ಕೆ.ಆರ್.ಪೇಟೆ: ತಾಲೂಕಿನ ಒಬ್ಬ ಸಾಮಾನ್ಯ ವ್ಯಕ್ತಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಅನುದಾನ ಬಿಡುಗಡೆ ಮಾಡಿಸಿಕೊಂಡು ತಾಲೂಕನ್ನು ಅಭಿವೃದ್ಧಿ ಪಡಿಸಿದರೆ, ಆ ಕ್ಷೇತ್ರದ ಶಾಸಕ ಸಂತೋಷ ಪಡಬೇಕೆ ಹೊರತು ಅಸೂಯೆ ಪಡಬಾರದು ಎಂದು ದೇವೆಗೌಡರ ಮಾನಸ ಪುತ್ರ ಎಂದೆ ಕರೆಯಲ್ಪಡುವ ಜಿಪಂ ಸದಸ್ಯ ಬಿ.ಎಲ್.ದೇವರಾಜು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪತ್ರ ಬರೆದು ಶ್ರಮವಹಿಸಿ ಅನುದಾನ ಬಿಡುಗಡೆ ಮಾಡಿಸಿರುವ ಕುರಿತು ದಾಖಲೆ ಬಿಡುಗಡೆ ಮಾಡಿ, ಶಾಸಕ ನಾರಾಯಣಗೌಡರು, ದೇವರಾಜು ಬೆಂಬಲಿಗರು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಲಿಲ್ಲ ಎಂದು ಹೇಳುತ್ತಿರುವುದಕ್ಕೆ ಹಾಗೂ ಅಕ್ಕಿಹೆಬ್ಟಾಳು ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದರ ವಿರುದ್ಧ ಶಾಸಕರ ಅಸಮಧಾನಕ್ಕೆ ಪ್ರತಿಕ್ರಿಯಿಸಿದರು.
ತ್ರಿವೇಣ ಸಂಗಮದಲ್ಲಿ ಕುಂಭಮೇಳ ನಡೆಸುವ ಸಲುವಾಗಿ ರಸ್ತೆ ಸೇರಿದಂತೆ ಇತರೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ನಾನು ಸಚಿವ ಎಚ್.ಡಿ.ರೇವಣ್ಣ ಅವರಿಗೆ ಮನವಿ ಸಲ್ಲಿಸಿದ್ದೆ. ಅದರಂತೆ ಸಚಿವರು ಅಧಿಕಾರಿಗಳಿಂದ ವರದಿ ತರಿಸಿಕೊಂಡು ಅವಶ್ಯವಿರುವೆಡೆ ಅಭಿವೃದ್ಧಿಗಾಗಿ 5 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ.
ನಾರಾಯಣಗೌಡರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟು ಅನುದಾನ ಬಿಡುಗಡೆ ಮಾಡಿಸಿಕೊಂಡು ತಾಲೂಕು ಅಭಿವೃದ್ಧಿಪಡಿಸಲಿ. ಅದನ್ನು ಬಿಟ್ಟು ತಾಲೂಕಿನ ಅಭಿವೃದ್ಧಿಗೆ ದುಡಿಯುತ್ತಿರುವವರ ವಿರುದ್ಧ ಮಾತನಾಡಬಾರದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಬಸ್‌ಕೃಷ್ಣೇಗೌಡ, ಜಿಪಂ ಸದಸ್ಯ ರಾಮದಾಸು, ವಕೀಲ ಸುರೇಶ್, ಕಂಠಿಕುಮಾರ್, ಹರೀಶ್ ಮತ್ತಿರರಿದ್ದರು.
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸಲು ಪಂಥಾಹ್ವಾನ: ಬಿ.ಎಲ್.ದೇವರಾಜ್‌ಗೆ ಹತ್ತು ವೋಟು ಪಡೆಯುವ ಸಾಮರ್ಥ್ಯ ಇಲ್ಲ ಎಂದಿರುವ ಶಾಸಕ ನಾರಾಯಣಗೌಡರು ಮೊದಲು ಅವರ ಸಾಮರ್ಥ್ಯ ಅರಿತುಕೊಳ್ಳಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕರ ಹುಟ್ಟೂರಿನಲ್ಲೇ ಹಿನ್ನಡೆಯಾಗಿ, ನನ್ನ ಗ್ರಾಮದಲ್ಲಿ ಅತ್ಯಧಿಕ ಮತ ಪಡೆದುಕೊಂಡಿದ್ದರು. ಆ ಸತ್ಯ ಅರಿತು ಮಾತನಾಡಬೇಕು.
ಒಂದು ವೇಳೆ ನಾನು ಪಕ್ಷದ ವಿರುದ್ಧ ಕೆಲಸ ಮಾಡಿದ್ದರೆ ಪಕ್ಷದ ವರಿಷ್ಠರಿಗೆ ಸಾಕ್ಷ್ಯ ಸಹಿತ ವರದಿ ನೀಡಿ ನನ್ನ ಮೇಲೆ ಕ್ರಮ ಜರುಗಿಸಬೇಕು. ರಸ್ತೆಯಲ್ಲಿ ಮಾತನಾಡುವುದರಿಂದ ಪ್ರಯೋಜನವಿಲ್ಲ ದೇವರಾಜು ಹೇಳಿದರು. 40 ವರ್ಷದ ರಾಜಕೀಯ ಜೀವನದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ಶಾಸಕ ನಾರಾಯಣಗೌಡರಿಗೆ ಅವರ ಮೇಲೆ ನಂಬಿಕೆ ಇದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ವರ್ಧಿಸಲಿ. ನಾನು ಅವರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಪಂಥಾಹ್ವಾನ ನೀಡಿದರು.