ಬೆಂಗಳೂರು: ಬಿಜೆಪಿ ನಾಯಕರ ಬಯೋ ಡೆಟಾ ತೆಗೆದರೆ ದೇಶದಲ್ಲಿ ಯಾರು ಗೂಂಡಾ ಗಳು ಎಂಬುದು ಗೊತ್ತಾಗುತ್ತದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತ ನಾಡಿದ ಅವರು, ವಿಧಾನಸಭೆ ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡು ಸಮಾಜದ ಶಾಂತಿ ಕದಡುವ ಕೆಲಸ ಮಾಡಲು ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿದರು.
ಸಿಂಹ ವಿರುದ್ಧ ವಾಗ್ಧಾಳಿ: ದಿನೇಶ್ ಗುಂಡೂ ರಾವ್ ಅವರನ್ನು ಗೂಂಡಾ ಎಂದಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಜೈಲಿಗೇಕೆ ಹೋಗಿ ದ್ದರು? ಗುಜರಾತ್‌ನಲ್ಲಿ ಗೋಧ್ರಾ ಹತ್ಯಾಕಾಂಡ ನಡೆಸಿ 2 ಸಾವಿರ ಜನರ ಹತ್ಯೆ ನಡೆಸಿದಾಗ ಯಾರು ಮುಖ್ಯಮಂತ್ರಿಯಾಗಿದ್ದರು ಎಂದು ಪ್ರಶ್ನಿಸಿದರು. ಮೈಸೂರಿನಲ್ಲಿ ಹನುಮ ಜಯಂತಿ ಆಚರಣೆಗೆ ಪೊಲೀಸ್ ಇಲಾಖೆ ಅವಕಾಶ ನೀಡಿದ ರಸ್ತೆಯಲ್ಲಿ ತೆರಳದೇ ಅನಗತ್ಯವಾಗಿ ಗೊಂದಲ ಸೃಷ್ಠಿಸಲು ನಿಷೇಧಿತ ಮಾರ್ಗದಲ್ಲಿಯೇ ತೆರಳಿ, ಪೊಲೀಸರ ಮೇಲೆಯೇ ವಾಹನ ನುಗ್ಗಿಸಲು ಹೋಗಿದ್ದನ್ನು ನೋಡಿಕೊಂಡು ಪೊಲಿಸರು ಸುಮ್ಮನಿರಬೇಕೆ? ಯಡಿಯೂರಪ್ಪ ಅವರು ಪ್ರತಾಪ ಸಿಂಹರನ್ನು ಸಮರ್ಥಿಸಿ ಕೊಳ್ಳುತ್ತಿದ್ದಾರೆ. ಇಂತವರ ಕೈಗೆ ರಾಜ್ಯ ಕೊಟ್ಟರೆ ರಾಜ್ಯದ ಪರಿಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದರು.
ಯಾತ್ರೆ ದೇವರ ಮೇಲಿನ ಭಕ್ತಿಯಲ್ಲ: ಬಿಜೆಪಿಯವರು ಹನುಮ ಜಯಂತಿ, ದತ್ತ ಜಯಂತಿ ಆಚರಣೆ ಹೆಸರಿನಲ್ಲಿ ಗಲಾಟೆ ಸೃಷ್ಠಿಸಲು ಮುಂದಾಗಿದ್ದಾರೆ. ದೇವರ ಮೇಲಿನ ಭಕ್ತಿಗೆ ಅವರು ಯಾತ್ರೆ ಮಾಡುವುದಿಲ್ಲ. ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸಲು ಈ ರೀತಿ ಮಾಡುತ್ತಾರೆ ಎಂದು ಹೇಳಿದರು. ಪ್ರತಾಪ್ ಸಿಂಹ ಬೆಂಬಲಿಗರು ಸಾಮಾಜಿಕ ಜಾಲ ತಾಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಒನಕೆ ಓಬ್ಬವ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ಹಾಕಿದ್ದು ಅವರ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ನಮ್ಮ ತಂದೆ ಹಾಗೂ ನನ್ನ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ ಕೀಳು ಮಟ್ಟದ ವ್ಯಕ್ತಿ ಎಂದು ರಾಜ್ಯದ ಜನತೆಗೆ ತಿಳಿದಿದೆ. ಈ ಹಿಂದೆ ಶೋಭಾ ಕರಂದ್ಲಾಜೆ ನನ್ನ ಪತ್ನಿಯ ಬಗ್ಗೆ ಮಾತನಾಡಿದ್ದರು. ಈಗ ಪ್ರತಾಪ್ ಸಿಂಹ ನನ್ನ ತಂದೆಯ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿಯವರ ಕೀಳು ಮಟ್ಟದ ಹೇಳಿಕೆಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ.
●ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
ಸಂಸತ್ ಸದಸ್ಯ ಸ್ಥಾನಕ್ಕಿಂತ ನನಗೆ ಹಿಂದೂ ಧರ್ಮ ಮುಖ್ಯ ಎಂದು ಹೇಳಿಕೆ ನೀಡಿರುವ ಪ್ರತಾಪ್ ಸಿಂಹ ಸಂಸದರಾಗಿ
ಮುಂದುವರಿಯಲು ಅರ್ಹರಲ್ಲ.
●ಬಸವರಾಜ ರಾಯರಡ್ಡಿ, ಸಚಿವ
ಪ್ರತಾಪ್ ಸಿಂಹ ಇನ್ನೂ ಯುವಕ. ಅವರಿಗೆ ಸಂಯಮ ಅಗತ್ಯ. ಉಗ್ರ ಪತ್ರಿಭಟನೆ ಎಂದರೆ ಕಾನೂನು ಉಲ್ಲಂಘನೆಯಲ್ಲ. ಕಾನೂನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಪೊಲಿಸರು ಕ್ರಮ ಕೈಗೊಂಡಿದ್ದಾರೆ.
●ಡಾ. ಜಿ. ಪರಮೇಶ್ವರ್ , ಕೆಪಿಸಿಸಿ ಅಧ್ಯಕ್ಷ