ಪ್ರಾವಿಡೆನ್ಸ್: ಮಹಿಳಾ ವಿಶ್ವಕಪ್ ಟಿ20 ಕ್ರಿಕೆಟ್ ಪಂದ್ಯದಲ್ಲಿ ಗುರುವಾರ ಭಾರತ, ದುರ್ಬಲ ಐರೆಲಂಡ್ ತಂಡವನ್ನು ಎದುರಿಸಲಿದೆ.
ಸೆಮಿಫೈನಲ್ ಲೆಕ್ಕಾಚಾರದಲ್ಲಿ ಇದು ಭಾರತಕ್ಕೆ ಮಹತ್ವ ಪಂದ್ಯವಾಗಿದೆ. ಈಗಾಗಲೇ ಸತತ 2 ಪಂದ್ಯ ಗೆದ್ದು ಬಹುತೇಕ ಸೆಮಿಫೈನಲ್ ಖಾತ್ರಿ ಮಾಡಿಕೊಂಡರುವ ಭಾರತೀಯರು ಇನ್ನೊಂದು ಪಂದ್ಯ ಗೆದ್ದರೆ ಲೆಕ್ಕಾಚಾರವಿಲ್ಲದೇ ಮುಂದಿನ ಸುತ್ತಿಗೇರಲಿದ್ದಾರೆ.
ಭಾರತ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ, ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿತ್ತು. ಈ ಎರಡರಲ್ಲೂ ಭಾರತ ಗೆದ್ದ ರೀತಿ ನೋಡಿದರೆ ಐರೆಲಂಡ್ ಬಲಿಪಶುವಾಗುವುದರಲ್ಲಿ ಸಂಶಯವೇ ಇಲ್ಲ! ಆದರೆ ಐರೆಲಂಡ್ ಇಂಗ್ಲೆಂಡ್ ವ್ಯಾಪ್ತಿಯಲ್ಲಿ ಬರುವ ತಂಡ.
ಹಾಗಾಗಿ ಅಲ್ಲಿ ಕೆಲ ಅದ್ಭುತ, ಅನುಭವಿ ಆಟಗಾರ್ತಿಯರಿರುವುದು ಅಸಂಭವವೇನಲ್ಲ. ಅನಿರೀಕ್ಷಿತವಾಗಿ ಸ್ಫೋಟಿಸಿ ದಿಕ್ಕು ತಪ್ಪಿಸಲು ಸಿದ್ಧವಾಗಿರುವ ಅಂತಹವರ ವಿರುದ್ಧ ಭಾರತದ ಆಟಗಾರ್ತಿಯರು ಎಚ್ಚರದಿಂದಿರಬೇಕು.
ಬಿ ಗುಂಪಿನಲ್ಲಿರುವ ಭಾರತ ತನ್ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದೆ. ಈ ಪಂದ್ಯವನ್ನು ಗೆಲ್ಲುವುದು ಸುಲಭವಲ್ಲ. ಆದ್ದರಿಂದ ಐರೆಲಂಡ್ ವಿರುದ್ಧ ಗೆದ್ದರೆ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕೆಂಬ ಅನಿವಾರ್ಯತೆಯಿರುವುದಿಲ್ಲ. ಪರಿಸ್ಥಿತಿಯನ್ನು ಹಗುರಗೊಳಿಸಿಕೊಳ್ಳಲು ಐರೆಲಂಡ್ ವಿರುದ್ಧದ ಪಂದ್ಯ ಭಾರತಕ್ಕೆ ಅತ್ಯುತ್ತಮ ಅವಕಾಶ.
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ತಾನಿಯಾ ಭಾಟಿಯಾ (ವಿ.ಕೀ.), ಏಕ್ತಾ ಬಿಷ್ಟ್, ದಯಾಳನ್ ಹೇಮಲತಾ, ಮಾನ್ಸಿ ಜೋಶಿ, ವೇದಾ ಕೃಷ್ಣಮೂರ್ತಿ, ಸ್ಮತಿ ಮಂಧನಾ, ಅನುಜಾ ಪಾಟೀಲ್, ಮಿಥಾಲಿ ರಾಜ್, ಅರುಂಧತಿ ರೆಡ್ಡಿ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಪೂನಂ ಯಾದವ್.
ಪಂದ್ಯಾರಂಭ: ರಾತ್ರಿ 8.30
ನೇರಪ್ರಸಾರ: ಸ್ಟಾರ್‌ನ್ಪೋರ್ಟ್ಸ್