ಹಾನಗಲ್ಲ: ಆನ್‌ಲೈನ್ ಅಪರಾಧಗಳು ದಿನದಿಂದ ದಿನಕ್ಕೆ ಆರ್ಥಿಕ, ಸಾಮಾಜಿಕ ಸಂಕಷ್ಟಗಳನ್ನು ತಂದೊಡ್ಡುತ್ತಿದ್ದು, ಬಳಕೆದಾರರು ಎಚ್ಚರ ತಪ್ಪಿದರೆ ಅನಾಹುತಗಳಿಗೆ ಅವಕಾಶವಾದೀತು ಎಂದು ಹಾವೇರಿ ಜಿಲ್ಲಾ ಸೈಬರ್ ಕ್ರೈಂ ವಿಭಾಗದ ಸಿಪಿಐ ಸಂತೋಷ ಪವಾರ ಎಚ್ಚರಿಕೆ ನೀಡಿದರು.
ಹಾನಗಲ್ಲಿನ ಗುರುಭವನದಲ್ಲಿ ತಾಲೂಕಿನ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು, ಪ್ರೌಢಶಾಲಾ ಮುಖ್ಯ ಶಿಕ್ಷಕರಿಗಾಗಿ ನಡೆದ ಸೈಬರ್ ಕ್ರೈಂ ತಿಳಿವಳಿಕೆ ಶಿಬಿರದಲ್ಲಿ ಆನ್‌ಲೈನ್ ಮೂಲಕ ನಡೆಯುವ ವ್ಯವಹಾರಗಳು ಹಾಗೂ ಮೊಬೈಲ್ ಬಳಕೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಮೋಸದ ವ್ಯವಹಾರಗಳ ಕುರಿತು ಮಾಹಿತಿ ನೀಡಿದ ಅವರು, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಅತೀ ಹೆಚ್ಚು ಆನ್‌ಲೈನ್ ಮೋಸ ಪ್ರಕರಣಗಳು ದಾಖಲಾಗಿವೆ.
ದೇಶದ ಈಶಾನ್ಯ ರಾಜ್ಯಗಳಿಂದ ಇಂತಹ ಮೋಸ ವ್ಯವಹಾರ ಹೆಚ್ಚು ಪಾಲು ನಡೆಯುತ್ತಿದೆ. ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವಾಗ ಮೋಸಗಾರರ ಬಲೆಗೆ ವಿದ್ಯಾವಂತರೇ ಬೀಳುತ್ತಿದ್ದಾರೆ. ಹಣದ ವಹಿವಾಟನ್ನು ನೇರವಾಗಿ ಬ್ಯಾಂಕ್ ಮೂಲಕವೇ ನಡೆಸುವುದು ಉಚಿತ. ಕೊಟ್ಟಿ ಕ್ರೆಡಿಟ್ ಕಾರ್ಡ್‌ಗಳನ್ನು ಅದಲು ಬದಲಾಗಿ ಬಳಸಿ ಮೋಸಗೊಳಿಸುವ ಜಾಲವೇ ಇದೆ. ಮೈಮರೆತು ಮಾನ-ಹಣ ಹಾನಿಗೆ ಅವಕಾಶ ನೀಡಬೇಡಿ ಎಂದು ಎಚ್ಚರಿಸಿದರು.
ಹಾವೇರಿ ಕ್ರೈಂ ವಿಭಾಗದ ಪೊಲೀಸ್ ಅಧಿಕಾರಿ ಆನಂದ ದೊಡ್ಡಕುರುಬರ ಮಾತನಾಡಿ, ಹಳ್ಳಿ ಪಟ್ಟಣಗಳೆನ್ನದೆ ಎಲ್ಲೆಡೆ ಸೈಬರ್ ಕ್ರೈಂಗಳು ನಡೆಯುತ್ತಿವೆ. ಸಾರ್ವಜನಿಕರು ಆನ್‌ಲೈನ್ ಹಾಗೂ ಮೊಬೈಲ್ ಮೂಲಕ ವ್ಯವಹರಿಸುವ ಸಂದರ್ಭದಲ್ಲಿ ಮೈಮರೆತು ಹೋಗುತ್ತಿರುವುದೇ ಮೋಸಗಾರರಿಗೆ ಲಾಭವಾಗುತ್ತಿದೆ. ಯಾವುದೇ ಮೊಬೈಲ್ ಮೂಲಕ ಒಟಿಪಿ ಕೇಳಿದರೆ ಕೊಡುವುದು ಉಚಿತವಲ್ಲ ಎಂದರು.
ಬಿಇಒ ಕಾರ್ಯಾಲಯದ ಸಮನ್ವಯಾಧಿಕಾರಿ ಡಾ| ಬಿ.ಎಂ. ಬೇವಿನಮರದ, ಪ್ರಾಚಾರ್ಯ ಪ್ರೊ| ಮಾರುತಿ ಶಿಡ್ಲಾಪುರ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಐ.ಪಿ. ಕುಂಕೂರ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಕರಿಯಣ್ಣನವರ, ಶಿಕ್ಷಣ ಸಂಯೋಜಕ ಉಮೇಶ, ಕ್ರೈಂ ವಿಭಾಗದ ಸಿಬ್ಬಂದಿ ಮಂಜುನಾಥ ಎರೇಸೀಮಿ, ಹನುಮಂತ ಗಾಜಿಗೌಡರ ಇದ್ದರು.