಚಾಲಯಗಳು, ಕಸ ವಿಲೇವಾರಿ, ಕಸ ಸಂಸ್ಕರಣ ಘಟಕ ಹೀಗೆ ಪ್ರತಿಯೊಬ್ಬ ಸದಸ್ಯರು ಜನರಲ್ಲಿ ಅರಿವು ಮೂಡಿಸಬೇಕು. ಅಲ್ಲದೇ ಕಸವನ್ನು ಒಂದೆಡೆ ಗುಡ್ಡೆ ಹಾಕುವುದರಿಂದಲೂ ಗಬ್ಬು ವಾಸನೆಯಿಂದ ಹಲವಾರು ರೋಗಗಳು ಹರಡುತ್ತವೆ. ಆದ್ದರಿಂದ ಕಸವನ್ನು ಸಂಸ್ಕರಣಗೊಳಿಸಿ ರೈತರಿಗೆ ನೀಡುವುದರಿಂದ ರೈತರಿಗೆ ಉತ್ತಮ ಗೊಬ್ಬರ ಸಿಕ್ಕಂತಾಗುತ್ತದೆ ಮತ್ತು ಗ್ರಾಪಂಗೆ ಆದಾಯವೂ ಬರಲಿದೆ ಎಂದು ಹೇಳಿದರು.

Advertisement

ವಿಜಯಪುರ ನಗರದಲ್ಲಿ ಹೃದಯ, ಕ್ಯಾನ್ಸರ್‌, ಟ್ರೋಮಾ ಚಿಕಿತ್ಸೆಗೆ ಸೂಪರ್‌ಸ್ಪೆಶಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ 88 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು ಕಾಮಗಾರಿಯೂ ಆರಂಭವಾಗಿದೆ. ಬೇನಾಳದಲ್ಲಿಯೂ ಹೆಲ್ತ್‌ ಅವೇರನೆಸ್‌ ಸೆಂಟರ್‌ ಆರಂಭಿಸಿ ಇಲ್ಲಿಯ ಆಸ್ಪತ್ರೆಯ ಕೊರತೆ ನೀಗಿಸಲಾಗುವುದು. ಬೇನಾಳ ಗ್ರಾಮದಲ್ಲಿ ಕಸ ವಿಲೇವಾರಿ ವಾಹನ ಖರೀದಿಸಿ ಕಾರ್ಯಗತಗೊಳಿಸಿದ್ದು ಶ್ಲಾಘನೀಯ ಎಂದರು.

ಯೋಜನಾ ನಿರಾಶ್ರಿತರ ಮೀಸಲಾತಿ 2020ಕ್ಕೆ ಮುಕ್ತಾಯವಾಗಲಿದೆ ಎಂದು ಸಂತ್ರಸ್ತರು ಆತಂಕಗೊಂಡಿದ್ದು ಇದನ್ನು 2050ರವರೆಗೆ ಮುಂದುವರಿಸಲು ಚಿಂತನೆಯಿದೆ. ಇಡಿ ರಾಜ್ಯದಲ್ಲಿಯೇ ಹೆಚ್ಚು ಕರದ ಆದಾಯ ಹೊಂದಿರುವ ಗ್ರಾಪಂ ಬೆಂಗಳೂರಿನ ಬಳಿಯ ದೇವನಹಳ್ಳಿಯಾದರೆ, ಎರಡನೇ ಸ್ಥಾನ ಸಮೀಪದ ಕೂಡಗಿ ಗ್ರಾಮ ಹೊಂದಿರುವುದು ವಿಶೇಷವಾಗಿದೆ. ವಿಜಯಪುರದಲ್ಲಿ ತಾಯಿ ಮಕ್ಕಳ (ಎಂಸಿಎಚ್) ಆಸ್ಪತ್ರೆ ಆರಂಭಿಸಿದ 90 ದಿನದಲ್ಲಿ 1050ಕ್ಕೂ ಹೆಚ್ಚು ಸಹಜ ಹಾಗೂ ಸೀಸರಿನ್‌ ಹೆರಿಗೆ ಆಗಿರುವುದು ದಾಖಲೆಯಾಗಿದೆ. ಇದರಿಂದ ಖಾಸಗಿ ಆಸ್ಪತ್ರೆಗಳಿಗೆ ಸಾವಿರಾರು ರೂ. ಖರ್ಚು ಮಾಡುವ ಪ್ರಮೇಯ ತಪ್ಪಿದಂತಾಗಿದೆ. ಸರ್ಕಾರಿ ಆಸ್ಪತ್ರೆಯತ್ತ ಜನತೆ ಹೆಚ್ಚಿನ ನಂಬಿಕೆ, ವಿಶ್ವಾಸವಿಡುತ್ತಿದ್ದಾರೆ. ಚಿಕಿತ್ಸೆಗೆ ಹೆಚ್ಚು ಜನ ಸರ್ಕಾರಿ ಆಸ್ಪತ್ರೆಯತ್ತ ಹೆಜ್ಜೆ ಇಡುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರ ವಸತಿ ಯೋಜನೆಯಲ್ಲಿ ಪ್ರತಿ ಬಾರಿಯೂ ನಿವೇಶನ ರಹಿತರಿಗೆ ಹಾಗೂ ನಿವೇಶನವುಳ್ಳವರಿಗೆ ಸೂರು ಒದಗಿಸಲು ಫಲಾನುಭವಿಗಳನ್ನು ಗುರುತಿಸಲು ಗ್ರಾಪಂಗಳಿಗೆ ನೀಡಲಾಗಿದೆ. ಆದರೆ ಕೆಲವು ಸದಸ್ಯರು ನಿಯಮ ಮೀರಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಕಡುಬಡವರು ಗುಡಿಸಲಿನಲ್ಲಿಯೇ ಇರುವಂತಾಗುತ್ತದೆ. ಆದ್ದರಿಂದ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಇದಕ್ಕೂ ಮೊದಲು ಸಚಿವ ಶಿವಾನಂದ ಪಾಟೀಲರಿಗೆ ಬೇನಾಳ ಗ್ರಾಮಸ್ಥರು ಬೆಳ್ಳಿ ಗಧೆ ನೀಡಿ ಸನ್ಮಾನಿಸಿದರು. ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಉದಂಡಿ ಅಧ್ಯಕ್ಷತೆ ವಹಿಸಿದ್ದರು. ಮಹಿಬೂಬ್‌ ಬಿಳೇಕುದರಿ, ಗುರಪ್ಪ ಚಲವಾದಿ, ಸೈದಮ್ಮ ಬೆಣ್ಣಿ, ಲಕ್ಷ್ಮಣ ಚನಗೊಂಡ, ಗ್ಯಾನಪ್ಪಗೌಡ ಬಿರಾದಾರ, ಎಸ್‌.ಆರ್‌. ವಿಭೂತಿ, ರಂಗನಗೌಡ ಬಿರಾದಾರ, ಶಾಂತಪ್ಪ ಮನಗೂಳಿ, ಬುಡ್ಡೆಸಾಬ್‌ ಬಾಗವಾನ, ಸಿದ್ದು ಗೊಳಸಂಗಿ, ಜಿ.ಸಿ. ಮುತ್ತಲದಿನ್ನಿ, ತಾಪಂ ಇಒ ಚಂದ್ರಕಾಂತ ಮ್ಯಾಗೇರಿ, ಎಸ್‌.ಜಿ. ಭೋಸ್ಲೆ, ಎನ್‌. ಕುಮಾರ, ಎಸ್‌.ಎಸ್‌. ಪೂಜಾರಿ, ಬಸವರಾಜ ಬೀಸನಕೊಪ್ಪ ಇದ್ದರು.

ಎಂ.ಡಿ. ಫತ್ತೆಪುರ ಸ್ವಾಗತಿಸಿದರು. ಮಹೇಶ ಗಾಳಪ್ಪಗೋಳ ನಿರೂಪಿಸಿದರು. ಬಿ.ಎಚ್. ಗಣಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next