Advertisement

ಸರ್ಕಾರ ಜಾಗ ಒತ್ತುವರಿ ಮಾಡಿದರೆ ಜೈಲು: ಎಚ್ಚರಿಕೆ

09:07 PM Jun 17, 2019 | Lakshmi GovindaRaj |

ಚಿಂತಾಮಣಿ: ಸರ್ಕಾರಿ ಭೂಮಿ ಒತ್ತುವರಿ ಮಾಡಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಅಂತಹವರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಹಶೀಲ್ದಾರ್‌ ವಿಶ್ವನಾಥ್‌ ಎಚ್ಚರಿಕೆ ನೀಡಿದರು.

Advertisement

ಹಲವು ವರ್ಷಗಳಿಂದ ಕೈವಾರ ಗ್ರಾಮದಿಂದ ಕೊಂಗನಹಳ್ಳಿಗೆ ತೆರಳುವ ರಸ್ತೆ 15 ಸರ್ವೆ ನಂಬರ್‌ಗಳಲ್ಲಿ ಹಾದು ಹೋಗುವ ಸುಮಾರು ಮೂರು ಕಿ.ಮೀ ರಸ್ತೆಯನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದರು. ಹೀಗಾಗಿ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸೋಮವಾರ ಒತ್ತುವರಿ ರಸ್ತೆ ತೆರವುಗೊಳಿಸಿ ಮಾತನಾಡಿದರು.

ಸರ್ಕಾರಿ ಭೂಮಿಯನ್ನು ಯಾರೇ ಅತಿಕ್ರಮಿಸಿಕೊಂಡರೂ ಅವರಿಗೆ ಕಾನೂನಿನಡಿ ಶಿಕ್ಷೆ ತಪ್ಪಿದ್ದಲ್ಲ ಎಂದು ಹೇಳಿದರು. ಬರಪೀಡಿತ ಬಯಲು ಸೀಮೆಯಲ್ಲಿ ಜನರು ಜೀವಿಸಲು ನೀರು ಆಹಾರ ಎಷ್ಟು ಮುಖ್ಯವೋ ಸರ್ಕಾರಿ ಸ್ವತ್ತುಗಳಾದ ರಸ್ತೆ, ಕೆರೆಕುಂಟೆ, ರಾಜಕಾಲುವೆಗಳ ರಕ್ಷಣೆಯೂ ಅಷ್ಟೇ ಮುಖ್ಯ ಎಂದರು.

ಇಂದು ರಸ್ತೆಗಳು ರಾಜಕಾಲುವೆಗಳನ್ನು ಕಾಪಾಡಿಕೊಂಡು ಉಳಿಸಿಕೊಂಡರೆ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನ ಪರಿತಪ್ಪಿಸಬೇಕಾಗುತ್ತೆಂದು ತಿಳಿಸಿದರು.

ಜಿಲ್ಲಾಧಿಕಾರಿ ಆದೇಶದಂತೆ ಕಾರ್ಯ: ಇನ್ನೂ ಕೈವಾರ ಗ್ರಾಮದ 15 ಸರ್ವೆ ನಂಬರ್‌ಗಳಲ್ಲಿ ಒತ್ತುವರಿಯಾಗಿದ್ದ 3 ಕಿ.ಮೀ. ಉದ್ದದ ರಸ್ತೆಯನ್ನು ಕಳೆದ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಅವರು ಭೇಟಿ ನೀಡಿ ಪರಿಶೀಲಿಸಿದ್ದರು. ಈ ವೇಳೆ ಒತ್ತುವರಿ ಸಾಬೀತಾದ ಹಿನ್ನೆಲೆಯಲ್ಲಿ ತೆರವಿಗೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು ಎಂದು ಹೇಳಿದರು.

Advertisement

ಯಾವುದೇ ಮಾಹಿತಿ ನೀಡದೆ ತೆರವು: ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೆ ಅದರ ಬಗ್ಗೆ ತನಿಖೆ ಮಾಡಿ ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್‌ ನೀಡಿ ನಂತರ ತೆರವುಗೊಳಿಸಬೇಕು. ಆದರೆ, ಚಿಂತಾಮಣಿ ಕಂದಾಯ ಇಲಾಖೆ ಅಧಿಕಾರಿಗಳು ಏಕಾಏಕಿ ಬಿತ್ತನೆ ಮಾಡಿರುವ ಜಮೀನು ಸರ್ಕಾರಿ ರಸ್ತೆ ಎಂದು ಹೇಳಿ ರೇಷ್ಮೆ ತೋಟಗಳ ಮಧ್ಯೆ ಜೆಸಿಬಿ ಯಂತ್ರಗಳ ಮೂಲಕ ಒತ್ತುವರಿ ತೆರವುಗೊಳಿಸಿರುವುದು ನೋವಿನ ಸಂಗತಿ ಎಂದು ನಾಗರಿಕರು ತಿಳಿಸಿದ್ದಾರೆ.

ವಿರೋಧ: ನೋಟಿಸ್‌ ನೀಡದೆ ತೋಟಗಳಲ್ಲಿ ಬೆಳೆದು ನಿಂತ ಬೆಳೆಯನ್ನು ಒತ್ತುವರಿ ಹೆಸರಲ್ಲಿ ನಾಶ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳಿಯರು ಪ್ರಶ್ನಿಸಿ ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದರು. ನಂತರ ದಂಡಾಧಿಕಾರಿಗಳು ಖುದ್ದು ಮುಂದೆ ನಿಂತು ಒತ್ತುವರಿ ತೆರವುಗೊಳಿಸಿದರು.

ಈ ವೇಳೆ ಕೈವಾರ ಹೋಬಳಿ ಉಪತಹಶೀಲ್ದಾರ್‌ ಮೋಹನ್‌ ಕುಮಾರ್‌, ಕಂದಾಯ ವೃತ್ತ ನಿರೀಕ್ಷಕ ಅಂಬರೀಶ್‌, ಕೈವಾರ ಗ್ರಾಮಾಂತರ ಠಾಣೆ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ವರ್ಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next