Advertisement

Politics: ಅನುದಾನ ಹಂಚಿಕೆ ವಿಚಾರವಾಗಿ ನಾನು ಸುಳ್ಳು ಹೇಳಿದ್ದರೆ ರಾಜಕೀಯ ಬಿಡುವೆ: ಸಿಎಂ

08:39 PM Feb 09, 2024 | Pranav MS |

ದಾವಣಗೆರೆ: “ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರಕಾರದಿಂದ ಅನ್ಯಾಯವಾಗುತ್ತಿದೆ ಎಂದು ನಾನು ಹೇಳಿದ್ದು ಸುಳ್ಳಾಗಿದ್ದರೆ ರಾಜಕೀಯವನ್ನೇ ಬಿಟ್ಟು ಬಿಡುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.

Advertisement

ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಬಾರದೇ? ತೆರಿಗೆ ಸಂಗ್ರಹದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿರುವ ನಮ್ಮ ರಾಜ್ಯದಿಂದ ಕೇಂದ್ರಕ್ಕೆ ಪ್ರತೀ ವರ್ಷ 4.30 ಲಕ್ಷ ಕೋಟಿ ರೂ. ತೆರಿಗೆ ಕೊಡುತ್ತೇವೆ. ಆದರೆ ನಮಗೆ ಬರುವುದು ಕೇವಲ 50,257 ಕೋಟಿ ರೂ. ಮಾತ್ರ. ಇನ್ನುಳಿದುದನ್ನು ಕೇಂದ್ರವೇ ಇರಿಸಿಕೊಳ್ಳುತ್ತದೆ. ರಾಜ್ಯಕ್ಕೆ ಅನ್ಯಾಯವಾದರೆ ಸುಮ್ಮನೆ ಇರಬೇಕೇ? ಯಡಿಯೂರಪ್ಪ ಬಾಯಿ ಬಿಡುವುದಿಲ್ಲ ಎಂದು ನಾವೂ ಸುಮ್ಮನಿರಬೇಕೇ, ಅವರು ತಲೆ ಆಡಿಸುತ್ತಾರೆ ಎಂದು ನಾವೂ ತಲೆ ಅಲ್ಲಾಡಿಸಬೇಕೇ ಎಂದು ಪ್ರಶ್ನಿಸಿದರು.

ನಾವು ನೂರು ರೂ. ತೆರಿಗೆ ಸಂಗ್ರಹಿಸಿ ಕೊಟ್ಟರೆ ಪ್ರತಿಯಾಗಿ ನಮಗೆ 12- 13ರೂ. ಮಾತ್ರ ಬರುತ್ತದೆ. ನಮ್ಮ ಪಾಲನ್ನು ಅವರ ಜೇಬಿನಿಂದ ಕೊಡುವುದಲ್ಲ. ಅನ್ಯಾಯದ ವಿರುದ್ಧ ಪ್ರತಿಭಟಿಸಬೇಕು ಎಂಬ ಉದ್ದೇಶದಿಂದಲೇ ದಿಲ್ಲಿಗೆ ಹೋಗಿದ್ದೇವು ಎನ್ನುವ ಮೂಲಕ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿ ರಾಜ್ಯದ ಮಾನ ತೆಗೆದಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಕ್ಕೆ ತಿರುಗೇಟು ನೀಡಿದರು.

ಬರದ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ನೀರು, ಮೇವಿಗೆ ತೊಂದರೆ ಆಗದಂತೆ, ಜನ ಗುಳೇ ಹೋಗದಂತೆ ಕ್ರಮ ಕೈಗೊಳ್ಳಲು ಎಲ್ಲ ಜಿಲ್ಲಾಧಿಕಾರಿ, ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬರ ನಿರ್ವಹಣೆಗೆ ಸಂಬಂಧಿಸಿ ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟು 860 ಕೋಟಿ ರೂ. ಇದೆ. ರೈತರಿಗೆ ತಾತ್ಕಾಲಿಕ ಪರಿಹಾರವಾಗಿ ತಲಾ 2 ಸಾವಿರ ರೂ.ಗಳಂತೆ 34 ಲಕ್ಷ ರೈತರಿಗೆ 650 ಕೋಟಿ ರೂ. ನೀಡಲಾಗಿದೆ ಎಂದರು.

ಒಂದು ರೂಪಾಯಿಯೂ ಕೊಟ್ಟಿಲ್ಲ
ಬರ ಪರಿಹಾರಕ್ಕೆ ಸಂಬಂಧಿಸಿ ಕೇಂದ್ರ ಸರಕಾರ 5 ತಿಂಗಳಾದರೂ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಯಡಿಯೂರಪ್ಪ, ಅಶೋಕ್‌, ವಿಜಯೇಂದ್ರ ರಾಜ್ಯದ ನಾಯಕರು. ಅವರು ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಜತೆ ಮಾತನಾಡಿ ರಾಜ್ಯಕ್ಕೆ ಅನುದಾನ ಕೊಡಿಸಿಲ್ಲ. ಬರೀ ಭಾಷಣ ಬಿಗಿಯುತ್ತಾರೆ ಎಂದರು. ಅಸಮಾಧಾನಗೊಂಡ ಕೆಲವು ಸಚಿವರು ಗುರುವಾರ ಸಭೆ ನಡೆಸಿದ್ದಾರೆ ಎಂಬ ಊಹಾಪೋಹದ ಬಗ್ಗೆ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next