Advertisement

ನೀತಿ ಸಂಹಿತೆ ಜಾರಿಯಾದ್ರೆ ನೇಚರ್‌ ಕಾಲ್‌ಗ‌ೂ ಸಮಸ್ಯೆ

11:36 PM Mar 10, 2020 | Lakshmi GovindaRaj |

ವಿಧಾನ ಪರಿಷತ್‌: ಚುನಾವಣೆ ನೀತಿ ಸಂಹಿತೆಯಲ್ಲಿ ಕೆಲವೊಂದು ತಿದ್ದುಪಡಿ ತರುವ ಸಂಬಂಧ ವಿಧಾನಸಭೆ ಅಧ್ಯಕ್ಷರು, ವಿಧಾನ ಪರಿಷತ್‌ ಸಭಾಪತಿಗಳು ಸೇರಿ ಮುಖ್ಯ ಚುನಾವಣಾಧಿಕಾರಿಯವರೊಂದಿಗೆ ಸಭೆ ನಡೆಸಬೇಕು ಎಂದು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಸಲಹೆ ನೀಡಿದ್ದಾರೆ.

Advertisement

ಸಂವಿಧಾನದ ಮೇಲಿನ ಚರ್ಚೆ ಸಂದರ್ಭದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ವಿಷಯ ಪ್ರಸ್ತಾಪಿಸುತ್ತಿರುವಾಗ ಜನ ಪ್ರತಿನಿಧಿಗಳನ್ನು ಚುನಾವಣೆ ಸಂದರ್ಭದಲ್ಲಿ ಖಳನಾಯಕರಂತೆ ಬಿಂಬಿಸಲಾಗುತ್ತದೆ. ನಮ್ಮದೇ ವಿಧಾನಸಭಾ ವ್ಯಾಪ್ತಿಯಲ್ಲಿ ನಾವು ಸರ್ಕಾರಿ ವ್ಯವಸ್ಥೆಯೊಳಗೆ ಇರಲು ಬಿಡುವುದಿಲ್ಲ.

ಸರ್ಕಾರಿ ಐಬಿಗಳಿಗೆ ನೇಚರ್‌ ಕಾಲ್‌ ಬಂದಾಗ (ಮೂತ್ರವಿಸರ್ಜನೆ) ಹೋಗಲು ಬಿಡುವುದಿಲ್ಲ. ಈ ಸಂದರ್ಭದಲ್ಲಿ ತುಂಬ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ದೇವರಿಗೆ ದಕ್ಷಿಣೆ ಕೂಡ ಹಾಕುವಂತಿಲ್ಲ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚಾರವೂ ಕಷ್ಟವಾಗುತ್ತದೆ. ಇದನ್ನೆಲ್ಲ ತಪ್ಪಿಸುವ ದೃಷ್ಟಿಯಿಂದ ಏನಾದರೂ ಮಾಡಬೇಕಿದೆ ಎಂದರು.

ಜಗದೀಶ ಶೆಟ್ಟರ್‌: ಇದಕ್ಕೆ ಧ್ವನಿಗೂಡಿಸಿದ ಸಚಿವ ಜಗದೀಶ್‌ ಶೆಟ್ಟರ್‌, ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹುಟ್ಟೂರಿಗೆ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗೂ ಪೊಲೀಸರು ಅವಕಾಶ ನೀಡಿರಲಿಲ್ಲ. ನಂತರ ದಾರಿ ಮಧ್ಯೆ ಕಾರ್ಯಕರ್ತರ ಮನೆಯ ಶೌಚಾಲಯದಲ್ಲಿ ಆ ಕಾರ್ಯ ಮಾಡಬೇಕಾಯಿತು.

ಹೀಗಾಗಿ, ಚುನಾವಣಾ ನೀತಿ ಸಂಹಿತೆಗೂ ಒಂದು ಮಿತಿ ಇರಬೇಕು. ಈ ನಿಟ್ಟಿನಲ್ಲಿ ಸ್ಪೀಕರ್‌, ಸಭಾಪತಿ ಸೇರಿಕೊಂಡು ಪ್ರಮುಖ ರಾಜಕೀಯ ಮುಖಂಡರ ಜತೆ ಮುಖ್ಯ ಚುನಾವಣಾಧಿಕಾರಿಯವರನ್ನು ಕರೆಸಿ, ವಿಧಾನಸೌಧದಲ್ಲೇ ಒಂದು ಸಭೆ ನಡೆಸಬೇಕು. ಅಗತ್ಯ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಕ್ರಮ ಆಗಲಿ ಎಂಬ ಆಶಯ ವ್ಯಕ್ತಪಡಿಸಿದರು.

Advertisement

ತಾರ್ಕಿಕ ಅಂತ್ಯ ಹಾಡಲೇ ಬೇಕು: ಸದಸ್ಯ ಸಿ.ಎಂ. ಇಬ್ರಾಹಿಂ ಮಾತನಾಡಿ, ಚುನಾವಣೆ ನೀತಿ ಸಂಹಿತೆ ರಾಜಕಾರಣಿಗಳಿಗೆ ಗರ್ಭಿಣಿಯರ ಸಂಕಷ್ಟದಂತಾಗುತ್ತದೆ. ಅಧಿಕಾರಿಗಳು ನಮ್ಮ ಮೇಲೆ ಎಲ್ಲ ರೀತಿಯ ಸೇಡು ತೀರಿಸಿಕೊಳ್ಳುತ್ತಾರೆ. ಬಾದಾಮಿ ಚುನಾವಣೆ ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ನನ್ನ ಬಳಿ ಹಣವಿದೆ ಎಂದು ಬಟ್ಟೆ ಬಿಚ್ಚುವುದೊಂದು ಬಾಕಿ ಇತ್ತು. ಇಷ್ಟೊಂದು ದಬ್ಬಾಳಿಕೆ ಮಾಡುತ್ತಾರೆ. ಹೀಗಾಗಿ, ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಲೇ ಬೇಕು ಎಂದು ಕೋರಿದರು.

ತಿದ್ದುಪಡಿ ಆಗಲಿ: ಬಸವರಾಜ ಹೊರಟ್ಟಿ ಮಾತನಾಡಿ, ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಇದೇ ಸಮಸ್ಯೆ ಎದುರಿಸಿದ್ದೆ. ನೀತಿ ಸಂಹಿತೆ ಕಾರಣಕ್ಕಾಗಿ ಐಬಿಯಲ್ಲಿ ಮೂತ್ರ ವಿಸರ್ಜನೆಗೂ ಅಲ್ಲಿನ ಪೊಲೀಸ್‌ ಸಿಬ್ಬಂದಿ ಅವಕಾಶ ನೀಡಿರಲಿಲ್ಲ. ಈ ರೀತಿಯ ದಬ್ಟಾಳಿಕೆ ನಿಲ್ಲಿಸಬೇಕಾದರೆ ಅಗತ್ಯ ತಿದ್ದುಪಡಿ ಆಗಬೇಕು ಎಂದು ಹೇಳಿದರು.

ಅವಲೋಕನ ಅಗತ್ಯ: ಮಾಧುಸ್ವಾಮಿಯವರು ಮಾತು ಮುಂದು ವರಿಸಿ, ಒಟ್ಟಾರೆಯಾಗಿ ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ಎಲ್ಲ ರಂಗದ ಟೀಕೆಯ ವಸ್ತುವಾಗಿದ್ದಾರೆ. ನಮ್ಮ ಮೇಲಿನ ಗೌರವ, ವಿಶ್ವಾಸ ಕಡಿಮೆಯಾಗುತ್ತಿದೆ. ನಮ್ಮ ಸ್ಥಿತಿಯನ್ನು ಅವಲೋಕಿಸಬೇಕು ಮತ್ತು ರಾಜಕಾರಣ ಸೇವಾ ಮನೋಭಾವ ಅಗತ್ಯವಿದೆ. ಎಲ್ಲ ಕ್ಷೇತ್ರವೂ ಇಂದು ಕಲುಷಿತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next