ಬೆಂಗಳೂರು: “ರಾಜೀನಾಮೆ ಸಲ್ಲಿಸಿರುವ ಶಾಸಕರು ವಾಪಸ್ ಬಂದರೆ ಸಚಿವ ಸ್ಥಾನ ನೀಡಲಾಗುವುದು’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅತೃಪ್ತ ಶಾಸಕರಿಗೆ ಆಫರ್ ನೀಡಿದ್ದಾರೆ.
ಉಪ ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಸಚಿವರ ಉಪಾಹಾರ ಕೂಟದ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, “ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಲಿಲ್ಲ ಎಂದು ಕೆಲವು ಶಾಸಕರು ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಅವರು ವಾಪಸ್ ಬಂದರೆ ಅವರಿಗೆ ಸಚಿವ ಸ್ಥಾನ ನೀಡಲಾಗುವುದು. ಈಗಾಗಲೇ ಹಾಲಿ ಸಚಿವರು ರಾಜೀನಾಮೆ ನೀಡಿರುವುದರಿಂದ ಶೀಘ್ರವೇ ಸಂಪುಟ ವಿಸ್ತರಣೆ ಮಾಡಿ, ಅತೃಪ್ತರಿಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.
ಸಚಿವರು ಸ್ವಯಂಪ್ರೇರಿತರಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಸರ್ಕಾರ ಉಳಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ವೈಯಕ್ತಿಕ ಸ್ಥಾನಮಾನಗಳಿಗಿಂತ ಸರ್ಕಾರ ಉಳಿಸಿಕೊಳ್ಳುವುದು ಮುಖ್ಯ ಎಂದು ಸಚಿವರು ಹೇಳಿದ್ದಾರೆ. ನಾವು ಶೀಘ್ರವೇ ಸಂಪುಟ ಪುನಾರಚನೆ ಮಾಡಿ ಅತೃಪ್ತರಿಗೆ ಅವಕಾಶ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್‌ನೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇವೆ. ಅತೃಪ್ತ ಶಾಸಕರೊಂದಿಗೆ ಸಂಪರ್ಕ ಮಾಡುವ ಪ್ರಯತ್ನ ನಡೆಸಿದ್ದೇವೆ. ಕೆಲವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಿದರು.
ಇದೇ ವೇಳೆ, ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಭಾರತೀಯ ಜನತಾಪಕ್ಷದವರಿಗೆ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ. ಬಹುಮತ ಇರುವ ಸರ್ಕಾರವನ್ನು ಪತನಗೊಳಿಸಲು ಆರನೇ ಬಾರಿ ಪ್ರಯತ್ನ ನಡೆಸಿದ್ದಾರೆ. ಈ ಬಾರಿಯೂ ಅವರ ಪ್ರಯತ್ನ ವಿಫಲವಾಗಲಿದೆ ಎಂದು ಹೇಳಿದರು.