ಚಾಮರಾಜನಗರ : ಸಚಿವ ವಿ ಸೋಮಣ್ಣ ಅವರಿಗೆ ಚಾಮರಾಜನಗರ ಜಿಲ್ಲೆಯ ಚುನಾವಣಾ ಉಸ್ತುವಾರಿ ನೀಡಬಾರದು ಎಂದು ಚಾಮರಾಜನಗರ ಜಿಲ್ಲಾ ಬಿಜೆಪಿ ವಕ್ತಾರ ಅಯ್ಯನಪುರ ಶಿವಕುಮಾರ್ ಒತ್ತಾಯಿಸಿದರು.
ನಗರದಲ್ಲಿ ಇಂದು ಬಿಜೆಪಿಯ 6 ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರೊಂದಿಗೆ ಸುದ್ದಿಗೋಷ್ಢಿ ನಡೆಸಿದ ಅವರು, ಸೋಮಣ್ಣ ಕಾಂಗ್ರೆಸ್ ಸೇರುವ ಊಹಾಪೋಹವಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬಾರದು. ಕಳೆದ ಬಾರಿ ಚುನಾವಣೆಯಲ್ಲಿ ಸೋಮಣ್ಣ ನಮ್ಮ ಪಕ್ಷದ ಪರ ಕೆಲಸ ಮಾಡಿಲ್ಲ. ನಮ್ಮ ಅಭ್ಯರ್ಥಿ ವಿರುದ್ಧ ಗೆದ್ದ ಅಭ್ಯರ್ಥಿಗೆ ಮನೆಯನ್ನೇ ಗಿಫ್ಟ್ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಪಕ್ಷದ ಪರ ಕೆಲಸ ಮಾಡಿಲ್ಲ. ಹೀಗಾಗಿ ಅವರಿಗೆ ಇಲ್ಲಿಂದ ಸ್ಪರ್ಧಿಸಲು ಅವಕಾಶ ನೀಡಬಾರದು. ಅವರಿಗೆ ಚುನಾವಣಾ ಉಸ್ತುವಾರಿಯನ್ನು ನೀಡಬಾರದು ಎಂದರು.
ತನಗೆ ಚಾಮರಾಜನಗರ ಚುನಾವಣಾ ಉಸ್ತುವಾರಿ ಮತ್ತು ಟಿಕೆಟ್ ನೀಡಬೇಕು. ಇಲ್ಲವಾದರೆ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತೇನೆ ಎಂದು ಅವರು ದೆಹಲಿಯಲ್ಲಿ ಬ್ಲಾಕ್‌ಮೇಲ್ ಮಾಡಿದ್ದಾರೆ. ಸೋಮಣ್ಣ ನನಗೆ ಫೋನ್ ಮಾಡಿ ಸುದ್ದಿಗೋಷ್ಠಿ ಮಾಡಬೇಡಿ ಎಂದು ಹೇಳಿದರು. ಅವರು ಚಾಮರಾಜನಗರ ಜಿಲ್ಲೆಯಲ್ಲೇ ಸ್ಪರ್ಧೆ ಮಾಡಬಾರದು. ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಲು ಬಿಡಲ್ಲ ಎಂದು ಗುಡುಗಿದರು.
ಇದನ್ನೂ ಓದಿ:ಮೂರು ತಾಸಿಗೂ ಹೆಚ್ಚು ಬೈಕ್ ನೊಳಗೆ ಹೊಕ್ಕ ಹಾವು; ಬೈಕ್ ಮಾಲೀಕರ ಪರದಾಟ
ಸೋಮಣ್ಣ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿಲ್ಲ. ಜನ ಸಂಕಲ್ಪ ರಥಯಾತ್ರೆಯಲ್ಲೂ ಪಾಲ್ಗೊಳ್ಳಲಿಲ್ಲ. ಕಳೆದ ಒಂದೂವರೆ ವರ್ಷದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ರೀತಿ ನಡೆದುಕೊಂಡಿದ್ದಾರೆ. ಜಿಲ್ಲೆಗೆ ಸೋಮಣ್ಣ ಬೇಕು ಎಂಬುವವರು ಅವರ ಕೆಲವು ಬೆಂಬಲಿಗರು ಮಾತ್ರ. ಪಕ್ಷದ ಅಧಿಕಾರದಲ್ಲಿರುವವರು ಸೋಮಣ್ಣ ಜಿಲ್ಲೆಗೆ ಬೇಡ ಎಂದು ಹೇಳುತ್ತಾರೆ ಎಂದು ಅಯ್ಯನಪುರ ಶಿವಕುಮಾರ್ ಹೇಳಿದರು.