Advertisement

ತನ್ನ ಆವರಣವೇ ಸೆರೆಮನೆಯಾದರೆ…

07:30 AM Apr 25, 2018 | |

ಕೆಲವರಿರುತ್ತಾರೆ, ಮಕ್ಕಳಿಗೆ ಸದಾ ಉಪದೇಶ ನೀಡುವುದೇ ಅವರಿಗೊಂದು ಚಟ. ಯಾವಾಗ ನೋಡಿದ್ರೂ ಆದೇಶ ಕೊಡುತ್ತಿರುತ್ತಾರೆ. ಇದನ್ನೆಲ್ಲ ಕೇಳಿದ ಮಕ್ಕಳ ಮನಸ್ಸು ಕೆಲವೊಮ್ಮೆ ಹಿಂಸೆಗೊಳಪಡುತ್ತದೆ. ಇದನ್ನು scar on the self image ಎನ್ನುತ್ತಾರೆ. ನೀವು ನಿರ್ದೇಶನ ಮಾಡಲು ಮಕ್ಕಳು ನಟರಲ್ಲ. ಬದುಕು ಸಿನಿಮಾವೂ ಅಲ್ಲ. ಕೆಲವರಂತೂ ಇನ್ನೊಬ್ಬರ ಮಕ್ಕಳನ್ನು ಮನಸ್ಸಿಗೆ ಬಂದಂತೆ ಎಳೆದಾಡುತ್ತಾರೆ. ಮನೆಯಲ್ಲಿ ಹಣಕಾಸು ವ್ಯವಸ್ಥೆ ಕಡಿಮೆ ಇದ್ದರಂತೂ ನೆಂಟರೆಲ್ಲಾ ತಲೆಗೊಂದು ಮಾತಾಡುತ್ತಾರೆ.

Advertisement

ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಕೆಲವೊಮ್ಮೆ ಮನೆಯಲ್ಲೇ ಧಕ್ಕೆ ಬರುತ್ತದೆ ಎಂಬುದಕ್ಕೆ ಹಲವಾರು ನಿದರ್ಶನಗಳು ಸಿಗುತ್ತವೆ. ಮನಸ್ಸು- ವ್ಯಕ್ತಿತ್ವ ಮುದುಡಿದ ಪರಿಣಾಮ ಸ್ವರ್ಣಳಿಗೆ ಉಗ್ಗು. ಮೊಂಡು ಸ್ವಭಾವ, ಹಟವೂ ಜೊತೆಯಾಗಿತ್ತು. ತಂದೆ ಇಲ್ಲದ ಹನ್ನೆರಡು ವರ್ಷದ ಸ್ವರ್ಣ, ಮನೋವೈದ್ಯರ ಸಲಹೆಯಂತೆ, ಬುದ್ದಿಮತ್ತೆ (ಐ.ಕ್ಯೂ) ಪರೀಕ್ಷೆಗೆಂದು ಅಜ್ಜಿಯ ಜೊತೆ ನನ್ನ ಬಳಿ ಚಿಕಿತ್ಸೆಗಾಗಿ ಬಂದಳು. ದರ್ಜಿಯ ಕೆಲಸದಲ್ಲಿ ತಾಯಿಗೆ ಬಿಡುವಿಲ್ಲ. “ವಾರಸಾªರರು ಇಲ್ಲ ನೋಡಿ ಮಗೀಗೆ, ಅದ್ಕೆ, ಎಲ್ಲ ಮನೇಲೂ ಬೆಳೀತು’ ಎಂಬ ಅಜ್ಜಿಯ ಮಾತುಗಳು ಮಗುವಿನ ಪರಿಸ್ಥಿತಿಯನ್ನು ಅರ್ಥ ಮಾಡಿಸಿತು. 

  ಸ್ವರ್ಣ, ಕತ್ತು ಮೇಲಕ್ಕೆತ್ತಲು ಸಾಧ್ಯವಿಲ್ಲದ ಮಟ್ಟಿಗೆ ತಲೆ ಬಗ್ಗಿಸಿದ್ದಳು. ನಾಚಿಕೆಯ ಗೂಡಾಗಿದ್ದಳು. ಮಗುವಿನಿಂದ ಚಿಕಿತ್ಸೆಗೆ ಸಹಕಾರ ಸಿಗುವುದು ಕಷ್ಟ ಎನಿಸಿ ಐ.ಕ್ಯೂ. ಪರೀಕ್ಷೆಯನ್ನು ಮುಂದೂಡಿದೆ. ಸತತ ಹತ್ತು ದಿನಗಳು ಚಿಕಿತ್ಸೆಗೆ ಬರಲು ಹೇಳಿದೆ. ಸಾಂಪ್ರದಾಯಿಕ ಚಿಕಿತ್ಸೆ/ಪರೀಕ್ಷೆಗಳನ್ನು ಬಿಟ್ಟು ಅವಳ ಗೆಳತಿಯಾದೆ. ಅವಳು ನನಗೆ ಸಹಕರಿಸಿದರೆ, ಪ್ರತಿದಿನ ಉಡುಗೊರೆ ಕೊಡುವುದಾಗಿ ಹೇಳಿ, ಮಾತಿಗಿಳಿದೆ. ಮೂದಲಿಕೆ- ಅಪಹಾಸ್ಯಕ್ಕೆ ಗುರಿಯಾದ ಮನಸ್ಸಿನ ಬರೆಗಳನ್ನು ಅಳಿಸಲು ಸ್ನೇಹವೇ ಮುಲಾಮು. ಕೇಕು, ಬನ್ನು, ಬಳೆ, ಗೊಂಬೆ, ತಲೆಗೆ ಹಾಕುವ ಪುಟ್ಟ ಕ್ಲಿಪ್ಪುಗಳು, ಬಿಂದಿ… ಹೀಗೆ ಸ್ವರ್ಣ ಬಹಳ ಖುಷಿಯಾದಳು.

  ಕೆಲವು ಅಕ್ಷರಗಳನ್ನು ಉಚ್ಚರಿಸುವಾಗ ಅವಳ ನಾಲಗೆ ತೊಂದರೆ ಕೊಡುತ್ತಿತ್ತು ಬಿಟ್ಟರೆ, ಉಗ್ಗು ಇರಲಿಲ್ಲ. ಅನವಶ್ಯಕ ಮಾರ್ಗದರ್ಶನದಲ್ಲಿ ಮಗು ನೊಂದಿತ್ತು. ಮಂಕು ಬಡಿದಿತ್ತು. ಮಾತು ಬಿಟ್ಟಿತ್ತು. ಅವಳಲ್ಲಿ ವರ್ತನಾ ಸಮಸ್ಯೆ ಮೈಗೂಡಿತ್ತು. ಮಾವ, ಚಿಕ್ಕಮ್ಮನ ಪರಿವಾರದೊಡನೆ ಸುತ್ತಾಡಲು ಹೊರಟಾಗ ಕೀಳರಿಮೆ ಉಂಟಾಗುತ್ತಿತ್ತು. ಹೊಸಬಟ್ಟೆ ಕೊಡಿಸುವಾಗ ತಾರತಮ್ಯ. ಜೊತೆಗೆ, ಕೂತರೆ ಸಾಕು ಕೆಲಸಕ್ಕೆ ಹಚ್ಚುತ್ತಿದ್ದರಂತೆ. ತನಗಿಂತ ತೀರಾ ಚಿಕ್ಕಮಕ್ಕಳ ಜೊತೆ ಆಟ ಆಡುತ್ತಿದ್ದಳು. ಅವರನ್ನು ಅನುಕರಿಸುತ್ತಿದ್ದಳು. ಪ್ರೌಢಾವಸ್ಥೆಯಲ್ಲಿ ಬರಬೇಕಾದ ಪ್ರೌಢಿಮೆ ಇರಲಿಲ್ಲ.

  ನನ್ನ ಪ್ರಯತ್ನ ಫ‌ಲಿಸಿತ್ತು. ಒಂದು ವಾರಗಳ ಒಡನಾಟ ಚಿಗುರೊಡೆದಿತ್ತು. ಸಮಸ್ಯೆಯನ್ನು ನಿಧಾನವಾಗಿ ಬಿಡಿಸಿ ಹೇಳಿದೆ. ಅರ್ಥಮಾಡಿಕೊಂಡಳು. ನಂತರ ವಾರಕ್ಕೊಂದು ಸಲ ಬಂದಳು. ಸತತ ಎರಡು ವರ್ಷಗಳಲ್ಲಿ, ಸ್ವರ್ಣ ಯೌವನದ ಹೊಸ್ತಿಲನ್ನು ಆತ್ಮವಿಶ್ವಾಸದಲ್ಲಿ ದಾಟಿದ್ದಾಳೆ. 

Advertisement

ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next