Advertisement

“ಕಾಂಗ್ರೆಸ್‌ ಬಡವರ ಪರವಾಗಿದ್ದರೆ, ಬಿ.ಜೆ.ಪಿ. ಬಂಡವಾಳ ಶಾಹಿಗಳ ಪರ’

05:35 AM Aug 19, 2017 | Team Udayavani |

ಕಾಪು: ಕಾಂಗ್ರೆಸ್‌ ಪಕ್ಷ ಬಡವರ ಧ್ವನಿಯಾಗಿ ಸಮಾನತೆ – ಅಭಿವೃದ್ಧಿ – ಬಡತನ ನಿರ್ಮೂಲನ ತೊಡಗಿಸಲು ಕಾರ್ಯಕ್ರಮ ರೂಪಿಸಿದೆ. ಬಿ.ಜೆ.ಪಿ ಪ್ರಚಾರ-ಭ್ರಷ್ಟಾಚಾರ-ಬಂಡವಾಳ ಶಾಹಿಗಳ ಪರವಾಗಿ ಕಾರ್ಯಕ್ರಮ ನೀಡುತ್ತಾ ಬರುತ್ತಿದೆ. ಆ ಮೂಲಕ ಕಾಂಗ್ರೆಸ್‌ ಬಡವರ ಪರವಾಗಿ ಗುರುತಿಸಲ್ಪಡುತ್ತಿದ್ದರೆ, ಬಿ.ಜೆ.ಪಿ ಬಂಡವಾಳಶಾಹಿಗಳ ಪರ ಎನ್ನುವುದನ್ನು ಪ್ರಚುರ ಪಡಿಸುತ್ತಿದೆ ಎಂದು ಕಾಪು ಶಾಸಕ ವಿನಯಕುಮಾರ್‌ ಸೊರಕೆ ಹೇಳಿದರು.

Advertisement

ಕಾಪು ಬ್ಲಾಕ್‌ ಕಾಂಗ್ರೆಸ್‌ ವ್ಯಾಪ್ತಿಯ ಬೆಳಪು ಗ್ರಾಮದ ಬೂತ್‌ ಮಟ್ಟದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 
ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರವು ಕಳೆದ 4 ವರ್ಷಗಳಲ್ಲಿ ಚುನಾವಣಾ ಪ್ರಣಾಳಿಕೆಯ ಎಲ್ಲಾ ಭರವಸೆಗಳನ್ನು ಅನುಷ್ಠಾನಗೊಳಿಸಿ ಹತ್ತಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಭ್ರಷ್ಟಾಚಾರ ರಹಿತ ಸ್ಥಿರ ಆಡಳಿತ ನೀಡಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಪಶು ಭಾಗ್ಯ, ಅನಿಲ ಭಾಗ್ಯ, ಶಾದಿ ಭಾಗ್ಯ, ವಸತಿ ಭಾಗ್ಯದಂತಹ ಯೋಜನೆಗಳಿಗೆ ಚಾಲನೆ ನೀಡಿದೆ. ಆದರೆ ಮೋದಿ ಸರಕಾರ ಜನರಿಗೆ ನೀಡಿದ ಆಶ್ವಾಸನೆಗಳೆಲ್ಲಾ ಸುಳ್ಳಾಗಿದೆ. ಮೋದಿ ಸರಕಾರದ ಜನ-ಧನ, ಕಪ್ಪು ಹಣ, ಭ್ರಷ್ಟಾಚಾರ ರಹಿತ ಆಡಳಿತ, ಅಭಿವೃದ್ಧಿ, ಅಚ್ಛೇ ದಿನ್‌ ಏನಾಯ್ತು ? ಎಂದು ಪ್ರತಿಯೊಬ್ಬರೂ ಪ್ರಶ್ನಿಸುವ ಕಾಲ ಒದಗಿ ಬಂದಿದೆ ಎಂದರು.

ಅಭಿವೃದ್ಧಿಯ ಮಹಾಪರ್ವ
ಬೆಳಪು ಗ್ರಾಮದ ಅಭಿವೃದ್ಧಿಗಾಗಿ ಕಳೆದ 2 ವರ್ಷಗಳಲ್ಲಿ ರೂ. 19.62 ಕೋಟಿ ಅನುದಾನ ವಿನಿಯೋಗಿಸಲಾಗಿದೆ.ರೂ. 146 ಕೋಟಿ ವೆಚ್ಚದ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರಕ್ಕೆ ಸಚಿವ ಸಂಪುಟದ ಅನುಮೋದನೆಯೊಂದಿಗೆ ಪ್ರಥಮ ಕಂತಿನ ಅನುದಾನ ಬಿಡುಗಡೆಗೊಂಡಿದ್ದು, 68 ಎಕ್ರೆ ಪ್ರದೇಶದಲ್ಲಿ ಸಣ್ಣ ಕೈಗಾರಿಕೆಗಳ ಪಾರ್ಕ್‌ ಅನುಷ್ಠಾನವು ಅಂತಿಮ ಹಂತದಲ್ಲಿದೆ. ಶಿಕ್ಷಣ ಕೈಗಾರಿಗಾ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಗ್ರಾಮ ಬೆಳಪು ಮುಂದೆ ಇಡೀ ರಾಜ್ಯಕ್ಕೆ ಬೆಳಕಾಗಲಿದೆ ಎಂದರು. 

ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಪು ಕ್ಷೇತ್ರದಲ್ಲಿ ಶಾಸಕ ವಿನಯಕುಮಾರ್‌ ಸೊರಕೆಯವರನ್ನು ಅತೀ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಸಂಕಲ್ಪ ನಮ್ಮದಾಗಿದೆ. ಬೆಳಪು ಗ್ರಾಮ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಅಭೂತಪೂರ್ವ ಅಭಿವೃದ್ಧಿಯಾಗಿದ್ದರೆ ಅದಕ್ಕೆ ಸೊರಕೆಯವರ ಸ್ಫೂರ್ತಿಯೇ ಕಾರಣವಾಗಿದ್ದು, ಅವರ ಋಣ ತೀರಿಸುವ ಕೆಲಸ ಗ್ರಾಮಸ್ಥರಿಂದ ನಡೆಯಬೇಕಿದೆ ಎಂದರು.

ಸಭೆಯಲ್ಲಿ ಪಕ್ಷದ ಬೆಳಪು ಗ್ರಾಮದ ವಿವಿಧ ಬೂತ್‌ ಸಮಿತಿಗಳ ಪದಾಧಿಕಾರಿಗಳನ್ನು ನೇಮಿಸಲಾಯಿತು. ಕಾಪು ಬ್ಲಾಕ್‌ ಕಾಂಗ್ರೆಸ್‌ನ‌ ನವೀನ್‌ಚಂದ್ರ ಶೆಟ್ಟಿ, ಪಕ್ಷದ ಮುಖಂಡರಾದ ದೀಪಕ್‌ ಕುಮಾರ್‌, ವಿಶ್ವಾಸ ಅಮೀನ್‌, ಗಣೇಶ್‌ ಕೋಟ್ಯಾನ್‌, ಗುಲಾಂ ಮಹಮ್ಮದ್‌, ಎಚ್‌. ಅಬ್ದುಲ್ಲಾ, ಬಿಎಲ್‌ಒ ಪ್ರಭಾಕರ ಪೂಜಾರಿ ಉಪಸ್ಥಿತರಿದ್ದರು. ಬೆಳಪು ಸ್ಥಾನೀಯ ಕಾಂಗ್ರೆಸ್‌ ಅಧ್ಯಕ್ಷ ನಿರಂಜನ ಶೆಟ್ಟಿ ಪಣಿಯೂರು ಸ್ವಾಗತಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next