Advertisement

ವಾರದೊಳಗೆ ಶಿಕ್ಷಕಿ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಧರಣಿ

05:09 PM May 14, 2022 | Team Udayavani |

ಬಸವಕಲ್ಯಾಣ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯಂದು ನಿರಗುಡಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯಗುರು ಹೇಮರಡ್ಡಿ ಮಲ್ಲಮ್ಮ ಅವರ ಹರಿದ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಲ್ಲಮ್ಮ ಹಾಗೂ ರೆಡ್ಡಿ ಸಮಾಜಕ್ಕೆ ಅಗೌರವ ತೋರಿದ್ದಾರೆ. ಅವರ ವಿರುದ್ಧ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೆಡ್ಡಿ ಸಮಾಜದ ಅಧ್ಯಕ್ಷ ವಿಜಯಕುಮಾರ ರೆಡ್ಡಿ ಸರ್ಕಾರಕ್ಕೆ ಒತ್ತಾಯಿಸಿದರು.

Advertisement

ನಗರದಲ್ಲಿ ಗುರುವಾರ ರೆಡ್ಡಿ ಸಮಾಜದ ವತಿಯಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬ ಮಹಿಳೆಯಾಗಿ ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರಕ್ಕೆ ಅಗೌರವ ತೋರುವ ಮೂಲಕ ಇಡೀ ಮಾನವ ಕುಲ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಹೀಗಾಗಿ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ. ಒಂದು ವಾರದೊಳಗೆ ಇಲಾಖೆ ಕ್ರಮ ಕೈಗೊಳ್ಳದಿದ್ದರೆ ಬಿಇಒ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು.

ನಿವೃತ್ತ ಉಪನ್ಯಾಸಕ ಹೇಮರೆಡ್ಡಿ ಗೌರೆ ಮಾತನಾಡಿ, ರಾಜ್ಯ ಸರ್ಕಾರ ಜಯಂತಿ ಆಚರಿಸಲು 2017ರಲ್ಲಿ ಆದೇಶ ನೀಡಿದೆ. ಆದರೆ ನಿರಗುಡಿ ಶಾಲೆ ಮುಖ್ಯಗುರು ಹೇಮರಡ್ಡಿ ಮಲ್ಲಮ್ಮನ ಹರಿದ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿರುವುದನ್ನು ರೆಡ್ಡಿ ಸಮಾಜ ಖಂಡಿಸುತ್ತದೆ. ಗ್ರಾಮದ ಜನರು ಪ್ರಶ್ನಿಸಿದಾಗ ಅವರನ್ನು ಮುಖ್ಯ ಶಿಕ್ಷಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮೇ 10ರಂದು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರೂ ಇಲ್ಲಿಯವರೆಗೂ ಇಲಾಖೆ ಕ್ರಮಕ್ಕೆ ಮುಂದಾಗಿಲ್ಲ. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ತಾಲೂಕು, ಜಿಲ್ಲಾದ್ಯಂತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ರೆಡ್ಡಿ ಸಮಾಜದ ಮುಖಂಡ ಹಾಗೂ ನ್ಯಾಯವಾದಿ ಸಂಘದ ಅಧ್ಯಕ್ಷ ಸಂಜೀವರೆಡ್ಡಿ ಯರಬಾಗ, ಸತೀಶ ಬಡಿಗೆ ಮಾತನಾಡಿದರು. ಈ ವೇಳೆ ಎಚ್‌.ಎಂ. ಗೌರೆ, ಗುರುನಾಥ ರೆಡ್ಡಿ ಕುದಗೆ, ಸಂಜೀವರೆಡ್ಡಿ ಭೋಗಲೆ, ಯಲ್ಲಾರೆಡ್ಡಿ, ಸತೀಶ ರೆಡ್ಡಿ, ಸಾಯಿರೆಡ್ಡಿ ಕೌಡಿಯಾಳ (ಆರ್‌), ಆಕಾಶ ರೆಡ್ಡಿ, ಗುಂಡುರೆಡ್ಡಿ, ವಿಠಲ ರೆಡ್ಡಿ ಸೇರಿದಂತೆ ಇತರರಿದ್ದರು.

ಒಬ್ಬ ಮಹಿಳಾ ಶಿಕ್ಷಕಿಯಾಗಿ ಮಹಿಳಾ ಮಹಾ ಪುರುಷರನ್ನು ಅಗೌರ ತೋರಿದ್ದು ನಾಚಿಕೆಯ ಸಂಗತಿ. ಹೀಗಾಗಿ ಇಲಾಖೆ ಅವರನ್ನು ವರ್ಗಾವಣೆ ಮಾಡದೇ ಸೇವೆಯಿಂದ ವಜಾ ಮಾಡಬೇಕು. ಇಲ್ಲವಾದಲ್ಲಿ ರೆಡ್ಡಿ ಸಮಾಜದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಲಾಗುವುದು. –ಸಂಜೀವರೆಡ್ಡಿ ಯರಬಾಗ,ರೆಡ್ಡಿ ಸಮಾಜದ ಮುಖಂಡರು

Advertisement
Advertisement

Udayavani is now on Telegram. Click here to join our channel and stay updated with the latest news.

Next