Advertisement

ಇರಾನ್‌ನಿಂದ ಭಾರತ ತೈಲ ಖರೀದಿಸಿದರೆ ಲಾಭವಿಲ್ಲ

10:13 AM Oct 13, 2018 | Team Udayavani |

ವಾಷಿಂಗ್ಟನ್‌: ಇರಾನ್‌ನಿಂದ ತೈಲವನ್ನು ಹಾಗೂ ರಷ್ಯಾದಿಂದ ರಕ್ಷಣಾ ವ್ಯವಸ್ಥೆಯನ್ನು ಭಾರತ ಖರೀದಿಸಿದರೆ ಭಾರತಕ್ಕೇನೂ ಲಾಭವಾಗದು ಎಂದು ಅಮೆರಿಕ ಹೇಳಿದೆ.

Advertisement

ಇರಾನ್‌ನಿಂದ ತೈಲ ಖರೀದಿಗೆ ನಿಷೇಧ ಹೇರಿರುವ ಕುರಿತು ಮಾತನಾಡಿದ ಅಮೆರಿಕದ ವಿದೇಶಾಂಗ ವ್ಯವಹಾರಗಳ ವಕ್ತಾರೆ ಹೀದರ್‌ ನವರ್ಟ್‌, ವಿಶ್ವದ ಹಲವು ದೇಶಗಳೊಂದಿಗೆ ನಾವು ನಿಷೇಧದ ಬಗ್ಗೆ ಮಾತುಕತೆ ನಡೆಸಿದ್ದೇವೆ. ಅಲ್ಲದೆ ಭಾರತದ ಈ ವಹಿವಾಟನ್ನು ನಾವು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ ಎಂದಿದ್ದಾರೆ. ಈ ಮಧ್ಯೆ ನವೆಂಬರ್‌ 4ರಿಂದ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದರ ಮೇಲೆ ಅಮೆರಿಕ ಹೇರಿರುವ ನಿಷೇಧದ ಹೊರತಾಗಿಯೂ ಭಾರತದ ತೈಲ ಕಂಪೆನಿಗಳು ಇರಾನ್‌ನಿಂದ ತೈಲ ಖರೀದಿಸಲು ಆರ್ಡರ್‌ ಮಾಡಿವೆ ಎಂದು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಅಮೆರಿಕ ಯತ್ನಿಸುತ್ತಿದೆ.

ನಿಷೇಧದ ನಡುವೆಯೂ ವಹಿವಾಟು ಜೋರು
ಚೀನ ಹಾಗೂ ಅಮೆರಿಕದ ಮಧ್ಯೆ ವ್ಯಾಪಾರ ಯುದ್ಧ ತಾರಕಕ್ಕೇರಿದರೂ, ಚೀನದಿಂದ ಅಮೆರಿಕಕ್ಕೆ ರಫ್ತಾಗುತ್ತಿರುವ ಸಾಮಗ್ರಿಗಳು ಹೆಚ್ಚಳವಾಗುತ್ತಲೇ ಇವೆೆ. ಆದರೆ ಅಮೆರಿಕದಿಂದ ಚೀನ ಆಮದು ಮಾಡಿಕೊಳ್ಳುತ್ತಿರುವ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ ಚೀನ ವಿರುದ್ಧ ಅಮೆರಿಕ ಇನ್ನಷ್ಟು ನಿಷೇಧ ಹೇರುವ ಸಾಧ್ಯತೆಯಿದೆ.

ತೈಲ ಕಂಪೆನಿಗಳ ಉತ್ಪಾದನೆ ಪರಿಶೀಲನೆ
ಹೊಸದಿಲ್ಲಿ:
ಸರಕಾರಿ ಸ್ವಾಮ್ಯದ ತೈಲ ಉತ್ಪಾದನೆ ಕಂಪೆನಿಗಳಾದ ಒಎನ್‌ಜಿಸಿ, ಆಯಿಲ್‌ ಇಂಡಿಯಾ ಉತ್ಪಾದನಾ ಸಾಮರ್ಥ್ಯದ ಮರುಪರಿಶೀಲನೆಯನ್ನು ಪ್ರಧಾನಿ ಮೋದಿ ಶುಕ್ರವಾರ ನಡೆಸಿದ್ದಾರೆ. ಶೇ. 10ರಷ್ಟು ತೈಲ ಆಮದು ಕಡಿತಗೊಳಿಸುವ ನಿರ್ಧಾರ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಈ ವೇಳೆ ಚರ್ಚೆ ನಡೆಸಲಾಯಿತು. ಮುಂದಿನ 5 ವರ್ಷಗಳವರೆಗೆ ತಮ್ಮ ಕಂಪೆನಿಗಳ ತೈಲ ಉತ್ಪಾದನೆ ಬಗ್ಗೆ ಈ ಕಂಪೆನಿಗಳು ವಿವರಣೆ ನೀಡಿವೆ. 2022ರ ವೇಳೆಗೆ ತೈಲ ಆಮದು ಅವಲಂಬನೆ ಶೇ. 67ಕ್ಕೆ ಇಳಿಸಬೇಕು ಎಂದು ಮೋದಿ ಕರೆ ನೀಡಿದ್ದರಾದರೂ, 2013-14ರಿಂದ ಅಂತಾರಾಷ್ಟ್ರೀಯ ತೈಲ ಬೆಲೆ ಇಳಿಕೆಯಾಗಿದ್ದರಿಂದ, ಆಮದು ಪ್ರಮಾಣ ಹೆಚ್ಚಾಗುತ್ತಲೇ ಸಾಗಿದೆ. 2017-18ರಲ್ಲಿ ಇದು ಶೇ. 82.8ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮೋದಿ ನಡೆಸಿದ ಸಭೆ ಅತ್ಯಂತ ಮಹತ್ವದ್ದಾಗಿದ್ದು, ದೇಶೀಯ ನಿಕ್ಷೇಪಗಳಿಂದ ತೈಲ ಹೊರತೆಗೆಯುವ ಪ್ರಕ್ರಿಯೆ ಇನ್ನು ಚುರುಕು ಮೂಡುವ ಸಾಧ್ಯತೆಯಿದೆ. 

Advertisement

Udayavani is now on Telegram. Click here to join our channel and stay updated with the latest news.

Next