Advertisement

ಮಳೆ ಬಂದ್ರೆ ಹೊಳೆಯಂತಾಗುತ್ತೆ ಅಫಜಲಪುರ

10:44 AM Jun 10, 2018 | Team Udayavani |

ಅಫಜಲಪುರ: ಮೊದಲೆಲ್ಲ ಜನರಲ್ಲಿ ಅರಿವಿನ ಕೊರತೆ ಇತ್ತು. ನಗರ ಪ್ರದೇಶಗಳ ಬೆಳವಣಿಗೆ, ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳು ಜನರಿಗೆ ತಡವಾಗಿ ಲಭ್ಯವಾಗುತ್ತಿದ್ದವು. ಆದರೆ ಆಧುನಿಕ ಕಾಲದಲ್ಲೂ ಇಲ್ಲೊಂದು ಪಟ್ಟಣ ಓಬಿರಾಯನ ಕಾಲದಂತೆ ಇದೆ. ಇಲ್ಲಿ ರಸ್ತೆ ಯಾವುದೋ..ಚರಂಡಿ ಯಾವುದೋ..ಎನ್ನುವುದು ತಿಳಿಯದಂತೆ ಇದೆ.

Advertisement

ಇದು ರಾಜ್ಯದ ಅತೀ ಹಿಂದುಳಿದ ತಾಲೂಕು ಎಂಬ ಕುಖ್ಯಾತಿ ಹೊಂದಿದ ಅಫಜಲಪುರ ಪಟ್ಟಣದ ವ್ಯಥೆ. ಈ ಪಟ್ಟಣ ಸುಮಾರು ದಶಕಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಒಂದು ಮಳೆ ಬಂದರೆ ಇಲ್ಲಿನ ಬಹುತೇಕ ರಸ್ತೆಗಳು ಹೊಳೆಯಂತೆ ಭಾಸವಾಗುತ್ತವೆ. ನೀರು ಹರಿದು ಹೋಗಲು ಗುಣಮಟ್ಟದ್ದಲ್ಲದೆ ಹೋದರೂ ಸಹ ನೀರು ಹರಿದು ಹೋಗುವ ವ್ಯವಸ್ಥೆ ಇರುವ ಚರಂಡಿ ವ್ಯವಸ್ಥೆಯೂ ಇಲ್ಲಿಲ್ಲ.
 
ಎಲ್ಲಿ ನೋಡಿದರೂ ಮುಚ್ಚಿ ಹೋದ ಚರಂಡಿಗಳು. ಹೀಗಾಗಿ ಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತಿರುತ್ತದೆ. ಈಗ ಮಳೆಗಾಲ ಶುರುವಾಗಿದ್ದರಿಂದ ಚರಂಡಿ ನೀರಿನೊಂದಿಗೆ ಮಳೆ ನೀರು ಸೇರಿಕೊಂಡು ಪಟ್ಟಣದ ರಸ್ತೆಗಳು ಹೊಳೆಯಂತೆ ಕಾಣುತ್ತಿವೆ.

ಮಾಸ್ಟರ್‌ ಪ್ಲಾನ್‌ ಮರೀಚಿಕೆ: ಪಟ್ಟಣಕ್ಕೆ ಮಾಸ್ಟರ್‌ ಪ್ಲಾನ್‌ ಬರುತ್ತದೆ. ಪಟ್ಟಣದ ರಸ್ತೆಗಳು ಅಗಲವಾಗಿ ಸುಂದರ ನಗರ ನಿರ್ಮಾಣ ಆಗಲಿದೆ ಎಂದು ಇಲ್ಲಿನ ನಿವಾಸಿಗಳು ಕನಸು ಕಂಡಿದ್ದರು. ಆ ಕನಸಿಗೆ ಇನ್ನು ರೆಕ್ಕೆ ಪುಕ್ಕವು ಬಂದಿಲ್ಲ. ಈ ಮಾಸ್ಟರ್‌ ಪ್ಲಾನ್‌ ಯೋಜನೆ ಕೇಳಿ ಕೇಳಿ ನಾವೇ ಮುದುಕರಾಗಿದ್ದೇವೆ ಎಂದು ಇಲ್ಲಿನ ನಿವಾಸಿಗಳು ಅಳಲು
ತೋಡಿಕೊಳ್ಳುತ್ತಾರೆ.

ಇರುವ ಚರಂಡಿಗಳನ್ನು ಮುಚ್ಚಿದರು: ಪಟ್ಟಣದ ನೈರ್ಮಲ್ಯ, ಮೂಲಭೂತ ಸೌಕರ್ಯ ಕಲ್ಪಿಸುವ ಜವಾಬ್ದಾರಿ ಹೊತ್ತ ಪುರಸಭೆ ಹಳೆಯ ಕಾಲದ ಚರಂಡಿಗಳನ್ನು ಅಗೆದರು, ಮುಚ್ಚಿದರು, ಹೊಸ ಚರಂಡಿಗಳನ್ನು ನಿರ್ಮಿಸಿದರು. ಅನುದಾನದ ದುರ್ಬಳಕೆ, ಅವೈಜ್ಞಾನಿಕ ಕಾಮಗಾರಿಗಳು ಅಂತ ಹೇಳಿ ಪಟ್ಟಣದ ಜನರು ಬೀದಿಗೂ ಇಳಿದಿದ್ದರು. ಆದರೆ ಜನರ ಸಿಟ್ಟು ಮಳೆಗಾಲ ಮುಕ್ತಾಯದ ವರೆಗೆ ಮಾತ್ರ ಇತ್ತು. ಪುನಃ ಪುರಸಭೆವರು ಅದೇ ಕಾಯಕ ಮುಂದುವರಿಸಿದರು. ಒಟ್ಟಿನಲ್ಲಿ ಪಟ್ಟಣದಲ್ಲಿ ಯಾವ ಕಾಮಗಾರಿಗೂ ಶಾಶ್ವತ ಮುಕ್ತಿ ಎನ್ನುವುದಿಲ್ಲ. ಹಾಗೆ ಯಾವುದೇ ಸಮಸ್ಯೆಗೂ ಶಾಶ್ವತ ಪರಿಹಾರವೂ ಇಲ್ಲದಂತಾಗಿದೆ.
 
ಅನುದಾನ ದುರ್ಬಳಕೆಯೊಂದೆ ಗೊತ್ತು: ಅಫಜಲಪುರ ಪಟ್ಟಣಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಸಾಕಷ್ಟು ಪ್ರತಿಭಟನೆ, ಮನವಿ, ಧರಣಿಗಳನ್ನು ಮಾಡಿದರೂ ಸಂಬಂಧಪಟ್ಟವರ ಕಣ್ಣು ತೆರೆದಿಲ್ಲ. ಜನಪ್ರತಿನಿಧಿ ಗಳಿಗೆ ಮತ್ತು ಅಧಿಕಾರಿಗೆ ಅಭಿವೃದ್ಧಿ ಬೇಕಾಗಿಲ್ಲ. ಅನುದಾನದ ದುರ್ಬಳಕೆ ಮಾಡುವುದು ಮಾತ್ರ ಚೆನ್ನಾಗಿ ಗೊತ್ತಿದೆ ಎಂದು ಸುರೇಶ ಅವಟೆ ಹಾಗೂ ಇನ್ನಿತರ ಪಟ್ಟಣದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪಟ್ಟಣದ ಚರಂಡಿಗಳ ಸ್ವತ್ಛತೆ ಮತ್ತು ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಿಸುವಂತೆ ಪುರಸಭೆ ಮುಖ್ಯಾಧಿ ಕಾರಿಗೆ ಸೂಚಿಸಿದ್ದೇನೆ. ಪಟ್ಟಣದ ನೈರ್ಮಲ್ಯ ಸಮಸ್ಯೆ ನಿವಾರಣೆಗೆ ಬೇಕಾದ ಎಲ ಕ್ರಮಗಳನ್ನು ಈ ಬಾರಿ
ಕೈಗೊಳ್ಳಲಾಗುತ್ತಿದೆ. ಮಾಸ್ಟರ್‌ ಪ್ಲಾನ್‌ ಆದಷ್ಟು ಶೀಘ್ರವೇ ಆಗಲಿದೆ.  
 ಎಂ.ವೈ. ಪಾಟೀಲ, ಶಾಸಕರು

Advertisement

ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಮೊದಲಿದ್ದವರ ವೇತನವನ್ನು ಪಾವತಿ ಮಾಡಲು ಆಗಿಲ್ಲ. 12 ಮಹಿಳೆಯರು,
ಇಬ್ಬರು ಪುರುಷ ಕಾರ್ಮಿಕರಿದ್ದಾರೆ. ಹೊರಗುತ್ತಿಗೆ ಕಾರ್ಮಿಕರಿದ್ದರು. ಅವರ ಟೆಂಡರ್‌ ಏಪ್ರಿಲ್‌ 10ಕ್ಕೆ ಮುಗಿದಿದೆ.
ಹೀಗಾಗಿ ಪಟ್ಟಣದ ನೈರ್ಮಲ್ಯ ಸಮಸ್ಯೆ ಸರಿಪಡಿಸಲು ಸಾಧ್ಯವಾಗುತ್ತಿಲ್ಲ. ಶೀಘ್ರವೇ ಚರಂಡಿಗಳನ್ನು ಸ್ವತ್ಛಗೊಳಿಸಲಾಗುತ್ತದೆ. 
 ನಾಗಪ್ಪ ಆರೇಕರ, ಪುರಸಭೆ ಅದ್ಯಕ್ಷ  ವಿಠ್ಠಲ ಹಾದಿಮನಿ, ಮುಖ್ಯಾಧಿಕಾರಿ ಪುರಸಭೆ

ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next