Advertisement
ಹೀಗೆಂದು ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ. ಮಣಿಪುರ ಗಲಭೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಒತ್ತಾಯಿಸಿ ಈಗಾಗಲೇ ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿ ನೋಟಿಸ್ ನೀಡಿವೆ. ಆದರೆ, ಈ ಗೊತ್ತುವಳಿ ಕುರಿತು ಚರ್ಚೆ ನಡೆಸದೇ, ಸರ್ಕಾರವು ವಿಧೇಯಕಗಳ ಮಂಡನೆ-ಅಂಗೀಕಾರ ಪ್ರಕ್ರಿಯೆ ನಡೆಸುತ್ತಿರುವ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷಗಳ ನಾಯಕರಿಗೆ ಸಚಿವ ಜೋಶಿ ಈ ರೀತಿ ಸವಾಲು ಹಾಕಿದ್ದಾರೆ.
Related Articles
Advertisement
ನಾಟಕ ಮಾಡಬೇಡಿ: ಡೆರೆಕ್ ವಿರುದ್ಧ ಧನ್ಕರ್ ಗರಂ
ಒಂದು ವಾರದಿಂದಲೂ ಗದ್ದಲದಿಂದಾಗಿ ಕಲಾಪಗಳು ನಡೆಯುತ್ತಲೇ ಇಲ್ಲ. ಇದರ ಮಧ್ಯೆಯೇ ಶುಕ್ರವಾರ ರಾಜ್ಯಸಭೆಯು ತೃಣಮೂಲ ಕಾಂಗ್ರೆಸ್ ಸದಸ್ಯ ಡೆರೆಕ್ ಒ ಬ್ರಿಯಾನ್ ಮತ್ತು ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನ್ಕರ್ ನಡುವಿನ ವಾಗ್ವಾದಕ್ಕೆ ಸಾಕ್ಷಿಯಾಯಿತು. ಪ್ರತಿಪಕ್ಷಗಳ ಗದ್ದಲದಿಂದ ಬೇಸತ್ತ ಧನ್ಕರ್ ಅವರು, ಇಡೀ ದೇಶವೇ ಸಂಸತ್‌ನ ಆಗುಹೋಗುಗಳನ್ನು ನೋಡುತ್ತಿದೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಡೆರೆಕ್ ಒ ಬ್ರಿಯಾನ್, “ನಮಗೆ ಅದು ಗೊತ್ತು’ ಎಂದರು. ಆಗ ಧನ್ಕರ್, “ಮಾತಾಡುವುದು ಬಿಟ್ಟು ಕಿವಿಗೊಟ್ಟು ಕೇಳಿ, ಮೊದಲು ನಿಮ್ಮ ಆಸನದಲ್ಲಿ ಕುಳಿತುಕೊಳ್ಳಿ’ ಎಂದು ಸೂಚಿಸಿದರು. ಆದರೂ, ಡೆರೆಕ್ ಅವರು ತಮ್ಮ ಮಾತುಗಳನ್ನು ಮುಂದುವರಿಸಿದರು. ಇದರಿಂದ ಕೆಂಡಾಮಂಡಲರಾದ ಧನ್ಕರ್, “ಮಿಸ್ಟರ್ ಡೆರೆಕ್ ಒ ಬ್ರಿಯಾನ್, ಈ ರೀತಿ ನಾಟಕವಾಡುವುದು ನಿಮಗೆ ಚಾಳಿಯಾಗಿಬಿಟ್ಟಿದೆ.
ಕನಿಷ್ಠಪಕ್ಷ ಸಭಾಧ್ಯಕ್ಷರ ಪೀಠಕ್ಕಾದರೂ ಗೌರವ ಕೊಡಿ’ ಎಂದರು. ಆಗ ಸಿಟ್ಟಾದ ಡೆರೆಕ್, “ನಾಟಕ? ಈ ಪದವನ್ನು ನಾನು ಆಕ್ಷೇಪಿಸುತ್ತೇನೆ. ನಾನು ಸದನದ ರೂಲ್‌ಗಳ ಬಗ್ಗೆ ಮಾತನಾಡುತ್ತಿದ್ದೇನೆ. ಮಣಿಪುರ ವಿಚಾರದಲ್ಲಿ ಗಂಭೀರ ಚರ್ಚೆಯಾಗಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ’ ಎಂದರು. ಗದ್ದಲ ಹೆಚ್ಚಾದಾಗ ಕಲಾಪವನ್ನು ಮುಂದೂಡಲಾಯಿತು.
3 ವಿಧೇಯಕ ಅಂಗೀಕಾರ
ಲೋಕಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆಯೇ ಮೂರು ವಿಧೇಯಕಗಳು ಅಂಗೀಕಾರಗೊಂಡಿವೆ. ಗಣಿ ಮತ್ತು ಖನಿಜ ತಿದ್ದುಪಡಿ ವಿಧೇಯಕ, ರಾಷ್ಟ್ರೀಯ ಶುಶ್ರೂಷಕ ಮತ್ತು ಪ್ರಸವಶಾಸ್ತ್ರ ಆಯೋಗ ವಿಧೇಯಕ, 2023 ಮತ್ತು ರಾಷ್ಟ್ರೀಯ ದಂತ ಆಯೋಗ ವಿಧೇಯಕ, 2023ಕ್ಕೆ ಅಂಗೀಕಾರ ಪಡೆಯಲಾಗಿದೆ. ಇದೇ ವೇಳೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಐಎಂ) ಕಾಯ್ದೆ, 2017ಕ್ಕೆ ತಿದ್ದುಪಡಿ ತರುವಂಥ ವಿಧೇಯಕವನ್ನು ಶುಕ್ರವಾರ ಮಂಡಿಸಲಾಗಿದೆ.
ಏನಿದು ಗಣಿ, ಖನಿಜ ವಿಧೇಯಕ?:
ಕೆಲವು ನಿರ್ದಿಷ್ಟ ಖನಿಜಗಳ ಅನ್ವೇಷಣೆಗಾಗಿ ಖಾಸಗಿ ವಲಯಕ್ಕೂ ಪರವಾನಗಿ ಒದಗಿಸುವ ವಿಧೇಯಕ ಇದಾಗಿದೆ. ಅಲ್ಲದೇ, ಗಣಿ ಮತ್ತು ಖನಿಜಗಳ ತಿದ್ದುಪಡಿ ವಿಧೇಯಕವು, ಗಣಿಗಳನ್ನು ಹರಾಜು ಹಾಕುವ ಮತ್ತು ನಿರ್ದಿಷ್ಟ ಖನಿಜಗಳ ಶೋಧನೆಗೆ ಲೈಸೆನ್ಸ್ ಒದಗಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಇದರಿಂದಾಗಿ, 1 ಶತಕೋಟಿ ಟನ್ ಕಲ್ಲಿದ್ದಲು ಉತ್ಪಾದನೆ ಸಾಧ್ಯವಾಗಲಿದ್ದು, ಭಾರತವು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಎಂಬಿಬಿಎಸ್ ಸೀಟುಗಳ ಹೆಚ್ಚಳ
2014ಕ್ಕೆ ಹೋಲಿಸಿದರೆ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ ಶೇ.82ರಷ್ಟು ಹೆಚ್ಚಳವಾಗಿದ್ದು, ಆಗ 387 ಇದ್ದಿದ್ದು ಈಗ 704ಕ್ಕೇರಿಕೆಯಾಗಿದೆ ಎಂದು ಲೋಕಸಭೆಗೆ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ಲಿಖೀತ ಮಾಹಿತಿ ನೀಡಿದ್ದಾರೆ. ಜತೆಗೆ, ಎಂಬಿಬಿಎಸ್ ಸೀಟುಗಳ ಸಂಖ್ಯೆಯಲ್ಲೂ ಶೇ.110ರಷ್ಟು ಏರಿಕೆಯಾಗಿದ್ದು, 2014ರಲ್ಲಿ 51,348 ಇದ್ದ ಎಂಬಿಬಿಎಸ್ ಸೀಟುಗಳು ಈಗ 1,07,948ಕ್ಕೇರಿವೆ ಎಂದೂ ಅವರು ತಿಳಿಸಿದ್ದಾರೆ.
ಇಂಡಿಯಾ ನಿಯೋಗದಿಂದ ಇಂದು ಮಣಿಪುರ ಭೇಟಿ
ಶನಿವಾರದಿಂದ 2 ದಿನಗಳ ಕಾಲ ಪ್ರತಿಪಕ್ಷಗಳ 20 ನಾಯಕರ ನಿಯೋಗವು ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಲಿದೆ. ಈ ಕುರಿತು ಶುಕ್ರವಾರ ಮಾಹಿತಿ ನೀಡಿದ ಲೋಕಸಭೆಯಲ್ಲಿನ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೋಯ್, “ಮೊದಲಿಗೆ ನಾವು ಮಣಿಪುರದ ನೈಜ ಸ್ಥಿತಿಗತಿಯನ್ನು ಅವಲೋಕಿಸಲಿದ್ದೇವೆ. ನಂತರ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ಸಂಸತ್‌ಗೆ ಕೆಲವು ಶಿಫಾರಸುಗಳನ್ನು ಸಲ್ಲಿಸಲಿದ್ದೇವೆ’ ಎಂದಿದ್ದಾರೆ. ಇದೇ ವೇಳೆ, ಮಣಿಪುರ ಗಲಭೆ ಕುರಿತು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.