Advertisement

ಜಾತ್ರೆ ಇದ್ದರೂ ಚುನಾವಣೆ ಬ್ಯಾನರ್‌ ರಹಿತ!

11:52 AM Apr 23, 2018 | Team Udayavani |

ಪುತ್ತೂರು : ಸಾರ್ವಜನಿಕ ಸ್ಥಳಗಳೆಂದರೆ ಬ್ಯಾನರ್‌, ಬಂಟಿಂಗ್ಸ್‌, ಪೋಸ್ಟರ್‌ಗಳಿಂದಲೇ ತುಂಬಿರುತ್ತದೆ. ಆದರೆ ಚುನಾವಣೆಯ ಸಂದರ್ಭವನ್ನು ಉಪಯೋಗಿಸಿಕೊಂಡು ಬ್ಯಾನರ್‌ ಮುಕ್ತವಾಗಿಸಲು ಪುತ್ತೂರಿನ ಚುನಾವಣಾ ಅಧಿಕಾರಿಗಳು ಕೈಗೊಂಡ ಪ್ರಯೋಗವೊಂದು ಮಾದರಿಯಾಗಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

Advertisement

ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ಕೂಡಲೇ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಸಹಾಯಕ ಕಮಿಷನರ್‌ ಎಚ್‌. ಕೆ. ಕೃಷ್ಣಮೂರ್ತಿ ಅವರು ಈ ಬಾರಿ ತಾಲೂಕಿನಲ್ಲಿ ಬ್ಯಾನರ್‌, ಬಂಟಿಂಗ್ಸ್‌ ಮುಕ್ತ ಚುನಾವಣೆ ನಡೆಸಲು ಯೋಚನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಯೋಜನೆಗಳನ್ನು ರೂಪಿಸಿಕೊಂಡು ತಮ್ಮ ಅಧೀನ ಅಧಿಕಾರಿಗಳ ಮೂಲಕ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಾರೆ.

ನೀತಿ ಸಂಹಿತೆ ಘೋಷಣೆಯಾದ ಕೂಡಲೇ ಆಯಾ ಸ್ಥಳೀಯಾಡಳಿತಗಳಿಗೆ ಸೂಚನೆ ನೀಡಿ ಎಲ್ಲ ರೀತಿಗಳ ಬ್ಯಾನರ್‌, ಪೋಸ್ಟರ್‌ಗಳನ್ನು ತೆರವುಗೊಳಿಸಲಾಗಿದೆ. ಸಾಮಾನ್ಯವಾಗಿ ಎಪ್ರಿಲ್‌, ಮೇ ತಿಂಗಳಲ್ಲಿ ಧಾರ್ಮಿಕ ಉತ್ಸವ, ಆಚರಣೆಗಳು ನಡೆಯುವುದರಿಂದ ಸಂಘಟಕರಲ್ಲಿ ಕಾರ್ಯಕ್ರಮ ನಡೆಯುವಲ್ಲಿ ಮಾತ್ರ ಕಡಿಮೆ ಸಂಖ್ಯೆಯ ಬ್ಯಾನರ್‌, ಬಂಟಿಂಗ್ಸ್‌ ಅಳವಡಿಸುವಂತೆ ಮತ್ತು ಚುನಾವಣಾ ಅಧಿಕಾರಿಯ ಅನುಮತಿ ಪಡೆದು ಅಳವಡಿಸುವಂತೆ ವಿನಂತಿ ಮಾಡಲಾಗಿತ್ತು.

ಯಶಸ್ಸಿನ ಗುಟ್ಟು
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬ್ಯಾನರ್‌ ರಹಿತ ಚುನಾವಣೆಗಾಗಿ ಅಧಿಕಾರಿಗಳು ಮಾಡಿದ ಮೊದಲ ಕೆಲಸ, ಜನಸಾಮಾನ್ಯರು, ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡದ್ದು. ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆದು ಬ್ಯಾನರ್‌ ಮುಕ್ತ, ಶಾಂತಿಯುತ ಮತದಾನಕ್ಕೆ ಸಹಕರಿಸುವಂತೆ ತಾಲೂಕು ಚುನಾವಣಾಧಿಕಾರಿ ವಿನಂತಿಸಿಕೊಂಡಾಗ ಅದಕ್ಕೆ ಪೂರಕ ಸಹಕಾರ ನೀಡುವ ಭರವಸೆ ಸಿಕ್ಕಿತ್ತು. ಅದು ಫಲ ನೀಡುತ್ತಿದೆ.

ಹಸಿರು ತೋರಣ
ಪುತ್ತೂರು ಜಾತ್ರೆಯ ಸಂದರ್ಭದಲ್ಲೇ ವಿಧಾನಸಭಾ ಚುನಾವಣೆಯೂ ಘೋಷಣೆಯಾಗಿತ್ತು. ಜಾತ್ರೆಯ ಸಂಭ್ರಮವನ್ನು ಬ್ಯಾನರ್‌, ಬಂಟಿಂಗ್ಸ್‌ಗಳಿಂದ ವಿಭಿನ್ನವಾಗಿ ಹಸಿರು ತೋರಣಗಳ ಅಲಂಕಾರದ ಮೂಲಕ ಆಚರಿಸುವಂತೆ ಚುನಾವಣಾಧಿಕಾರಿಯವರು ವಿನಂತಿಸಿದ್ದರು. 2013ರ ವಿಧಾನಸಭಾ ಚುನಾವಣೆಯು ಜಾತ್ರೆಯ ಸಂದರ್ಭದಲ್ಲೇ ಬಂದಿದ್ದ ಹಿನ್ನೆಲೆಯಲ್ಲಿ ಆಗಿನ ಅನುಭವ ಹಾಗೂ ಭಕ್ತರ ಸಹಕಾರವನ್ನು ನೆನಪಿಸಿಕೊಂಡ ಚುನಾವಣಾಧಿಕಾರಿ ಎಚ್‌.ಕೆ. ಕೃಷ್ಣಮೂರ್ತಿ, ಬ್ಯಾನರ್‌ಗಳು ಸಾರ್ವಜನಿಕ ಸ್ಥಳಗಳ ಅಂದವನ್ನು ಹಾಳು ಮಾಡುತ್ತವೆ. ಚುನಾವಣೆಯ ಕಾರಣದಿಂದಲಾದರೂ ಬ್ಯಾನರ್‌ಗಳಿಗೆ ಮುಕ್ತಿ ನೀಡೋಣ ಎಂದು ಮನವಿ ಮಾಡಿ ಕೊಂಡಿದ್ದು, ಭಕ್ತರೂ ಸಹಕಾರ ನೀಡಿದ್ದಾರೆ.

Advertisement

ಜನರ ಸಹಕಾರ
ಚುನಾವಣಾ ನೀತಿ ಸಂಹಿತೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಹಾಗೂ ನೇರವಾಗಿ ಹೇರಬಹುದು. ಆದರೆ ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇವೆ. ಇಲ್ಲಿನ ಜನ ತುಂಬಾ ಪ್ರಬುದ್ಧರಿದ್ದಾರೆ ಮತ್ತು ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ಜನರ ಬೆಂಬಲವನ್ನು ಪಡೆದುಕೊಂಡು ಅಧಿಕಾರಿಗಳು ಯಾವ ರೀತಿ ಕಾರ್ಯ ನಿರ್ವಹಿಸಬಹುದು ಎನ್ನುವುದನ್ನು ಪುತ್ತೂರು ಕ್ಷೇತ್ರ ಸಾಬೀತುಪಡಿಸುತ್ತಿದೆ.
– ಎಚ್‌.ಕೆ. ಕೃಷ್ಣಮೂರ್ತಿ
ಸಹಾಯಕ ಕಮಿಷನರ್‌ ಹಾಗೂ ಚುನಾವಣಾ ಅಧಿಕಾರಿ, ಪುತ್ತೂರು

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next