ಕಾಬೂಲ್: ಈ ದೇಶದಲ್ಲಿ ಶಿಕ್ಷಣ ಪಡೆಯಲು ಅವಕಾಶ ಇಲ್ಲ ಎಂದಾದ ಮೇಲೆ ಈ ಪದವಿ, ಡಿಪ್ಲೋಮಾ ಸರ್ಟಿಫಿಕೇಟ್ ಗಳ ಅಗತ್ಯವಿಲ್ಲ. ಒಂದು ವೇಳೆ ನನ್ನ ತಾಯಿ, ಸಹೋದರಿಗೆ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆ ಎಂದಾದರೆ ನಾನು ಈ ಶಿಕ್ಷಣವನ್ನು ಒಪ್ಪುವುದಿಲ್ಲ ಎಂದು ಆಕ್ರೋಶ ಹೊರಹಾಕಿರುವ ಅಫ್ಘಾನ್ ಪ್ರೊಫೆಸರ್ ಟಿವಿ ಲೈವ್ ಶೋನಲ್ಲೇ ಡಿಪ್ಲೋಮಾ, ಪದವಿ ಸರ್ಟಿಫಿಕೇಟ್ ಅನ್ನು ಹರಿದು ಹಾಕಿರುವ ಪ್ರಸಂಗದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಸಲ್ಮಾನ್ ಖಾನ್ ಬರ್ತ್ ಡೇ ವಿಶ್ ಗೆ ನೂಕುನುಗ್ಗಲು: ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್
ಅಫ್ಘಾನಿಸ್ತಾನದ ಕಾಬೂಲ್ ಯೂನಿರ್ವಸಿಟಿ ಪ್ರೊಫೆಸರ್ ಟಿವಿ ಶೋನ ಲೈವ್ ಕಾರ್ಯಕ್ರಮದಲ್ಲಿ ತನ್ನ ಡಿಪ್ಲೋಮಾ ಸರ್ಟಿಫಿಕೇಟ್ ಹಿಡಿದು ಒಂದೊಂದಾಗಿ ಹರಿದು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದಾಗಿ ವರದಿ ತಿಳಿಸಿದೆ.
ಅಫ್ಘಾನಿಸ್ತಾನದ ಪುನರ್ವಸತಿ ಮತ್ತು ನಿರಾಶ್ರಿತ ಸಚಿವಾಲಯದ ಮಾಜಿ ನೀತಿ ಸಲಹೆಗಾರ್ತಿ ಶಬ್ನಬ್ ನಸಿಮಿ ಕಾಬೂಲ್ ಯೂನಿರ್ವಸಿಟಿ ಪ್ರೊಫೆಸರ್ ಲೈವ್ ನಲ್ಲಿ ತಮ್ಮ ಡಿಪ್ಲೋಮಾ ಸರ್ಟಿಫಿಕೇಟ್ ಗಳನ್ನು ಹರಿದು ಹಾಕುತ್ತಿರುವ ವಿಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಎರಡು ದಶಕಗಳ ಕಾಲ ಅಮೆರಿಕ ಹಾಗೂ ಮಿತ್ರದೇಶಗಳ ಸೈನಿಕರ ಪಡೆ ವಾಪಸ್ ತೆರಳಿದ್ದ ನಂತರ ಕಳೆದ ವರ್ಷ ಆಗಸ್ಟ್ ನಲ್ಲಿ ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನದ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು.
ಅಧಿಕಾರದ ಗದ್ದುಗೆ ಏರಿದ್ದ ತಾಲಿಬಾನ್ ಬಂಡುಕೋರರು ಉತ್ತಮ ಆಡಳಿತ ನೀಡುವ ಭರವಸೆ ನೀಡಿದ್ದರು. ಆದರೆ ತಾಲಿಬಾನ್ ಒಂದೊಂದೇ ನಿರ್ಬಂಧ ವಿಧಿಸುತ್ತಿದ್ದು, ಇತ್ತೀಚೆಗೆ ಯೂನಿರ್ವಸಿಟಿಯಲ್ಲಿ ಯುವತಿಯರ ಶಿಕ್ಷಣಕ್ಕೆ ನಿಷೇಧ ಹೇರಿತ್ತು.