Advertisement
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪತ್ರಿಕಾ ಸಂವಾದದಲ್ಲಿ ಮಾತನಾಡಿ, 2016ರಿಂದ ಈವರೆಗೆ ಬಿಐಎಎಲ್ ಹೆಚ್ಚಿನ ಪ್ರಮಾಣದಲ್ಲಿ ಯುಡಿಎ ಸಂಗ್ರಹಿಸಿದೆ. ಹಾಗೆಂದು ಇದನ್ನು ಲಾಭವೆಂದು ಪರಿಗಣಿಸಬಾರದು. ಈವರೆಗೆ ಪಡೆದ ಲಾಭದ ಆಧರಿಸಿಯೇ ಪ್ರತಿ ಬಾರಿ ಯುಡಿಎಫ್ ನಿಗದಿಯಾಗುತ್ತದೆ. ಆದರೆ ಈಗಲೇ ಶುಲ್ಕ ಇಳಿಕೆ ಮಾಡಿದರೆ 2021ರ ಏ.1ರ ನಂತರ ಶುಲ್ಕ ವಿಪರೀತ ಹೆಚ್ಚಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದು ತಿಳಿಸಿದರು.
Related Articles
Advertisement
ವಿಪತ್ತಿನಂತಹ ಸ್ಥಿತಿ ನಿರ್ಮಾಣ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಹಾಗೂ ನಗರದ ನಡುವೆ ಸಂಚರಿಸುವ ವಾಹನಗಳಲ್ಲಿ ಶೇ.98ರಷ್ಟು ವಾಹನಗಳು ಹೆಬ್ಟಾಳ ಜಂಕ್ಷನ್ ಮೂಲಕ ಹಾದು ಹೋಗುತ್ತಿವೆ. ವಿಮಾನ ನಿಲ್ದಾಣಕ್ಕೆ ತಕ್ಷಣವೇ ಪರ್ಯಾಯ ಸಂಪರ್ಕ ಜಾಲ ಕಲ್ಪಿಸದಿದ್ದರೆ ಭವಿಷ್ಯದಲ್ಲಿ ಸಂಚಾರ ವ್ಯವಸ್ಥೆಗೆ ಭಾರಿ ಹೊಡೆತ ಬೀಳಲಿದ್ದು, ವಿಪತ್ತಿನಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಕೆಐಎಎಲ್ ಬಳಸುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಕಾರ್ಗೋ ಸೇವೆಯೂ ಉತ್ತಮವಾಗಿದ್ದು, ತಮಿಳುನಾಡು, ಆಂಧ್ರಪ್ರದೇಶದಿಂದಲೂ ಕೆಐಎಎಲ್ ಮೂಲಕ ಕಾರ್ಗೋ ಸಾಗಣೆಯಾಗುತ್ತಿದೆ. ಹಾಗಾಗಿ ಪೂರಕ ಸಂಪರ್ಕ ಜಾಲ ಕಲ್ಪಿಸಲು ಗಮನ ನೀಡಬೇಕಿದೆ ಎಂದು ಹೇಳಿದರು.
ಸುರಂಗ ಮಾರ್ಗಕ್ಕೆ ಪ್ರಸ್ತಾವ ಸಲ್ಲಿಕೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ನಗರದ ಪೂರ್ವ ಭಾಗದಿಂದ ಸಂಪರ್ಕಿಸುವ ರಾಜ್ಯ ಹೆದ್ದಾರಿ 104ರಿಂದ ಸುಮಾರು 2.7 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸಲು ಬಿಐಎಎಲ್ ನಿರ್ಧರಿಸಿದ್ದರೂ ವೆಚ್ಚಕ್ಕಾಗಿ 1,200 ಕೋಟಿ ರೂ. ಹೊಂದಿಸುವ ಸಂಪನ್ಮೂಲ ಸಂಗ್ರಹ ಮಾರ್ಗದ ಬಗ್ಗೆ ಚಿಂತನೆ ನಡೆಸಿದೆ.
ಚತುಷ್ಪಥ ಸುರಂಗ ಮಾರ್ಗ ನಿರ್ಮಾಣ ಯೋಜನೆಯ ಪ್ರಸ್ತಾವವನ್ನು ಬಿಐಎಎಲ್ ಈಗಾಗಲೇ ಎಇಆರ್‌ಎಗೆ ಸಲ್ಲಿಸಿದೆ. ಸದ್ಯದಲ್ಲೇ ಎಇಆರ್‌ಎ 2017- 2021ನೇ ಸಾಲಿನ ಯುಡಿಎಫ್ ನಿಗದಿಪಡಿಸಲಿದೆ. ಒಂದೊಮ್ಮೆ ಯುಡಿಎಫ್ ಪ್ರಮಾಣ ಕಡಿತಗೊಳಿಸಿದರೆ ಉದ್ದೇಶಿತ ಯೋಜನೆ ಸೇರಿದಂತೆ ಕೆಲ ವಿಸ್ತರಣಾ ಕಾರ್ಯ ಕೈಬಿಡುವುದು ಬಿಐಎಎಲ್‌ಗೆ ಅನಿವಾರ್ಯವಾಗಲಿದೆ.
2017-18ನೇ ಸಾಲಿನಲ್ಲಿ 2.69 ಕೋಟಿ ಪ್ರಯಾಣಿಕರು ಕೆಐಎಎಲ್ ಬಳಸಿದ್ದಾರೆ. ಇದರಲ್ಲಿ ಶೇ.20ರಿಂದ ಶೇ.25ರಷ್ಟು ಪ್ರಯಾಣಿಕರು ಬೆಂಗಳೂರಿನ ಪೂರ್ವ ಭಾಗದಿಂದ ನಿಲ್ದಾಣಕ್ಕೆ ಪ್ರಯಾಣಿಸಿದ್ದಾರೆ. ಈ ಸಂಖ್ಯೆಯು ಕೆಲ ವರ್ಷದಲ್ಲಿ ಶೇ.30ರಿಂದ ಶೇ.40ಕ್ಕೆ ಏರಿಕೆಯಾಗಲಿದೆ ಎಂದು ಸಿಇಒ ಹರಿ ಮರರ್ ಹೇಳಿದರು.
ರನ್ ವೇ ಕೆಳಗೆ ಸುರಂಗ ಮಾರ್ಗವಿಲ್ಲ: ಉದ್ದೇಶಿತ 2ನೇ ರನ್ ವೇ ಕೆಳಭಾಗದಲ್ಲಿ ಮೈಲನಹಳ್ಳಿ ಕಡೆಯಿಂದ ಸುರಂಗ ಮಾರ್ಗ ನಿರ್ಮಾಣಕ್ಕೆ ಬಿಐಎಎಲ್ ಚಿಂತಿಸಿತ್ತು. ಆದರೆ ರನ್ ವೇಯಲ್ಲಿ ನಿಮಿಷಕ್ಕೊಂದು ವಿಮಾನ ಹಾರುವುದು, ಇಳಿಯುವುದರಿಂದ ಸುರಕ್ಷತೆ ದೃಷ್ಟಿಯಿಂದ ರನ್ ವೇ ಕೆಳಗೆ ಸುರಂಗ ಮಾರ್ಗ ನಿರ್ಮಾಣಕ್ಕೆ ಅನುಮತಿ ದೊರಕಿರಲಿಲ್ಲ.
ಪೂರ್ವ ಭಾಗದಲ್ಲಿನ 1ನೇ ರನ್ ವೇಯಿಂದ ಎರಡನೇ ರನ್ ವೇಗೆ ವಿಮಾನ ಹೋಗುವ ಮಾರ್ಗದಲ್ಲಿ ಟ್ಯಾಕ್ಸಿ ವೇ ಇದೆ. ಇದರ ಕೆಳಭಾಗದಲ್ಲಿ ಸುರಂಗ ಮಾರ್ಗ ನಿರ್ಮಾಣದಿಂದ ಯಾವುದೇ ತೊಂದರೆಯಾಗದು ಎಂದು ಸಿಇಒ ಹರಿ ಮರರ್ ತಿಳಿಸಿದರು.
ಸೀಮಿತ ಅವಧಿಯಲ್ಲಿ ವ್ಯವಹಾರ: ಎಚ್‌ಎಎಲ್ ವಿಮಾನನಿಲ್ದಾಣದಿಂದ ದೇಶೀಯ ವಿಮಾನಯಾನದ ವಾಣಿಜ್ಯ ಸೇವೆ ಆರಂಭಿಸಲು ಬಿಐಎಎಲ್ ಸಿದ್ಧವಿದೆ. ಆದರೆ ನಿಲ್ದಾಣದ ಸಂಪೂರ್ಣ ನಿಯಂತ್ರಣವನ್ನು ನಮ್ಮ ಸಂಸ್ಥೆಗೆ ವಹಿಸಬೇಕು. ಆದರೆ ಸಂಸ್ಥೆ ನೀಡಿರುವ ಸೀಮಿತ ಅವಧಿಯಲ್ಲಿ ವಾಣಿಜ್ಯ ವ್ಯವಹಾರ ನಡೆಸುವುದು ಲಾಭದಾಯವೆನಿಸಿಲ್ಲ ಎಂದು ಹರಿ ಮರರ್ ಹೇಳಿದರು.
ವಿಮಾನನಿಲ್ದಾಣಕ್ಕೆ ಉಪನಗರ ಯೋಜನೆ ಉಪಯುಕ್ತವಾಗಿದ್ದು, ಈ ಬಗ್ಗೆ ಐದು ವರ್ಷದ ಹಿಂದೆಯೇ ಬಿಐಎಎಲ್ ಪ್ರಸ್ತಾವ ಸಲ್ಲಿಸಿತ್ತು. ವಿಮಾನನಿಲ್ದಾಣದ ಅಂಚಿನಲ್ಲೇ ರೈಲ್ವೆ ಮಾರ್ಗ ಹಾದು ಹೋಗಿದೆ. ಉಪನಗರ ಯೋಜನೆ ಕಲ್ಪಿಸುವುದಾದರೆ ರೈಲ್ವೆ ಹಳಿಗೆ ಹೊಂದಿಕೊಂಡ ವಿಮಾನನಿಲ್ದಾಣ ಜಾಗದಲ್ಲೇ ಸ್ವಂತ ಖರ್ಚಿನಲ್ಲಿ ನಿಲ್ದಾಣ ನಿರ್ಮಿಸಲಾಗುವುದು.-ಹರಿ ಮರರ್, ಬಿಐಎಎಲ್‌ನ ವ್ಯವಸ್ಥಾಪಕ ನಿರ್ದೇಶಕ, ಸಿಇಒ