ಕಲಬುರಗಿ: ಮಕ್ಕಳಲ್ಲಿನ ಹಲವಾರು ಕೌತುಕ ಪ್ರಶ್ನೆಗಳಿಗೆ ಪಾಲಕರು ಮತ್ತು ಶಿಕ್ಷಕರು ಸರಿಯಾದ ಉತ್ತರ ನೀಡಿ ತಣಿಸಿದರೆ, ಅವರಲ್ಲಿ ತಿಳಿವು ವೃದ್ಧಿಯಾಗುತ್ತದೆ. ಇದು ಅವರ ಶೈಕ್ಷಣಿಕ ಮತ್ತು ಜೀವನ ವಿಕಾಸಕ್ಕೆ ದಾರಿಯಾಗುತ್ತದೆ ಎಂದು ಇಸ್ರೋ ಸಂಸ್ಥೆ ಮಾಜಿ ಅಧ್ಯಕ್ಷ ಪದ್ಮಶ್ರೀ ಕಿರಣ್‌ಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಎನ್‌ಪಿಎಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಉಪನ್ಯಾಸ ಮಾಲಿಕೆಯ ಭಾಗವಾಗಿ ಬುಧವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು.
ಪ್ರತಿ ಮಗುವಿನ ತಲೆಯಲ್ಲಿ ಉಂಟಾಗುವ ಅನುಮಾನದಂತಹ ಪ್ರಶ್ನೆಗಳೇ ಅವರ ಜೀವನಕ್ಕೆ ಯಶಸ್ಸಿನ ದಾರಿ ಕಂಡುಕೊಳ್ಳಲು ಸಹಕಾರಿಯಾಗುತ್ತವೆ ಎಂದ ಅವರು, ಪಾಲಕರು ಮತ್ತು ಶಿಕ್ಷಕರು ಪ್ರಶ್ನೆಗಳಿಗೆ ಉತ್ತರ ಕೊಡದೇ ಹೋದಾಗ ಪರಿಸ್ಥಿತಿ ತಿಳಿ ಹೇಳಿ ಎಂದರು.
ಇದೇ ವೇಳೆ ಚಂದ್ರಯಾನ, ಗಗನಯಾನ, ಮಂಗಳಯಾನ ಕುರಿತು ವಿದ್ಯಾರ್ಥಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರು. ಇಸ್ರೋ ಸ್ಥಾಪನೆ ಮಾಡಿದ ವಿಕ್ರಂ ಸಾರಾಭಾಯಿ ಕುರಿತು ಹೇಳಿದರಲ್ಲದೆ, ಮಾಜಿ ರಾಷ್ಟ್ರಪತಿ, ವಿಜ್ಞಾನಿ ದಿ. ಅಬ್ದುಲ್ ಕಲಾಂ ಕುರಿತು ಹಲವಾರು ವಿಷಯಗಳನ್ನು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಎಂಎಲ್‌ಸಿ ಹಾಗೂ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ.ನಮೋಶಿ ಮಾತನಾಡಿ, ಮಕ್ಕಳಿಗೆ ಸರಿಯಾಗಿ ವಿಷಯಗಳನ್ನು ತಿಳಿ ಹೇಳಿದಾಗ ಅವರು ಪ್ರಭುತ್ವ ಸಾಧಿಸೇ ಸಾಧಿಸುತ್ತಾರೆ. ಅಷ್ಟು ತಾಳ್ಮೆ ಶಿಕ್ಷಕರು ಮತ್ತು ಪಾಲಕರಲ್ಲೂ ಬೇಕು ಎಂದ ಅವರು, ಶೈಕ್ಷಣಿಕ ಪ್ರಗತಿಯಿಂದ ನಾವು ಈ ಭಾಗದಲ್ಲಿ ಅಭಿವೃದ್ಧಿ ದಾಖಲಿಸಬಹುದು ಎಂದರು. ನಿರ್ದೇಶಕರಾದ ಮೋಯಿನೋದ್ದಿನ್ ಸಂಸ್ಕಾರ ಸಂಸ್ಥೆ ಕಾರ್ಯದರ್ಶಿ ಸುರೇಶ ಬುಲ್‌ಬುಲೆ, ಸದಸ್ಯ ಡಾ|ಸಂಪತಕುಮಾರ ಇದ್ದರು.