Advertisement

ಪರಿಸರ ಇದ್ದರೆ ನಾವೂ…

01:21 PM Jun 05, 2020 | mahesh |

ಜೀವನದ ಪ್ರತೀ ಹೆಜ್ಜೆಯಲ್ಲಿಯೂ ಪರಿಸರದ್ದು ಬಹುಮುಖ್ಯ ಪಾತ್ರ. ಶುದ್ಧ ನೀರು ಹರಿಯುತ್ತಿದ್ದ ನದಿಯನ್ನು ಕಲುಷಿತಗೊಳಿಸಿದೆವು. ಕಾಲಕಾಲಕ್ಕೆ ಮಳೆಯಾಗಲು, ತಾಪಮಾನದ ಸಮತೋಲನವನ್ನು ಕಾಪಾಡಲು ಸಹಕರಿಸುತ್ತಿದ್ದ ಕಾಡನ್ನು ನಾಶಗೊಳಿಸಿದೆವು. ಶುದ್ಧ ಗಾಳಿ ನೀಡುತ್ತಿದ್ದ ಮರಗಳನ್ನು ನೆಲಕ್ಕುರುಳಿಸಿದೆವು. ನೀರಿನ ಅಭಾವ ತೋರದಂತೆ ನಮಗೆ ಆಸರೆಯಾಗಿದ್ದ ಕೆರೆ-ಕೊಳಗಳನ್ನು ಮುಚ್ಚಿ ಗಗನಚುಂಬಿ ಕಟ್ಟಡಗಳನ್ನು ಕಟ್ಟಿದೆವು. ಇದು ಸಾಲದೆಂದು ಶಬ್ದ, ಬೆಳಕಿನ ಮಾಲಿನ್ಯಗಳನ್ನು ಸೃಷ್ಟಿಸಿದೆವು. ಹೀಗೆ ನಾವು ಮಾಡಿದ್ದು ಒಂದೆರಡಲ್ಲ. ಇದಕ್ಕೆ ಪ್ರತಿಯಾಗಿ ಪ್ರವಾಹ, ಚಂಡಮಾರುತ, ಸುನಾಮಿ, ಭೂಕಂಪ..ಇಷ್ಟೇ ಯಾಕೆ ಇಂದು ಕೋವಿಡ್ ದಂತಹ ಅನೇಕ ಕಷ್ಟ-ಸಂಕಷ್ಟಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದೇವೆ. ಮನುಷ್ಯ ತನ್ನ ಮೂಲ ಕರ್ತವ್ಯಗಳಲ್ಲೊಂದಾದ ಪರಿಸರ ಸಂರಕ್ಷಣೆಯನ್ನು ಮರೆತಿರುವುದು ಖೇದಕರ.

Advertisement

ಯಾವಾಗ ಮಾನವ ತನ್ನ ಕರ್ತವ್ಯವನ್ನು ಮೆರೆಯುತ್ತಾನೋ ಅಂದು ಪ್ರಕೃತಿಯೇ ಆತನಿಗೆ ಜೀವನದ ರೀತಿ ನೀತಿಗಳನ್ನು ಕಲಿಸುತ್ತದೆ. ತನ್ನನ್ನು ತಾನು ಕಾಪಾಡಿಕೊಳ್ಳುವ ಕಲೆಯನ್ನು ಅರಿತಿರುವ ಪರಿಸರ ಏನಾದರೂ ಒಂದಡಿ ಮುಂದಿಟ್ಟರೂ ಮಾನವನ ನಾಶ ಖಚಿತ ಎಂಬುದಕ್ಕೆ ಪ್ರವಾಹ, ಭೂಕಂಪಗಳಂತಹ ಪ್ರಕೃತಿ ವಿಕೋಪಗಳೇ ನಿದರ್ಶನ.
ಇಂತಹ ಕುಕೃತ್ಯಗಳಿಂದ ಮಾನವನನ್ನು ತಡೆದು ಪರಿಸರ ರಕ್ಷಣೆಯ ಕುರಿತು ಜಾಗೃತಿಯನ್ನು ಮೂಡಿಸುವ ಹಿನ್ನೆಲೆಯಲ್ಲಿ 1974ರಲ್ಲಿ ಜೂನ್‌ 5ರಂದು ಪರಿಸರ ದಿನ ಆಚರಿಸುವ ಯೋಜನೆಯನ್ನು ವಿಶ್ವಸಂಸ್ಥೆ ಕೈಗೊಂಡಿತು. ಹೀಗೆ ಒಂದು ಸದುದ್ದೇಶದೊಂದಿಗೆ ಆರಂಭವಾದ ಈ ದಿನದ ಆಚರಣೆಯನ್ನು ಪರಿಸರದ ಒಳಿತಿಗಾಗಿ ಅರ್ಥಪೂರ್ಣವಾಗಿ ಆಚರಿಸುವುದು ಬಹಳ ಮುಖ್ಯ. ನಾವು ವಾಸಿಸುವ ಪರಿಸರ ಆರೋಗ್ಯಪೂರ್ಣವಾಗಿದ್ದರೆ ಮಾತ್ರ ನಮ್ಮ ಬದುಕು ಹಸನಾಗಿರುತ್ತದೆ ಎಂಬ ಸತ್ಯವನ್ನು ನಾವು ಅರಿತುಕೊಳ್ಳಬೇಕು.

ಈಗ ಪರಿಸರ ಮತ್ತೆ ಶುದ್ಧವಾಗುವ ಹಾದಿಯಲ್ಲಿದೆ. ಈ ವರ್ಷದ ಪರಿಸರ ದಿನಾಚರಣೆಯಂದು ಶುಚಿಯ ಹಾದಿಯತ್ತ ಸಾಗುತ್ತಿರುವ ಪರಿಸರವನ್ನು ಕಾಪಾಡುತ್ತೇವೆ ಎಂಬ ಸಂಕಲ್ಪವನ್ನು ಮಾಡೋಣ.

– ಸಾಯಿಶ್ರೀ ಪದ್ಮ ಡಿ.ಎ ಸ್‌.

Advertisement

Udayavani is now on Telegram. Click here to join our channel and stay updated with the latest news.

Next