ಕೋಲ್ಕತಾ:ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ(ಫೆ.11) ತೀವ್ರ ವಾಗ್ದಾಳಿ ನಡೆಸಿದ್ದು, ಭಾರತೀಯ ಜನತಾ ಪಕ್ಷದ ಯಾತ್ರೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯದಲ್ಲಿ ಟಿಎಂಸಿ ಗೂಂಡಾಗಳು 130 ಬಿಜೆಪಿ ಕಾರ್ಯಕರ್ತರನ್ನು ಕೊಂದಿರುವುದಾಗಿ ಆರೋಪಿಸಿರುವ ಶಾ, ಈವರೆಗೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.
ಇದನ್ನೂ ಓದಿ:ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರೆ ಸೂಕ್ತ ಕ್ರಮ : ರವಿ ಶಂಕರ್ ಪ್ರಸಾದ್
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು “ಕೂಚ್ ಬೆಹರ್” ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪಶ್ಚಿಮಬಂಗಾಳದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ನಡೆಸುತ್ತಿರುವ ಬಿಜೆಪಿ ಯಾತ್ರೆಯನ್ನು ಟಿಎಂಸಿ ಗೂಂಡಾಗಳಿಂದ ತಡೆಯಲು ಸಾಧ್ಯವಿಲ್ಲ. ಒಂದು ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಪ್ರತಿಯೊಬ್ಬ ಕೊಲೆಗಡುಕನನ್ನು ಜೈಲಿಗೆ ಅಟ್ಟುವುದಾಗಿ ಅಮಿತ್ ಶಾ ಭರವಸೆ ನೀಡಿದರು.
ಭಾರತೀಯ ಜನತಾ ಪಕ್ಷದ ಪರಿವರ್ತನ್ ಯಾತ್ರೆಯಿಂದ ಪಶ್ಚಿಮಬಂಗಾಳದ ಮುಖ್ಯಮಂತ್ರಿಯನ್ನು ಮಾತ್ರ ಬದಲಾಯಿಸುವುದಿಲ್ಲ, ಜತೆಗೆ ಒಳನುಸುಳುವಿಕೆ ಕೂಡಾ ಕೊನೆಗೊಳ್ಳಲಿದೆ ಎಂದು ಶಾ ಹೇಳಿದರು.
ಪಶ್ಚಿಮಬಂಗಾಳದಲ್ಲಿನ ಇಂತಹ ವಾತಾವರಣದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುವುದು ಅಪರಾಧ ಎಂದಾದರೆ, ಮಮತಾ ದೀದಿ, ಒಂದು ವೇಳೆ ಜೈಶ್ರೀರಾಮ್ ಘೋಷಣೆ ಇಲ್ಲಿ ಕೂಗಲು ಸಾಧ್ಯವಿಲ್ಲವೆಂದಾದರೆ ಪಾಕಿಸ್ತಾನದಲ್ಲಿ ಜೈಶ್ರೀರಾಮ್ ಎಂದು ಘೋಷಣೆ ಕೂಗಬೇಕೇ ಎಂದು ಪ್ರಶ್ನಿಸಿದರು.