Advertisement

ಕಾಗದದ ಚಿನ್ನ ಖರೀದಿಸಿದರೆ ಶೇ. 2.5 ಹೆಚ್ಚುವರಿ ಬಡ್ಡಿ

09:40 AM May 14, 2018 | Harsha Rao |

ಸಾವರಿನ್‌ ಗೋಲ್ಡ್‌ ಬಾಂಡು ಎಂದರೆ ಭಾರತ ಸರಕಾರವು ನೀಡುವ ಚಿನ್ನದ ಪ್ರತಿರೂಪವಾಗಿರುವ ಒಂದು ಸಾಲಪತ್ರ. ದುಡ್ಡು ಕೊಟ್ಟು ಚಿನ್ನದ ಬದಲಾಗಿ ಅದೇ ಮೌಲ್ಯದ ಬಾಂಡ್‌ ಖರೀದಿಸಬಹುದು. ಅವಧಿಯ ಬಳಿಕ ಅದನ್ನು ಮಾರಿ ಪ್ರಚಲಿತ ಚಿನ್ನದ ಮೌಲ್ಯವನ್ನು ರುಪಾಯಿಗಳಲ್ಲಿ ಪಡೆದುಕೊಳ್ಳ ಬಹುದು.

Advertisement

ಕಳೆದ ವಾರ ಚಿನ್ನದ ಬಗ್ಗೆ ಜಿಲೇಬಿ-ಗಿಲೇಬಿ ಎಂದೆಲ್ಲಾ ಬಂಡಲ್‌ ಬಿಟ್ಟು ಕೊನೆಗೂ ಚಿನ್ನದ ಇಟಿಎಫ್ ಬಗ್ಗೆ ಮಾತ್ರವೇ ಬರೆದು ಮಂಗಳ ಹಾಡಿದ್ದು ಗುರುಗುಂಟಿರಾಯರಿಗೆ ಸುತಾರಾಂ ಇಷ್ಟ ಆಗಲಿಲ್ಲ. ಅತಿಮುಖ್ಯವಾದ ಗೋಲ್ಡ್ ಬಾಂಡ್‌ ಬಗ್ಗೆ ಉಲ್ಲೇಖವೇ ಇರಲಿಲ್ಲ. ಅದರಿಂದಲೂ ಮುಖ್ಯವಾಗಿ ಆ ಎಪಿಸೋಡಿನಲ್ಲಿ ಗುರುಗುಂಟಿರಾಯರ ಉಲ್ಲೇಖವೂ ಇರಲಿಲ್ಲ. ಯಾರೋ ಕಲೀಗ್‌, ಕಲೀಗ್‌ ಹೆಂಡತಿ ಎಂದೆಲ್ಲಾ ಕತೆಕಟ್ಟಿ ರಾಯರನ್ನು ಕಣದಿಂದ ಹೊರ ಹಾಕಿದ್ದು ಒಂದು ದೊಡ್ಡ ರಾಜಕೀಯದ ಹುನ್ನಾರದಂತೆಯೇ ಕಂಡಿತು ಅವರಿಗೆ.

ಮೊದಲೇ ಚುನಾವಣೆ ಬಿಸಿಯಲ್ಲಿ ಹಬೆಯಾಡುತ್ತಿರುವ ಕರ್ನಾಟಕದಲ್ಲಿ ಈ ಒಂದು ಹೊಸ ರಾಜಕೀಯ ನಡೆಯನ್ನು ರಾಯರು ಸಹಿಸದಾದರು. ಹೀಗೇ ಬಿಟ್ಟರೆ ತಾವು ಹುಟ್ಟಿ ಬೆಳೆದ ಕಾಕು ಪಕ್ಷದಿಂದ ಒಂದು ದಿನ ಎತ್ತಂಗಡಿಯಾದರೂ ಆದಾರು ಎನ್ನುವ ಭಯವೂ ಅವರನ್ನು ಆವರಿಸಿತು. ವಾರವಿಡೀ ಅದೇ ಮೂಡಿನಲ್ಲಿ ಬುಸುಗುಟ್ಟುತ್ತಾ ತಿರುಗಾಡುತ್ತಿದ್ದ ರಾಯರು ಶನಿವಾರ ಬೆಳಗ್ಗೆ ಗೋಲ್ಡ್ ಬಾಂಡ್‌ ಬಗ್ಗೆ ಬರೆಯಲು ನನಗೊಂದು ಸ್ಟ್ರಾಂಗ್‌ ಮೆಸೇಜ್‌ ಹಾಕಿ ಮತ ಹಾಕುವ ಸಲುವಾಗಿ ತಾವು ಸೀದಾ ಎಂಜಿಎಂ ಮತಗಟ್ಟೆಗೆ ಹೋಗಿಯೇ ಬಿಟ್ಟರು.

ರಾಯರ ಸ್ಟ್ರಾಂಗ್‌ ಮೆಸೇಜನ್ನು ನೋಡಿದ ನಾನು ಇನ್ನು ಸುಮ್ಮನಿರಲಾಗದು; ಕಾಕು ಕಾಲಮ್ಮಿನ ಸರ್ವತೋಮುಖ ಅಭಿವೃದ್ಧಿಗಾಗಿ ಈ ಗುರುಗುಂಟಿರಾಯರನ್ನು ಖುಶಿ ಪಡಿಸಲೇ ಬೇಕು ಎನ್ನುತ್ತಾ ಗೋಲ್ಡ್ ಬಾಂಡ್‌ ಬಗ್ಗೆ ಬರೆಯಲು ಕಂಪ್ಯೂಟರ್‌ ತೆರೆದು ಕುಳಿತೆ. 

***
2014ರ ಬಜೆಟ್ಟಿನಲ್ಲಿ ಘೊಷಣೆ ಮಾಡಿದ ಸಾವರಿನ್‌ ಗೋಲ್ಡ್ ಬಾಂಡ್‌ ನಿರಂತರವಾಗಿ ರಿಸರ್ವ್‌ ಬ್ಯಾಂಕ್‌ ವತಿಯಿಂದ ಮಾರಾಟ ವಾಗುತ್ತಲೇ ಬರುತ್ತಿದೆ. ಸಾವರಿನ್‌ ಗೋಲ್ಡ್ ಬಾಂಡು ಎಂದರೆ ಭಾರತ ಸರಕಾರವು ನೀಡುವ ಚಿನ್ನದ ಪ್ರತಿರೂಪವಾಗಿರುವ ಒಂದು ಸಾಲಪತ್ರ. ಅಂದರೆ ಚಿನ್ನದ ಬದಲಿಗೆ ನಾವುಗಳು ಇಟ್ಟುಕೊಳ್ಳ ಬಹುದಾದ ಸರಕಾರಿ ಸಾಲಪತ್ರ. ದುಡ್ಡು ಕೊಟ್ಟು ಚಿನ್ನದ ಬದಲಾಗಿ ಅದೇ ಮೌಲ್ಯವುಳ್ಳ ಈ ಬಾಂಡುಗಳನ್ನು ಕೊಂಡು ಇಟ್ಟುಕೊಳ್ಳ ಬಹುದು. ಅವಧಿಯ ಬಳಿಕ ಅದನ್ನು ವಾಪಾಸು ಮಾಡಿ ಪ್ರಚಲಿತ ಚಿನ್ನದ ಮೌಲ್ಯವನ್ನು ರುಪಾಯಿಗಳಲ್ಲಿ ಹಿಂಪಡೆದುಕೊಳ್ಳಬಹುದು. (ಕೈಯಲ್ಲಿ ಇರುವ ಚಿನ್ನವನ್ನು ಕರಗಿಸಿ ಬ್ಯಾಂಕಿನಲ್ಲಿ ಇಡುವ ಗೋಲ್ಡ್ ಮಾನೆಟೈಸೇಶನ್‌ ಸ್ಕೀಮು ಇದಲ್ಲ) ಇಲ್ಲಿ ಹೂಡಿಕೆಯ ಅವಧಿಯುದ್ದಕ್ಕೂ ಚಿನ್ನದ ಏರಿಳಿತದ ಲಾಭ/ನಷ್ಟಗಳ ಹೊರತಾಗಿ ಶೇ. 2.50 ವಾರ್ಷಿಕ ಬಡ್ಡಿಯೂ ದೊರೆಯುತ್ತದೆ. 

Advertisement

ಚಿನ್ನಕ್ಕೆ ಪರ್ಯಾಯ ಯಾಕೆ?
ವರ್ಷಕ್ಕೆ ಸಾವಿರ ಟನ್‌ ಚಿನ್ನ ಖರೀದಿಸುವ ಭಾರತ ಜಗತ್ತಿನ ಲ್ಲಿಯೇ ಅತ್ಯಂತ ದೊಡ್ಡ ಚಿನ್ನದ ಗ್ರಾಹಕ. ಇತ್ತೀಚೆಗೆ ಚೈನಾ ಈ ಮೊತ್ತವನ್ನು ಮೀರಿಸಿದ್ದು ಈರ್ವರೂ ಸೇರಿ ಜಗತ್ತಿನ ಶೇ.50 ವಾರ್ಷಿಕ ಚಿನ್ನದ ಮಾರಾಟವನ್ನು ಖರೀದಿಸುತ್ತಾರೆ. ಆದರೆ ಭಾರತೀಯರ ಈ ಚಿನ್ನದ ಮೋಹ ಭಾರತ ಸರಕಾರಕ್ಕೆ ಒಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಇದು ಹೇಗೆಂದರೆ ಚಿನ್ನ ಆಮದು ಆಗುವಾಗ ಅದರ ಬೆಲೆಯನ್ನು ಡಾಲರ್‌ ರೂಪದಲ್ಲಿ ನೀಡಬೇಕಾಗುತ್ತದೆ. ಡಾಲರ್‌ ಕೊರತೆಯಿರುವ ನಮ್ಮ ದೇಶಕ್ಕೆ ಇದೊಂದು ದೊಡ್ಡ ತಲೆನೋವು. ಜಾಸ್ತಿ ಡಾಲರ್‌ ಬಳಕೆಯಿಂದ ನಮ್ಮ ರುಪಾಯಿ ವಿನಿಮಯ ದರದಲ್ಲಿ ಏರಿಕೆ ಉಂಟಾಗಿ ಎÇÉಾ ಆಮದುಗಳು ದುಬಾರಿಯಾಗಿ ದೇಶದುದ್ದಗಲಕ್ಕೂ ಬೆಲೆಯೇರಿ ಕೆಯ ಬಿಸಿ ತಟ್ಟುತ್ತದೆ. ಹಾಗಾಗಿ ಚಿನ್ನದ ಆಮದಿನ ಮೇಲೆ ಸರಕಾರವು ಯಾವತ್ತೂ ತುಸು ನಿಯಂತ್ರಣವನ್ನು ಹೇರುತ್ತಿರುವುದು ಸಹಜ. ಅದಲ್ಲದೆ ಚಿನ್ನದ ಆಮದಿನ ಪ್ರಮಾಣವನ್ನೂ ಕಡಿತಗೊಳಿಸುವುದು ಸರಕಾರದ ಮುಖ್ಯ ಗುರಿಗಳಲ್ಲಿ ಒಂದು. ಗೋಲ್ಡ್ ಬಾಂಡ್‌ ಈ ನಿಟ್ಟಿನಲ್ಲಿ ಒಂದು ಪ್ರಯತ್ನ. 
ಚಿನ್ನದ ಬದಲಾಗಿ ಅದನ್ನೇ ಪ್ರತಿನಿಧಿಸುವ ಮತ್ತು ಅದರ ಬೆಲೆಯನ್ನೇ ಪ್ರತಿಫ‌ಲಿಸುವ ಒಂದು ಬಾಂಡ್‌ ಅಥವಾ ಸಾಲಪತ್ರ ಇದ್ದಲ್ಲಿ ಚಿನ್ನದ ಭೌತಿಕವಾದ ಆಮದನ್ನು ಕಡಿಮೆಗೊಳಿಸಬಹುದ ಲ್ಲವೇ? ಚಿನ್ನದ ಆಮದು ಕಡಿಮೆಯಾದರೆ ರುಪಾಯಿ ಮೌಲ್ಯವೂ ಸ್ವಸ್ಥವಾಗಿದ್ದು ದೇಶದ ಆರ್ಥಿಕತೆಗೆ ಸಹಕಾರಿಯಾಗಿರುತ್ತದೆ. 

ಬಿಡುಗಡೆ ಯಾವಾಗ?
ಭಾರತ ಸರಕಾರವು ರಿಸರ್ವ್‌ ಬ್ಯಾಂಕ್‌ ಮೂಲಕ ಅಗಾಗ್ಗೆ ಈ ಬಾಂಡುಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಸುಮಾರಾಗಿ ಒಂದೆರಡು ತಿಂಗಳುಗಳಿಗೊಮ್ಮೆ ಸುಮಾರು ಒಂದು ವಾರದ ಅವಧಿಯವರೆಗೆ ಈ ಸಾಲಪತ್ರ ಮಾರಾಟಕ್ಕೆ ಲಭ್ಯವಿರುತ್ತದೆ. ಈ ರೀತಿ ಹಂತ ಹಂತವಾಗಿ ಇಶ್ಯೂ ಆಗುವ ಈ ಬಾಂಡುಗಳಲ್ಲಿ ಒಂದು ಬಾರಿ ಅವಕಾಶ ತಪ್ಪಿದರೆ ಇನ್ನೊಂದು ಬಾರಿಗಾಗಿ ಕಾಯಬೇಕಾಗುತ್ತದೆ. 

ಬಿಡುಗಡೆ ಎಲ್ಲಿ?
ಈ ಬಾಂಡುಗಳು ಬಹುತೇಕ ಎÇÉಾ ಬ್ಯಾಂಕುಗಳಲ್ಲಿ, ಆಯ್ದ ಪೋಸ್ಟ್‌ ಆಫೀಸುಗಳಲ್ಲಿ, ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೋರೇಶನ್‌ ಇತ್ಯಾದಿ ಬ್ರೋಕರುಗಳ ಬಳಿಯಲ್ಲಿ ದೊರೆಯುತ್ತವೆ. ಭಾರತ ಸರಕಾರದ ಪರವಾಗಿ ರಿಸರ್ವ್‌ ಬ್ಯಾಂಕು ಬಿಡುಗಡೆ ಮಾಡುತ್ತಿರುವ ಈ ಬಾಂಡುಗಳು ಕಾಗದ ಅಥವಾ ಡಿಮ್ಯಾಟ್‌ ರೂಪದಲ್ಲಿ ಬರುತ್ತವೆ ಹಾಗೂ ಬೇಕೆಂದರೆ ಕಾಗದವನ್ನು ಡಿಮ್ಯಾಟ್‌ ಖಾತೆಗೆ ಪರಿವರ್ತಿಸಿಕೊಳ್ಳಬಹುದು. ಬಾಂಡುಗಳನ್ನು ಏಜೆಂಟರ ಮೂಲಕ ಅಥವಾ ನೇರವಾಗಿ ಬ್ಯಾಂಕುಗಳಿಂದಲೂ ಖರೀದಿಸಬಹುದು. 

ಯಾರು ಅರ್ಹರು? 
ಓರ್ವ ನಿವಾಸಿ ಭಾರತೀಯ, ಹಿಂದು ಅವಿಭಕ್ತ ಕುಟುಂಬ, ಟ್ರಸ್ಟ್‌, ಯುನಿವರ್ಸಿಟಿ, ಚಾರಿಟೇಬಲ್‌ ಸಂಸ್ಥೆ ಹೀಗೆ ಯಾರು ಬೇಕಾದರೂ ಈ ಬಾಂಡುಗಳನ್ನು ಕೊಳ್ಳಬಹುದು. ಅನಿವಾಸಿ ಭಾರತೀಯರು ಈ ಬಾಂಡುಗಳಲ್ಲಿ ಹೂಡಿಕೆ ಮಾಡುವಂತಿಲ್ಲ. 

ಹೂಡಿಕೆಯ ಮೊತ್ತ
ಈ ಬಾಂಡು 1 ಗ್ರಾಮ್‌ ಚಿನ್ನದ ಪ್ರಮಾಣದಲ್ಲಿ ಮಾರಾಟ ವಾಗುತ್ತವೆ. ಒಬ್ಟಾತ ಕನಿಷ್ಠ ಒಂದು ಗ್ರಾಮ್‌ ಗರಿಷ್ಟ ಮೊತ್ತ 4000 ಗ್ರಾಮ್‌ – ಪ್ರತಿ ವರ್ಷಕ್ಕೆ (ಎಪ್ರಿಲ್‌-ಮಾರ್ಚ್‌) ಖರೀದಿಸಬಹುದು. ಈ ಮಿತಿ ಆರಂಭದಲ್ಲಿ 500 ಗ್ರಾಮ್‌ ಇತ್ತು. ಜಂಟಿ ಖಾತೆಯಲ್ಲಿ ಖರೀದಿಸಿದರೆ ಈ ಮಿತಿ ಮೊದಲ ಹೂಡಿಕೆದಾರರ ಹೆಸರಿನ ಮೇಲೆ ಅನ್ವಯವಾಗುತ್ತದೆ.

ಅವಧಿ
ಈ ಬಾಂಡ್‌ 8 ವರ್ಷದ ನಿಶ್ಚಿತ ಅವಧಿಗೆ ಬರುತ್ತದೆ. 8 ವರ್ಷ ಆದಕೂಡಲೇ ಬಾಂಡ್‌ ಮೆಚೂÂರ್‌ ಹೊಂದಿ ಅದರ ಮೌಲ್ಯ ನಿಮ್ಮ ಕೈ ಸೇರುತ್ತದೆ. ಆದರೆ 5 ನೇ ವರ್ಷದಿಂದ ಬಾಂಡನ್ನು ವಾಪಾಸು ನೀಡಿ ಮೌಲ್ಯ ವಾಪಾಸು ಪಡೆಯುವ ಅವಕಾಶವೂ ಇದೆ. ಬಾಂಡ್‌ ವಾಪಾಸಾತಿಯನ್ನು ಬಡ್ಡಿ ನೀಡುವ ದಿನಾಂಕ ಗಳಂದು – ಅಂದರೆ ಆರು ತಿಂಗಳುಗಳಿಗೊಮ್ಮೆ- ಮಾತ್ರವೇ ಮಾಡಲು ಸಾಧ್ಯ. ಅದಲ್ಲದೆ ಮಧ್ಯಾವಧಿಯಲ್ಲಿ ಈ ಬಾಂಡುಗಳನ್ನು ಶೇರುಗಟ್ಟೆಯಲ್ಲಿ ಮಾರಾಟ ಮಾಡಿಯೂ ಕೂಡಾ ಹೂಡಿಕೆಯಿಂದ ಹೊರಬರಬಹುದು. 

ಬಾಂಡ್‌ ಮೌಲ್ಯ ಹೇಗೆ?
ಬಾಂಡ್‌ ಖರೀದಿ ಹಾಗೂ ವಾಪಸಾತಿ – ಈ ಎರಡೂ ಸಂದರ್ಭಗಳಲ್ಲೂ ಬಾಂಡ್‌ ಮೌಲ್ಯವನ್ನು ಬಿಡುಗಡೆಯ ಹಿಂದಿನ ಸರಾಸರಿ ಚಿನ್ನದ ಬೆಲೆಯ ಮೇರೆಗೆ ನಿಗದಿಪಡಿಸಲಾಗುತ್ತದೆ. ಅದಕ್ಕಾಗಿ ಒಂದು ಬಿಡುಗಡೆಗೆ ಅದರ ಹಿಂದಿನ ವಾರದ 3 ದಿನಗಳ ಸರಾಸರಿ ಬೆಲೆಯನ್ನು (ಶೇ.99.99 ಶುದ್ಧ ಚಿನ್ನದ್ದು) ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇಂಡಿಯನ್‌ ಬುಲ್ಲಿಯನ್‌ ಐಂಡ್‌ ಜುವೆಲ್ಲರ್ಸ್‌ ಅಸೋಸಿಯೇಶನ್‌ ಪ್ರಕಟಿಸುವ ಬೆಲೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. 

ಒಮ್ಮೊಮ್ಮೆ ಸರಕಾರವು ಈ ಬಾಂಡುಗಳ ಮೇಲೆ ಸರಾಸರಿ ಬೆಲೆಗಿಂತಲೂ ತುಸು ಡಿಸ್ಕೌಂಟ್‌ ಬೆಲೆಗೆ ಬಿಡುಗಡೆ ಮಾಡುವುದಿದೆ. ಅಂತಹ ಸಂದರ್ಭಗಳು ಹೂಡಿಕೆಗೆ ಉತ್ತಮ ಅವಕಾಶ. 

ಅದಲ್ಲದೆ ಡಿಜಿಟಲ್‌ ಪಾವತಿಯ ಮೂಲಕ ಬ್ಯಾಂಕ್‌ ಜಾಲತಾಣಗಳಲ್ಲಿ ಖರೀದಿ ಮಾಡಿದರೆ ಗ್ರಾಮ್‌ ಒಂದರ ರೂ. 50ರ ಡಿಸ್ಕೌಂಟ್‌ ಕೂಡಾ ದೊರೆಯುತ್ತದೆ. ಡಿಜಿಟಲ್‌ ಕ್ರಾಂತಿಗೆ ಹಾಗೂ ಬಿಳಿಹಣದ ಉತ್ತೇಜನಕ್ಕೆ ಇದೊಳ್ಳೆ ಅವಕಾಶ ಹಾಗೂ ಗ್ರಾಹಕರಿಗೆ ಹೆಚ್ಚುವರಿ ಲಾಭ.

ಪ್ರತಿಫ‌ಲ 
ಈ ಬಾಂಡಿನ ಮೇಲೆ ಶೇ.2.50 ಬಡ್ಡಿ ನಿಗದಿಸಲಾಗಿದೆ. ಆರಂಭದಲ್ಲಿ ಇದು ಶೇ.2.75 ಇತ್ತು. ಈವಾಗ ಬಡ್ಡಿ ದರ 
ಇಳಿಕೆಯ ದೆಸೆಯಿಂದ ಇದು ಶೇ.2.50ಕ್ಕೆ ಇಳಿದಿದೆ. ಆರು ತಿಂಗಳುಗಳಿಗೊಮ್ಮೆ ಬಾಂಡಿನ ಮೂಲ ಹೂಡಿಕಾ  ಮೌಲ್ಯದ ಮೇಲೆ ಶೇ.2.50 ಬಡ್ಡಿಯನ್ನು ನಿಮ್ಮ ಬ್ಯಾಂಕ್‌ ಖಾತೆಗೆ ಕ್ರೆಡಿಟ್‌ ಮಾಡಲಾಗುತ್ತದೆ. ಕೊನೆಯ ಕಂತಿನ ಬಡ್ಡಿಯನ್ನು ಅಸಲು ಮೊತ್ತವನ್ನು ಹಿಂತಿರುಗಿಸುವಾಗ ಜೊತೆಗೇ ಕೊಡಲಾಗುತ್ತದೆ. ನೈಜ ಚಿನ್ನದಲ್ಲಿ ಮಾಡಿದ ಹೂಡಿಕೆಯಂತೆಯೇ ಇಲ್ಲೂ ಕೂಡಾ ಬಾಂಡ್‌ ಮಾರಿ ದುಡ್ಡನ್ನು ಹಿಂಪಡೆಯುವ ಹಂತದಲ್ಲಿ ಆ ಕಾಲಕ್ಕೆ ಪ್ರಚಲಿತವಾದ ಚಿನ್ನದ ಬೆಲೆಯ ಕಾರಣಕ್ಕೆ ಲಾಭ ಅಥವಾ ನಷ್ಟ ಉಂಟಾಗಲಿದೆ. ಆ ನಿಟ್ಟಿನಲ್ಲಿ ಈ ಬಾಂಡ್‌ ನೈಜ ಚಿನ್ನವನ್ನು ಹೋಲುತ್ತದಾರೂ ಇಲ್ಲಿ ಸಿಗುವ ಶೇ.2.50 ಬಡ್ಡಿ ನೈಜ ಚಿನ್ನದಲ್ಲಿ ಸಿಗಲಾರದು. ಬಡ್ಡಿ ಈ ಸ್ಕೀಮಿನ ಹೆಚ್ಚುಗಾರಿಕೆ. ಕಾಗದ ಚಿನ್ನ ಖರೀದಿಸಲು ಸರಕಾರ ನೀಡುವ ಪ್ರಲೋಭನೆ.

ಬಾಂಡ್‌ ಮೇಲೆ ಸಾಲ
ಭೌತಿಕ ಚಿನ್ನವನ್ನು ಅಡವಿಟ್ಟು ಸಾಲ ಪಡೆಯುವಂತೆ ಈ ಚಿನ್ನದ ಬಾಂಡುಗಳನ್ನೂ ಬ್ಯಾಂಕುಗಳಲ್ಲಿ ಅಡವಿಟ್ಟು ಸಾಲ ಪಡೆಯಬ ಹುದು. ಸಾಮಾನ್ಯ ಗೋಲ್ಡ್ ಲೋನಿಗೆ ಸಿಗುವಷ್ಟೇ ಸಾಲದ ಮೊತ್ತ ಇದರಲ್ಲೂ ಸಿಗಲಿದೆ. 

ಕೆವೈಸಿ
ಈ ಬಾಂಡುಗಳ ಖರೀದಿಗೆ ಹೂಡಿಕೆದಾರರ ಕೆವೈಸಿ ಖಂಡಿತ ಬೇಕಾಗುತ್ತದೆ. ಅಂದರೆ ಪ್ಯಾನ್‌ ಕಾರ್ಡ್‌, ಗುರುತು ಪುರಾವೆ, ವಿಳಾಸ ಪುರಾವೆ ಇತ್ಯಾದಿಗಳ ಅಗತ್ಯವಿರುತ್ತದೆ. 

ಮಾರಾಟ 
ಅಂತಿಮವಾಗಿ ಬಾಂಡನ್ನು ಹಿಂತಿರುಗಿಸಿ ಮೌಲ್ಯ ವಾಪಾಸು ಪಡೆಯುವುದರ ಹೊರತಾಗಿ ಈ ಬಾಂಡುಗಳನ್ನು ಶೇರು ಮಾರುಕಟ್ಟೆಯಲ್ಲೂ ಮಾರಾಟ ಮಾಡುವ ಸೌಲಭ್ಯವನ್ನು ಸರಕಾರ ಕಲ್ಪಿಸಿದೆ. ಆ ಮೂಲಕ ತುರ್ತಾಗಿ ದುಡ್ಡು ಬೇಕಾದವರು ಬಾಂಡ್‌ ಮಾರಾಟ ಮಾಡಿ ಹೊರಬರಬಹುದು. ತುಸು ಕಡಿಮೆ ಬೆಲೆಗೆ ಸಿಗುವ ಕಾರಣ ಖರೀದಿ ಮಾಡುವವರೂ ಕೂಡಾ ಮಾರುಕಟ್ಟೆಯಲ್ಲಿಯೇ ಖರೀದಿ ಕೂಡಾ ಮಾಡಬಹುದು.

ಆದಾಯಕರ
ಗೋಲ್ಡ್ ಬಾಂಡಿನಲ್ಲಿ ಬರುವ ಬಡ್ಡಿಯ ಆದಾಯದ ಮೇಲೆ ಯಾವುದೇ ರೀತಿಯ ಕರ ವಿನಾಯಿತಿ ಇಲ್ಲ. ಅಂದರೆ ಪ್ರತಿ ಆರು ತಿಂಗಳುಗಳಿಗೊಮ್ಮೆ ಬರುವ ಶೇ.2.50 (ವಾರ್ಷಿಕ) ಬಡ್ಡಿಯ ಮೇಲೆ ನಿಮ್ಮ ನಿಮ್ಮ ಆದಾಯದ ಸ್ಲಾಬ್‌ ಅನುಸಾರ ಆದಾಯ ಕರ ಕಟ್ಟಬೇಕು. 

ಆದರೆ 8 ವರ್ಷಗಳ ಪೂರ್ಣಾವಧಿ ಈ ಬಾಂಡುಗಳಲ್ಲಿ ಹೂಡಿಕೆಯಾಗಿದ್ದು ಕಟ್ಟ ಕಡೆಯಲ್ಲಿ ಬಾಂಡ್‌ ವಾಪಸಾತಿ 
ಹಂತದಲ್ಲಿ ದುಡ್ಡು ಹಿಂಪಡಕೊಂಡವರಿಗೆ ಚಿನ್ನದ ಬೆಲೆಯಲ್ಲಿ ಉಂಟಾದ ಮೌಲ್ಯ ವೃದ್ಧಿಯ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಆದರೆ ಮಧ್ಯಾವಧಿಯಲ್ಲಿ ಮಾರುಕಟ್ಟೆಯಲ್ಲಿ ಮಾರಿದಾಗ, ಅದರಲ್ಲಿ ಉಂಟಾದ ಮೌಲ್ಯ ವೃದ್ಧಿಯ ಮೇಲೆ ಮೌಲ್ಯ ವೃದ್ಧಿ ತೆರಿಗೆ (ಕ್ಯಾಪಿಟಲ್‌ ಗೈನ್ಸ್‌) ಕಟ್ಟಬೇಕು. ಈ ಕ್ಯಾಪಿಟಲ್‌ ಗೈನ್ಸ್‌ ಕರವು ಮೂರು ವರ್ಷಗಳ ಹೂಡಿಕೆಯನ್ನು ಮೀರಿದ್ದರೆ ದೀರ್ಘ‌ಕಾಲಿಕ ಕ್ಯಾಪಿಟಲ್‌ ಗೈನ್ಸ್‌ ಕರವಾಗಿರುತ್ತದೆ. ಅಂದರೆ ಇಂಡೆಕ್ಸೇಶನ್‌ ಬಳಿಕದ ಮೌಲ್ಯವೃದ್ಧಿಯ ಶೇ. 20 ಕರ ಕಟ್ಟಬೇಕು. ಮೂರು ವರ್ಷಗಳಿಗಿಂತ ಕಡಿಮೆ ಹೂಡಿಕಾವಧಿಯಾಗಿದ್ದರೆ ಅಲ್ಪಕಾಲಿಕ ಕ್ಯಾಪಿಟಲ್‌ ಗೈನ್ಸ್‌ ಲೆಕ್ಕದಲ್ಲಿ ವಾರ್ಷಿಕ ಆದಾಯಕ್ಕೆ ಸೇರಿಸಿ ಅನ್ವಯ ದರದಲ್ಲಿ ತೆರಿಗೆ ಕಟ್ಟಬೇಕು. 

ಯಾರಿಗೆ ಸೂಕ್ತ?
ಆಭರಣದ ಚಿನ್ನಕ್ಕೆ ಬಾಂಡ್‌ ಪರ್ಯಾಯವಾಗದು. ಬಾಂಡ್‌ ಧರಿಸಿ ಮದುವೆ ಸಮಾರಂಭ ಅಟೆಂಡ್‌ ಆಗುವ ಸಂಪ್ರದಾಯ ನಮ್ಮಲ್ಲಿನ್ನೂ ಬಂದಿಲ್ಲ. ಅಲ್ಲಿ ಚಿನ್ನಕ್ಕೆ ಚಿನ್ನವೇ ಆಗಬೇಕು. 

ಆದರೆ ಹೂಡಿಕೆಗಾಗಿ ನಾಣ್ಯ/ಚಿನ್ನದ ಬಾರ್‌ಗಳಲ್ಲಿ ಮಾಡುವ ಖರೀದಿಗೆ ಇಂತಹ ಗೋಲ್ಡ್ ಬಾಂಡುಗಳು ಪರ್ಯಾಯವಾಗ ಬಲ್ಲುದು. ಇಲ್ಲಿ ವಾರ್ಷಿಕ ಶೇ.2.50 ಹೆಚ್ಚುವರಿ ಬಡ್ಡಿ ದೊರಕುತ್ತದೆ. ಆದರೆ ಇದರಲ್ಲಿ ಮಾಡಿದ ಪ್ರತಿಯೊಂದು ಹೂಡಿಕೆಯೂ ಪಕ್ಕಾ ವೈಟ್‌ ಹಾಗೂ ಕರಾರ್ಹ! ಭೌತಿಕ ಚಿನ್ನದ ಮೆಲಿನ ಕ್ಯಾಪಿಟಲ್‌ ಗೈನ್ಸ್‌ ಕೂಡಾ ಕರಾರ್ಹವೇ ಆದರೂ ಜನರು ನಗದು ವ್ಯವಹಾರ ನಡೆಸಿ ಆದಾಯವನ್ನು ಅಡಗಿಸಿಟ್ಟು ಕರಕಟ್ಟದೆ ಹೇಗೋ ಸುಧಾರಿಸಿ ಕೊಳ್ಳುತ್ತಾರೆ. ಇಲ್ಲಿ ಹಾಗೆ ಮಾಡಲು ಬರುವುದಿಲ್ಲ. 

ಸಿಗುವ ಬಡ್ಡಿಯನ್ನು ಮತ್ತು ಮಾರುಕಟ್ಟೆಯ ಲಿಸ್ಟಿಂಗ್‌ ಸೌಲಭ್ಯ ಗಮನಿಸಿದರೆ ಇದು ಚಿನ್ನದ ಇಟಿಎಫ್ಗಳಿಗಿಂತಲೂ ಉತ್ತಮ ಯೋಜನೆ ಹಾಗೂ ಇಟಿಎಫ್ಗಳಲ್ಲಿ ಇರುವ ವೆಚ್ಚದ ಭಾರ ಇಲ್ಲಿ ಇಲ್ಲ. ಇಟಿಎಫ್ ಗಳು ನಿಮಗೆ ವಾರ್ಷಿಕ ಶುಲ್ಕವನ್ನು ವಿಧಿಸುತ್ತವೆ ಅಲ್ಲದೆ, ಬಾಂಡ್‌ಗಳಲ್ಲಿ ನೀಡುವಂತೆ ಬಡ್ಡಿ ನೀಡುವುದಿಲ್ಲ. 

ಇಲ್ಲಿ ಹೆಚ್ಚುವರಿ ಬಡ್ಡಿ ಸಿಗುವುದಾದರೂ ಚಿನ್ನದ ಮಾರುಕಟ್ಟೆಯ ಏರಿಳಿತ ಹಾಗೂ ಆಂತರಿಕ ಏರಿಳಿತಗಳಿಂದ ಈ ಸ್ಕೀಮು ವಿಮುಖವಾಗಿಲ್ಲ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

ಚಿನ್ನದ ಮೆಲಿನ ಹೂಡಿಕೆಯಲ್ಲಿ ಆಸಕ್ತಿಯಿರುವವರಿಗೆ ಹಾಗೂ ಚಿನ್ನದ ಮೇಲಿನ ಹೂಡಿಕೆಯ ಪ್ರತಿಫ‌ಲದ ಮೇಲೆ ಭರವಸೆ ಇರುವವರು ಸಾವರಿನ್‌ ಗೋಲ್ಡ್ ಬಾಂಡ್‌ ಅನ್ನು ಧಾರಾಳವಾಗಿ ಪರಿಗಣಿಸಬಹುದು.

– ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next