Advertisement

ಒಬ್ಬಳನ್ನು ಕೊಂದರೆ ನೂರು ಗೌರಿಯರು ಹುಟ್ಟುತ್ತಾರೆ

10:05 AM Sep 07, 2017 | Team Udayavani |

ಅಫಜಲಪುರ: ಕನ್ನಡ ನಾಡಿನಲ್ಲಿ ವಿಚಾರವಾದಿಗಳು, ಚಿಂತಕರು, ಪ್ರಗತಿಪರರನ್ನು ಗುರಿಯಾಗಿಸಿಕೊಂಡು ಕೊಲ್ಲಲಾಗುತ್ತಿದೆ. ಅವರ ಸಾಲಿನಲ್ಲಿ ಗೌರಿ ಲಂಕೇಶ ಕೂಡ ಸೇರಿದ್ದಾರೆ. ಆದರೆ ಒಬ್ಬ ಗೌರಿಯನ್ನು ಕೊಂದೆವೆಂದು ಖುಷಿ ಪಟ್ಟುಕೊಳ್ಳುವ ಮನುವಾದಿಗಳು ದಿನದಿನಕ್ಕೆ ನೂರಾರು ಗೌರಿಗಳು ಹುಟ್ಟಿಕೊಳ್ಳಲಿದ್ದಾರೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಪ್ರಾಂತ ರೈತ ಸಂಘದ ಅಧ್ಯಕ್ಷ, ವಿಚಾರವಾದಿ ಶ್ರೀಮಂತ ಬಿರಾದಾರ ಹೇಳಿದರು.

Advertisement

ತಾಲೂಕಿನ ಪ್ರಗತಿಪರರು, ಚಿಂತಕರು, ಸಾಹಿತಿಗಳೊಂದಿಗೆ ಕನ್ನಡ ಭವನದಿಂದ ತಹಶೀಲ್ದಾರ ಕಚೇರಿ ವರೆಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ ದಯಾನಂದ ಪಾಟೀಲಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ನಕ್ಸಲ್‌ರನ್ನು ಮುಖ್ಯವಾಹಿನಿಗೆ ತಂದ, ತುಳಿತಕ್ಕೊಳಗಾದವರಿಗೆ ನ್ಯಾಯ ಒದಗಿಸುವ ಕೆಲಸ ಸೇರಿದಂತೆ ಅನ್ಯಾಯ ಕಂಡಾಗ ಉಗ್ರವಾಗಿ ಧ್ವನಿ ಎತ್ತುತ್ತಿದ್ದ ದಿಟ್ಟ ಮಹಿಳೆಯನ್ನು ಮೋಸದಿಂದ ಕೊಲ್ಲಿಸಿದ್ದಾರೆ. ಹೀಗಾಗಿ ಈ ಮೋಸಗಾರರಿಗೆ ಸರ್ಕಾರ ಸರಿಯಾದ ಪಾಠ ಕಲಿಸಬೇಕು, ಕೊಲೆಗಾರರನ್ನು ತಕ್ಷಣವೇ ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಸವರಾಜ ಚಾಂದಕವಟೆ, ಜೈ ಕರವೇ ತಾಲೂಕು ಅಧ್ಯಕ್ಷ ಸುರೇಶ ಅವಟೆ ಮಾತನಾಡಿ, ಶೋಷಣೆಗೆ ಒಳಗಾಗಿದ್ದ ಜನರ ಪರ ಧ್ವನಿಯಾಗಿದ್ದ ಗೌರಿ ಲಂಕೇಶ್‌ರನ್ನು ಮೋಸದಿಂದ ಕೊಲ್ಲಿಸಿರಬಹುದು. ಅವರ ವಿಚಾರಗಳನ್ನು ಕೊಲ್ಲಲಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಅಮೃತರಾವ್‌ ಪಾಟೀಲ, ಶಂಕರೆಪ್ಪ ಮಣೂರ, ರಾಹುಲ್‌ ಸಿಂಪಿ, ರಾಜು ಆರೇಕರ, ಡಾ| ಸಿ.ವಿ ಟಕ್ಕಳಕಿ, ಡಾ|ಸಂಗಮೇಶ ಸಿಂಗೆ, ಗೌತಮ ಸಕ್ಕರಗಿ, ಮಹೇಶ ಅಲೇಗಾಂವ, ಬಿಲಾಲ್‌ ಅಹ್ಮದ್‌ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next