Advertisement

ಗುುಜರಾತ್‌ ಮೋದಿಗಾದರೆ, ಕರ್ನಾಟಕದಲ್ಲಿ ಖರ್ಗೆಗೆ ಸತ್ವ ಪರೀಕ್ಷೆ

12:13 AM Dec 26, 2022 | Team Udayavani |

ತವರು ರಾಜ್ಯ ಗುಜರಾತ್‌ ವಿಧಾನಸಭಾ ಚುನಾವಣೆ ಗೆದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಬೀಗಿದರು. ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗೆದ್ದು ಬೀಗುವುದು ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈಗ ಅನಿವಾರ್ಯದ ಸ್ಥಿತಿ.

Advertisement

ಮೋದಿ ಅವರಿಗೆ ತಮ್ಮ ತವರು ರಾಜ್ಯ ಗುಜರಾತ್‌ ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿಯೂ ಗುಜರಾತ್‌ ಗೆಲುವು ಅವರಿಗೆ ಅನಿವಾರ್ಯವಾಗಿತ್ತು. ಗುಜರಾತ್‌ ಮತದಾರರು ಮೋದಿ ಅವರ ಕೈ ಬಿಡಲಿಲ್ಲ. ಈಗ ಒಂದು ರೀತಿ ಅಂಥದ್ದೇ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ ಕನ್ನಡಿಗರೇ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು.

ಎಐಸಿಸಿ ಅಧ್ಯಕ್ಷ ಪಟ್ಟ ಕನ್ನಡಿಗರಿಗೆ ಒಲಿದು ಬಂದಿದೆ. ಖರ್ಗೆ ಅವರ ಪಕ್ಷ ನಿಷ್ಠೆ, ಸಮಚಿತ್ತ, ಸವಾಲುಗಳನ್ನು ಎದುರಿಸುವ ಬಗೆ, ಆಡಳಿತದ ಅನುಭವ, ಸಮರ್ಥ ನಾಯಕತ್ವಕ್ಕೆ ಈ ಹುದ್ದೆ ಹುಡುಕಿಕೊಂಡು ಬಂದಿದೆ. ಈ ಹೊತ್ತಲ್ಲೇ ಖರ್ಗೆ ಅವರಿಗೆ ತವರು ರಾಜ್ಯ ಕರ್ನಾಟಕದಲ್ಲಿ ಸದ್ಯದಲ್ಲೇ ಎದುರಾಗಲಿರುವ ವಿಧಾನಸಭಾ ಚುನಾವಣೆ ಎದುರಿಸುವುದು ಸವಾಲೇ ಸರಿ. ಹಾಗೆಂದು ಪರಿಸ್ಥಿತಿ ಅಷ್ಟೊಂದು ಸರಳವಾಗಿಲ್ಲ.ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಷ್ಟ್ರಮಟ್ಟದಲ್ಲಿ ಖರ್ಗೆ ಅವರ ನಾಯಕತ್ವಕ್ಕೆ ಮತ್ತಷ್ಟು ಇಂಬು ಸಿಗುವುದು ಖಚಿತ.

ಲೋಕಸಭಾ ಚುನಾವಣೆ ಎದುರಿಸುವುದಕ್ಕೂ ಇದು ಸ್ಪ್ರಿಂಗ್‌ ಬೋರ್ಡ್‌ ಆಗಲಿದೆ. ಇಲ್ಲದಿದ್ದರೆ ಕಾಂಗ್ರೆಸ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ಇಬ್ಬರಿಗೂ ರಾಜಕೀಯವಾಗಿ ಇದು ನಷ್ಟ.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಮತ್ತಿಬ್ಬರು ಪ್ರಮುಖ ನಾಯಕರು ಟೊಂಕ ಕಟ್ಟಿ ನಿಂತಿದ್ದಾರೆ. ಒಬ್ಬರು ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌. ಮತ್ತೊಬ್ಬರು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ.

Advertisement

ಶಿವಕುಮಾರ್‌ ತಮ್ಮ ಒಕ್ಕಲಿಗ ಸಮಾಜದವರನ್ನು ಕಾಂಗ್ರೆಸ್‌ ಕಡೆ ಸೆಳೆಯಲು ನಮ್ಮ ಸಮಾಜಕ್ಕೆ ಮುಖ್ಯಮಂತ್ರಿಯಾಗುವ ಅವಕಾಶ ಬಂದಿದೆ. ನನ್ನನ್ನು ಬೆಂಬಲಿಸಿ ಎಂದು ಕೈ ಮುಗಿಯುತ್ತಾರೆ. ಇಲ್ಲಿ ಮುಖ್ಯಮಂತ್ರಿ ಹುದ್ದೆಯ ಟ್ರಂಪ್‌ ಕಾರ್ಡ್‌ ಅನ್ನು ಬಳಸುತ್ತಾರೆ. ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಆಸೆ ಹೊತ್ತು ರಾಜ್ಯ ಸುತ್ತುತ್ತಿದ್ದಾರೆ. ಅವರು ಹೋದೆಡೆಯಲ್ಲೆಲ್ಲಾ ಅವರ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಘೋಷಣೆ ಕೂಗುತ್ತಾರೆ. ಇಲ್ಲಿಯೂ ಕೂಡ ಕಾಂಗ್ರೆಸ್‌ ಗೆದ್ದರೆ ಹಿಂದುಳಿದ ವರ್ಗಗಳಿಗೆ ಮುಖ್ಯಮಂತ್ರಿ ಗಾದಿ ಒಲಿಯಲಿದೆ ಎಂಬ ಪ್ರಶ್ನೆಯೇ ಇದೆ.

ಆದರೆ, ಮಲ್ಲಿಕಾರ್ಜುನ ಖರ್ಗೆ ಅವರ ಪರಿಸ್ಥಿತಿ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರಿಗಿಂತ ಭಿನ್ನ. ಖರ್ಗೆ ಅವರಿಗೆ ಯಾರು ಮುಖ್ಯಮಂತ್ರಿಯಾಗುತ್ತಾರೆಂಬುದು ಮುಖ್ಯ ಅಲ್ಲವೇ ಅಲ್ಲ. ಅವರದು ವ್ಯಕ್ತಿ ನೆಲೆಯ ದೃಷ್ಟಿಕೋನವಲ್ಲ. ಅವರದು ತಮ್ಮ ಪಕ್ಷ ದೃಷ್ಟಿಯ ಸಮಷ್ಟಿ ಪ್ರಜ್ಞೆ. ಅವರಿಗೆ ತಮ್ಮ ಪಕ್ಷ ಅಧಿಕಾರಕ್ಕೆ ತರಬೇಕು. ಆ ಮೂಲಕ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಚೇತರಿಕೆಗೆ ಕರ್ನಾಟಕದ ಮೂಲಕವೇ ಟಾನಿಕ್‌ ನೀಡಬೇಕು. ಲೋಕಸಭಾ ಚುನಾವಣೆ ಅಖಾಡದಲ್ಲಿ ಸೆಣಸಾಡಲು ಪಕ್ಷವನ್ನು ಸಜ್ಜುಗೊಳಿಸಿ ನಿಲ್ಲಿಸಬೇಕು ಎಂಬುದು ಖರ್ಗೆ ಅವರ ನೋಟ ಹಾಗೂ ಆ ನಿಟ್ಟಿನಲ್ಲಿಯೇ ಕಸರತ್ತು.

ದೆಹಲಿಯಲ್ಲಿ ನಡೆದ ರಾಜ್ಯ ಕಾಂಗ್ರೆಸ್‌ ನಾಯಕರ ಪ್ರಮುಖರ ಸಭೆಯಲ್ಲಿಯೂ ಖರ್ಗೆ ಅವರು ಆಡಿರುವ ಮಾತು ಸ್ಪಷ್ಟ. ಮುಖ್ಯಮಂತ್ರಿ ಯಾರೆಂಬ ಚರ್ಚೆ ಈಗ ಬೇಡ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂಬ ಸ್ಪಷ್ಟ ಸಂದೇಶ ಖರ್ಗೆ ಅವರದು. ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೂಂದು ಹೆಜ್ಜೆ ಮುಂದೆ ಹೋಗಿ ಯಾರು ಸಿಎಂ ಆಗಬೇಕು ಎಂಬುದನ್ನು ಹೈಕಮಾಂಡ್‌ಗೆ ಬಿಟ್ಟು ಬೇಡಿ. ಎಲ್ಲರೂ ಸೇರಿ ಕಾಂಗ್ರೆಸ್‌ ಅಧಿಕಾರಕ್ಕೆ ತನ್ನಿ. ಇಲ್ಲ ಅಂದರೆ ಜನತೆಗೆ ದ್ರೋಹ ಬಗೆದಂತೆ ಎಂಬ ಖಡಕ್‌ ಎಚ್ಚರಿಕೆ ಕೂಡ ಕಲಬುರಗಿ ಸಮಾವೇಶದಲ್ಲಿ ನೀಡಿದ್ದು.

ಇದು ಕಾಂಗ್ರೆಸ್‌ ಪರಿಸ್ಥಿತಿಯಾದರೆ ಆಡಳಿತಾರೂಢ ಬಿಜೆಪಿಯದು ಮತ್ತೂಂದು ಸ್ಥಿತಿ. ಕರ್ನಾಟಕದಲ್ಲಿ ಬಿಜೆಪಿ ಯಾವತ್ತೂ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಸರಳ ಬಹುಮತವನ್ನು ಪಡೆದು ಅಧಿಕಾರಕ್ಕೆ ಏರಿಲ್ಲ. ಆ ಪಕ್ಷ ಪಡೆದಿರುವ ಗರಿಷ್ಠ ಸ್ಥಾನವೇ 110. ನಂತರ ಆಪರೇಷನ್‌ ಕಮಲದ ಮೂಲಕ ಬಹುಮತ ಸಾಧಿಸಿಕೊಂಡಿರುವ ಮಾತು ಬೇರೆ.

ಆದರೆ, ಬಿಜೆಪಿಗೆ ಈ ಬಾರಿ ವಿಧಾನಸಭೆ ಚುನಾವಣೆ 2018ರ ಪರಿಸ್ಥಿತಿಯಂತೆ ಸುಲಭದ ತುತ್ತಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಆಗ ಕಾಂಗ್ರೆಸ್‌ ಸರ್ಕಾರವಿತ್ತು. ಸಿದ್ದರಾಮಯ್ಯ ಅವರ ಸರ್ಕಾರದ ವಿರೋಧಿ ಅಲೆ ಇತ್ತು. ಈಗ ಕಳೆದ ಮೂರು ವರ್ಷಗಳಿಂದ ಬಿಜೆಪಿ ಸರ್ಕಾರವಿದೆ. ಈ ಅವಧಿಯ ಯಶಸ್ಸು-ವೈಫ‌ಲ್ಯ ಎರಡರ ಪ್ರಭಾವವೂ ಆಳುವ ಪಕ್ಷಕ್ಕಾಗುತ್ತದೆ. ವಿವಿಧ ಸಮುದಾಯದವರು ಮೀಸಲಾತಿಯ ಬೇಡಿಕೆಯನ್ನು ಮುಂದಿಟ್ಟು ಬೀದಿಗಿಳಿದಿದ್ದಾರೆ. ಮೀಸಲಾತಿ ಎಂಬುದು ಕೆಲವರಿಗೆ ಸರ್ಕಾರ ನಡೆಸುವ ಪಕ್ಷವನ್ನು ಕಟ್ಟಿ ಹಾಕುವ ಅಸ್ತ್ರವೂ ಹೌದು. ಹೀಗಾಗಿ, ಈ ಅಸ್ತ್ರವನ್ನು ಸರ್ಕಾರ ಸಮರ್ಥವಾಗಿ, ಜಾಣ್ಮೆಯಿಂದ ಎದುರಿಸದಿದ್ದರೆ ಪೆಟ್ಟು ತಿನ್ನುವುದು ಗ್ಯಾರಂಟಿ. ರಾಜ್ಯ ಬಿಜೆಪಿ ಸರ್ಕಾರ ಈಗ ಅಂತಹ ಇಕ್ಕಟ್ಟಿನಲ್ಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದು ಸವಾಲು ಕೂಡ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಪ್ರಾರಂಭದಲ್ಲಿ ರಾಜಕೀಯವಾಗಿ ಅಷ್ಟೊಂದು ಆಕ್ರಮಣಕಾರಿಯಾಗಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ನಡೆ, ನುಡಿಗಳಲ್ಲಿ ಆಕ್ರಮಣಕಾರಿ ಶೈಲಿ ಕಂಡು ಬರುತ್ತದೆ. ಕಾಂಗ್ರೆಸ್‌ ಪಕ್ಷವನ್ನು ಮಣಿಸುವ ವಿಚಾರ ಆಗಿರಬಹುದು, ಬೆಳಗಾವಿ ಗಡಿ ವಿವಾದವಾಗಿರಬಹುದು ಬೊಮ್ಮಾಯಿ ಅವರ ಆಕ್ರಮಣಕಾರಿ ನಡೆಯನ್ನು ಗುರುತಿಸಬಹುದು. ಯಡಿಯೂರಪ್ಪ ಅವರ ಛಾಯೆಯಿಂದ ಹೊರಬರುವ ಪ್ರಯತ್ನವೂ ಇದಾಗಿರಬಹುದು. ಆದರೆ, ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಮತ್ತೂಬ್ಬ ಮಾಸ್‌ ಲೀಡರ್‌ ಇಲ್ಲ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ ನಂತರ ಪಕ್ಷದಲ್ಲಿ ಹಿನ್ನಡೆ ಅನುಭವಿಸಿದರೂ ಮೈದಾನದ ರಾಜಕಾರಣದಲ್ಲಿ ಬಿಜೆಪಿಗೆ ಇವತ್ತಿಗೂ ಅವರು ವೋಟು ತಂದುಕೊಡುವ ಶಕ್ತಿಯೇ ಆಗಿದ್ದಾರೆ. ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದಾಕ್ಷಣ ಪಕ್ಷದ ವರಿಷ್ಠರಿಗೆ ಅವರು ಖಡಕ್ಕಾಗಿ ಸಂದೇಶವನ್ನೂ ರವಾನಿಸಿರುವುದು ಉಂಟು.

ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ತನ್ನ ಟಾರ್ಗೆಟ್‌ 150 ಎಂದು ಘೋಷಿಸಿದೆ. ಆದರೆ, ಪ್ರಾರಂಭದಲ್ಲಿ ಇದಕ್ಕೆ ನೀಡಿದ ಒತ್ತು ಈಗ ಕಂಡು ಬರುತ್ತಿಲ್ಲ. ಹಳೇ ಮೈಸೂರು ಭಾಗದಲ್ಲಿ ಒಂ‌ು ಸುತ್ತು ಪ್ರಚಾರವನ್ನೂ ನಡೆಸಿದ ಬಿಜೆಪಿ ಈಗ ಅಂತಹ ಕಸರತ್ತು ಕಾಣುತ್ತಿಲ್ಲ. ಒಕ್ಕಲಿಗ ಪ್ರಾಬಲ್ಯದ ಹಳೇ ಮೈಸೂರು ಪ್ರಾಂತ್ಯದಲ್ಲಿ ಸೀಟುಗಳನ್ನು ಹೆಚ್ಚಾಗಿ ಪಡೆಯದಿದ್ದರೆ ಬಿಜೆಪಿ ಸರಳ ಬಹುಮತ ಗಿಟ್ಟಿಸಲು ಸಾಧ್ಯವಿಲ್ಲ.
ಹಾಗೇ ನೋಡಿದರೆ ಕಾವೇರಿ ಕಣಿವೆ ಪ್ರದೇಶದಲ್ಲಿ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿಗೆ ಸಮರ್ಥ ಅಭ್ಯರ್ಥಿಗಳೇ ಇಲ್ಲ. ತನ್ನ ಇತಿಮಿತಿಗಳನ್ನು ಅರಿತಿರುವ ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಪ್ರಾಂತ್ಯದ ಅನೇಕ ಕ್ಷೇತ್ರಗಳಲ್ಲಿ ಜೆಡಿಎಸ್‌ ಹೆಗಲ ಮೇಲೆ ಬಂದೂಕು ಇಟ್ಟು ಕಾಂಗ್ರೆಸ್‌ ಎದುರಿಸಿತು. ಬಿಜೆಪಿಗೆ ಆ ಚುನಾವಣೆಯಲ್ಲಿ ಈ ಪ್ರಾಂತ್ಯದಲ್ಲಿ ತಾನು ಗೆಲ್ಲುವುದಕ್ಕಿಂತ ಕಾಂಗ್ರೆಸ್‌ ಮಣಿಸುವುದು ಮುಖ್ಯವಾಗಿತ್ತು. ಇದು ಯಾರಿಗೂ ಬಹುಮತ ಸಿಗದೇ ಅತಂತ್ರ ವಿಧಾನಸಭೆಗೆ ಕಾರಣವೂ ಆಯಿತು. ಈ ಬಾರಿಯೂ ಬಿಜೆಪಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್‌ ಮಣಿಸಲು ಕೊನೆಯ ಅಸ್ತ್ರವಾಗಿ ಜೆಡಿಎಸ್‌ ಪ್ರಾಬಲ್ಯದ ಕ್ಷೇತ್ರಗಳಲ್ಲಿ ತನ್ನ ಪಕ್ಷದಿಂದ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕಾಂಗ್ರೆಸ್‌ ಅಧಿಕಾರಕ್ಕೆ ಏರುವುದನ್ನು ತಡೆಯುವ ತಂತ್ರಗಳನ್ನು ಹೆಣೆದರೂ ಅಚ್ಚರಿ ಇಲ್ಲ.

ಇನ್ನು ಬೆಳಗಾವಿಯಲ್ಲಿ ಅತ್ತ ಬಿಜೆಪಿ ಹಾಗೂ ಕಾಂಗ್ರೆಸ್‌ ವಿಧಾನಮಂಡಲ ಅಧಿವೇಶನದಲ್ಲಿ ಬಿಜಿಯಾಗಿದ್ದರೆ ಇತ್ತ ಜೆಡಿಎಸ್‌ ಹಳೇ ಮೈಸೂರು ಪ್ರಾಂತ್ಯದಲ್ಲಿ ತನ್ನ ಮತ ಬ್ಯಾಂಕ್‌ ಗಟ್ಟಿ ಮಾಡಿಕೊಳ್ಳಲು ಯಾತ್ರೆ ಹೊರಟಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಪಂಚರತ್ನ ಯಾತ್ರೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ಜಿಲ್ಲೆಗಳನ್ನು ಮುಗಿಸಿ ಮಂಡ್ಯ ಜಿಲ್ಲೆಯಲ್ಲಿ ಭರ್ಜರಿಯಾಗಿ ಸಾಗಿದೆ. ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆಗೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ.

ಕಾವೇರಿ ಕೊಳ್ಳದಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳೇ ಸಾಂಪ್ರದಾಯಿಕ ಎದುರಾಳಿಗಳು. ಈ ಎರಡು ಪಕ್ಷಗಳು ವಿಧಾನಸೌಧದಲ್ಲಿ ದೋಸ್ತಿಯಾಗಿ ಆಡಳಿತಸೂತ್ರ ಹಿಡಿದಾಗಲೂ ತಳಮಟ್ಟದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ದೋಸ್ತಿಗೆ ಬೆನ್ನು ತಿರುಗಿಸಿದ್ದು ಉಂಟು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಾದರೂ ಕಾರ್ಯಕರ್ತರು ಒಂದಾಗಿರಲಿಲ್ಲ. ಇದು ಬಿಜೆಪಿಗೆ ನೆರವಾಗಿತ್ತು.

ಮುಂದಿನ ಅಸೆಂಬ್ಲಿ ಚುನಾವಣೆಯು ಹೊಸ್ತಿಲಲ್ಲಿ ಬಂದು ನಿಂತಿದೆ. ಸಮರದ ಕಣಕ್ಕೆ ಧುಮುಕಲು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ತನ್ನ ಅಸ್ತ್ರಗಳನ್ನು ಹರಿತಗೊಳಿಸುತ್ತಿವೆ. ಚುನಾವಣೆಯ ದೃಷ್ಟಿಯಲ್ಲೇ ವಾಕ್ಸಮರ ನಡೆದಿದೆ. ವಿಧಾನಮಂಡಲದ ಬೆಳಗಾವಿ ಅಧಿವೇಶನ ಮುಗಿಯುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್‌ ಮತ್ತೆ ಯಾತ್ರೆ ಹೊರಡಲಿವೆ. ಹೊಸ ವರ್ಷ ಆರಂಭವಾಗುತ್ತಿದ್ದಂತೆ ರಾಜ್ಯ ರಾಜಕಾರಣವು ಕಾವು ಪಡೆಯಲಿದೆ. ಸಂಕ್ರಾಂತಿ ಆರಂಭದೊಂದಿಗೆ ರಾಜಕಾರಣದಲ್ಲಿ ಸಂಕ್ರಮಣ ಕಾಲದಲ್ಲಿರುವವರು ತಮ್ಮ ಮುಂದಿನ ನಿಲುವನ್ನು ಘೋಷಿಸುವರು.

-ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next