ಜೈಪುರ : ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿಯವರ ಮುಂದುವರಿಕೆ ಅನಿಶ್ಚಿತವಾಗಿರುವ ನಡುವೆಯೇ, ರಾಜಸ್ಥಾನ ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ, ಸಚಿನ್ ಪೈಲಟ್ ತಮ್ಮ ಶಾಸಕ ತಂಡದೊಂದಿಗೆ ಕಾಂಗ್ರೆಸ್ ತೊರೆಯುವರೆಂಬ ಊಹಾಪೋಹಗಳು ಈಗ ಗರಿಗೆದರಿವೆ.
ಸಚಿನ್ ಪೈಲಟ್ 2014ರಲ್ಲಿ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾಗುವಲ್ಲಿ ರಾಹುಲ್ ಗಾಂಧಿ ಕಾರಣರಾಗಿದ್ದರು. ಕಳೆದ ವರ್ಷದ ವಿಧಾನಸಭೆ ಚುನಾವಣೆಯ ಬಳಿಕ ಪೈಲಟ್ ಅವರನ್ನು ಅಶೋಕ್ ಗೆಹಲೋಟ್ ಅವರ ಸರಕಾರದಲ್ಲಿ ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು.
ಈಗ ಕಾಂಗ್ರೆಸ್ ಅಧ್ಯಕ್ಷರೇ ತಮ್ಮ ಪದಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಸಚಿನ್ ಪೈಲಟ್ ಭವಿಷ್ಯ ಅನಿಶ್ಚಿತತೆಯಲ್ಲಿ ತೂಗಾಡುತ್ತಿದೆ ಎಂದು ಮೂಲಗಳು ಹೇಳಿವೆ.
ಒಂದೊಮ್ಮೆ ಸಚಿನ್ ಅವರ ನೆಲೆಯನ್ನು ಕಾಂಗ್ರೆಸ್ ಬದಲಾಯಿಸಲು ಮುಂದಾದಲ್ಲಿ, ಸಚಿನ್ ತನ್ನ ಶಾಸಕರ ತಂಡದೊಂದಿಗೆಕಾಂಗ್ರೆಸ್ ತೊರೆದು, ಪಕ್ಷೇತರರು ಮತ್ತು ಕೆಲವು ಬಿಜೆಪಿ ಶಾಸಕರ ಬೆಂಬಲದೊಂದಿಗೆ ರಾಜಸ್ಥಾನದಲ್ಲಿ ಹೊಸ ಸರಕಾರ ರಚಿಸುವ ದಾವಾ ಮಂಡಿಸಲಿದ್ದಾರೆ ಎಂಬ ಊಹಾಪೋಹ ರಾಜಕೀಯ ವಲಯಗಳಲ್ಲಿ ಕೇಳಿ ಬರುತ್ತಿದೆ.
200 ಸದಸ್ಯ ಬಲ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ 100 ಸದಸ್ಯರನ್ನು ಹೊಂದಿದೆ. ಉಳಿದಂತೆ ಬಿಜೆಪಿ 73, ಬಿಎಸ್‌ಪಿ 6, ಆರ್‌ಎಲ್‌ಪಿ 3, ಸಿಪಿಎಂ 2, ಬಿಟಿಪಿ 2 ಮತ್ತು ಆರ್‌ಎಲ್‌ಡಿ 1 ಹಾಗೂ 13 ಪಕ್ಷೇತರ ಸದಸ್ಯರು ಇದ್ದಾರೆ.
ಪ್ರಕೃತ ಗೆಹಲೋಟ್ ಸರಕಾರಕ್ಕೆ 6 ಬಿಎಸ್‌ಪಿ ಶಾಸಕರು ಮತ್ತು 12 ಪಕ್ಷೇತರರ ಬೆಂಬಲವಿದೆ. ಹಾಗಿದ್ದರೂ ಅದೀಗ ಸಂಕಷ್ಟದಲ್ಲಿದೆ.
ಕಳೆದ ಸೋಮವಾರ ಬಿಎಸ್‌ಪಿ ಶಾಸಕರು ರಾಜ್ಯಪಾಲ ಕಲ್ಯಾಣ್ ಸಿಂಗ್ ಅವರನ್ನು ಭೇಟಿಯಾಗುವವರಿದ್ದರು. ಆದರೆ ಕೊನೇ ಕ್ಷಣದಲ್ಲಿ ಅವರ ಭೇಟಿ ರದ್ದಾಗಿತ್ತು.