Advertisement

ಅಭಿಮತ: ಆರ್ಥಿಕತೆ ಮತ್ತೆ ಹಳಿಯೇರುವುದೆಂತು?

01:03 AM Sep 10, 2020 | mahesh |

ನಾನಾ ತರಹದ ಗಂಭೀರ ಸ್ವರೂಪದ ಸಮಸ್ಯೆ ಗಳಿಗೆ ಕಾರಣವಾದ, ವಿಶ್ವದೆಲ್ಲೆಡೆ ವ್ಯಾಪಿಸಿದ ಒಂದೇ ಒಂದು ವೈರಸ್‌ ಜನಜೀವನದ ಎಲ್ಲ ಕ್ಷೇತ್ರ ದಲ್ಲೂ ಅನಿಶ್ಚಿತ ಸನ್ನಿವೇಶವನ್ನು ಸೃಷ್ಟಿಸಿದೆ. ಕೊರೊನೋತ್ತರದಲ್ಲಿ ಭಾರತವೇಕೆ? ಇಡೀ ವಿಶ್ವದ ಆರ್ಥಿಕ ಮತ್ತು ಸಾಮಾಜಿಕ ಚಿತ್ರಣ ಬದಲಾಗಲಿದೆ. ಭಾರತವು ಪ್ರಸಕ್ತ 138 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ವಿಶ್ವದ ಜನ ಸಂಖ್ಯೆಯಲ್ಲಿ ನಮ್ಮ ಪಾಲು ಶೇ. 17.7 ರಷ್ಟಾಗಿದೆ. ನಾವು ವಿದೇಶಗಳಿಗೆ ನಮ್ಮನ್ನು ಹೋಲಿಸಿಕೊಳ್ಳುವಾಗ ನಮ್ಮ ಜನಸಂಖ್ಯೆ ಮತ್ತು ಸಾಂದ್ರತೆಯನ್ನು ಗಣನೆಗೆ ತೆಗೆದು ಕೊಳ್ಳ ಬೇಕಾಗುತ್ತದೆ.

Advertisement

ಇದೇ ಸಂದರ್ಭದಲ್ಲಿ ತೀರಾ ನಿರಾಶೆ ಪಡಬೇಕಾಗಿಲ್ಲ. ಕೃಷಿ ವಲಯವು ಮೊದಲ ತ್ರೆçಮಾಸಿಕದಲ್ಲಿಯೇ ಚೇತರಿಕೆಯನ್ನು ತೋರಿದೆ. ಕೃಷಿ ವಲಯದಲ್ಲಿ ಉತ್ತಮ ಪ್ರಗತಿಯಾಗುತ್ತಿದೆ, ಉತ್ತಮ ಮಳೆ ಕೃಷಿಗೆ ಪೂರಕವಾಗಿದೆ. ಕೃಷಿ ವಲಯವು ಜಿಡಿಪಿಗೆ ಶೇ. 15ರಷ್ಟು ಕೊಡುಗೆ ನೀಡುತ್ತಿದೆ. ರಿಯಲ್‌ ಎಸ್ಟೇಟ್‌ ಮತ್ತು ಆಟೋ ಮೊಬೈಲ್‌ ಕ್ಷೇತ್ರಗಳಲ್ಲಿ ಚೇತರಿಕೆ ಕಂಡು ಬಂದಿದೆ.

ಕೊರೊನಾದ ಎದುರು ಆರೋಗ್ಯ ಮತ್ತು ಆರ್ಥಿಕತೆಯೆಂಬ ಎರಡು ಬೃಹದಾಕಾರದ ಸವಾಲುಗಳು ಎದುರು ನಿಂತಾಗ ಸರಕಾರವು ಆರೋಗ್ಯಕ್ಕೆ ಮಹತ್ವ ನೀಡಿ ಲಾಕ್‌ಡೌನ್‌ ಘೋಷಿಸಿರುವುದರ ಅನಿವಾರ್ಯತೆಯು ಉತ್ಪಾದನೆ, ವಿತರಣೆ ಮತ್ತು ಬಳಕೆ ಈ ಮೂರು ವಿಧಗಳಲ್ಲಿ ದೇಶದ ಆರ್ಥಿಕತೆಯನ್ನು ನಿಷ್ಕ್ರಿಯ ವಾಗಿಸಿತು. ಈ ಸಂದರ್ಭದಲ್ಲಿ ದೇಶದ ಸರಕು ಮತ್ತು ಸೇವಾ ವ್ಯವಸ್ಥೆಗಳ ಒಟ್ಟು ಉತ್ಪಾದನೆ ನಿರೀಕ್ಷೆಯಂತೆಯೇ ಪ್ರಥಮ ತ್ತೈಮಾಸಿಕದಲ್ಲಿ ಭಾರೀ ಕುಸಿತ ಕಂಡಿದೆ. 1996 ರಿಂದ ತ್ತೈಮಾಸಿಕ ನೆಲೆಯಲ್ಲಿ ಜಿಡಿಪಿ ಅಂಕಿ ಅಂಶ ದಾಖಲಿಸುವ ವ್ಯವಸ್ಥೆ ಜಾರಿಗೆ ಬಂದಂದಿನಿಂದ ಅತ್ಯಂತ ತೀವ್ರ ಸ್ವರೂಪದ ಅಭೂತಪೂರ್ವ ಇಳಿಕೆಯನ್ನು ದಾಖಲಿಸಿದೆ. ಇದು ನಿರೀಕ್ಷಿತ. ಆದರೆ ಶೇ (-) 23.9 ಇಳಿಕೆಯ ಪ್ರಮಾಣವು ಅತ್ಯಂತ ಕಳವಳಕಾರಿಯಾಗಿದೆ. ತಯಾರಿಕಾ ವಲಯದಲ್ಲಿ ಶೇ 39.3, ನಿರ್ಮಾಣ ವಲಯದಲ್ಲಿ ಶೇ. 50.3, ಗಣಿಗಾರಿಕೆಯಲ್ಲಿ ಶೇ. 23.3ರ ನಕಾರಾತ್ಮಕ ಬೆಳವಣಿಗೆಯಲ್ಲಿನ ಕುಸಿತ ದಾಖಲಾಗಿದೆ. ಇದು ಕೊರೊನಾರ್ಭಟದ ನೇರ ಅನುಪಾತಕ್ಕನುಗುಣವಾಗಿದೆಯೆಂದರೆ ತಪ್ಪಾಗಲಿಕ್ಕಿಲ್ಲ.

ಜಿಡಿಪಿ ಕುಸಿತವು ನೇರವಾಗಿ ಉದ್ಯೋಗ ನಷ್ಟ ಹಾಗೂ ಆದಾಯ ಕುಸಿತದ ರೂಪದಲ್ಲಿ ಕಾಣಿಸಿ ಕೊಳ್ಳುತ್ತದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಉತ್ಪಾದನ ವಲಯ ಸ್ಥಗಿತಗೊಂಡಿತ್ತು, ಕೂಲಿ ಕಾರ್ಮಿಕರ ಸಾಮೂಹಿಕ ವಲಸೆ, ವ್ಯಾಪಾರ ವಹಿವಾಟುಗಳ ಹಿನ್ನಡೆ, ಲಾಕ್‌ಡೌನ್‌ನಿಂದ ಜನ ಉದ್ಯೋಗವನ್ನು ಕಳೆದುಕೊಂಡರು, ವೇತನ ಕಡಿತ ಅನುಭವಿಸಿದರು. ಜನ ಅನುಭವಿಸುತ್ತಿರುವ ಕಹಿ ಸನ್ನಿವೇಶ ಮತ್ತು ಹತಾಶ ಮನಃಸ್ಥಿತಿಯಿಂದ ಹಣದ ಮುಕ್ತ ಹರಿವಿಗೆ ತಡೆಯಾಯಿತು. ತದನಂತರ ದೇಶವು ಅವಘಡ ಮತ್ತು ಆರ್ಥಿಕತೆಯನ್ನು ಸಮಾನಾಂತರವಾಗಿ ಕಾಪಾಡಲು ಪ್ರಯತ್ನಿಸಿದೆ. ಸಂಕಷ್ಟದಲ್ಲಿರುವವರಿಗೆ ಪ್ರಮುಖವಾಗಿ ಸರಕಾರವೇ ದಾರಿ ತೋರಿಸಬೇಕು ಹೌದು. ಆದರೆ ಯಾವ ಸರಕಾರವಾದರೂ ಜನರಿಗೆ ಕೊಡುವುದು ಸರಕಾರದ ಸಂಪತ್ತಿನಿಂದಲ್ಲವೇ? ಸರಕಾರದ ಬೊಕ್ಕಸ ಖಾಲಿಯಾಗಿದೆ. ಲಾಕ್‌ಡೌನ್‌ಗಿಂತ ಮೊದಲೇ ಸತತ 8 ತ್ರೆçಮಾಸಿಕಗಳಲ್ಲಿ ಜಿಡಿಪಿ ಕುಸಿಯುತ್ತಾ ಬಂದಿತ್ತು. ಇದನ್ನು ಸೇವೆ ಮತ್ತು ಉತ್ಪನ್ನಗಳನ್ನು ಬಳಕೆ ಮಾಡಬೇಕಾದ ಗ್ರಾಹಕರ ಶಕ್ತಿ ಕುಂದಿರುವುದು ಎಂದು ಅರ್ಥಶಾಸ್ತ್ರಜ್ಞರು ವ್ಯಾಖ್ಯಾನ ಮಾಡಿದ್ದರು.

ಆರ್ಥಿಕತೆಯ ಹಿಂಜರಿಕೆಯನ್ನು ನಿಭಾ ಯಿಸಲು ವಿವಿಧ ವಲಯಗಳಲ್ಲಿ ಸೂಕ್ತ ಕ್ರಮ ಗಳನ್ನು ಕೈಗೊಳ್ಳಲು ಸರಕಾರವು ಮುಂದಾ ಗಿತ್ತು. ಮತ್ತು ಅದೇ ಸಮಯದಲ್ಲಿ ಕೊರೊನಾ ಹಾವಳಿ ಯಿಂದ ಆರ್ಥಿಕ ಸ್ಥಿತಿಗೆ ಹೊಡೆತದ ಮೇಲೆ ಹೊಡೆತ ಬಿತ್ತು. ದೇಶದ ಲಕ್ಷಾಂತರ ಜನರಿಗೆ ಬದುಕು ನೀಡಿದ ಐಟಿ ವಲಯ ತನ್ನ ಉದ್ಯೋಗಿ ಗಳಿಗೆ “ಪಿಂಕ್‌ ಸ್ಲಿಪ್‌’ ನೀಡುತ್ತಿದೆ. ಸಂಬಳ ಕಡಿಮೆ ಮಾಡುತ್ತಿದೆ. ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದುದಲ್ಲದೆ ಸರಕಾರಕ್ಕೆ ತೆರಿಗೆ ರೂಪದಲ್ಲಿ ಸಾಕಷ್ಟು ಆದಾಯ ನೀಡುತ್ತಿದ್ದು ಒಂದಕ್ಕೊಂದು ಪೂರಕವಾಗಿರುವ ಹೊಟೇಲ್‌ ಮತ್ತು ಪ್ರವಾ ಸೋದ್ಯಮ ಚಿಂತಾಕ್ರಾಂತವಾಗಿದೆ. ಯಾರನ್ನೂ ದೂಷಿಸದೆ ಏನನ್ನೂ ಸಮರ್ಥಿಸಿಕೊಳ್ಳದ ದುಃಸ್ಥಿತಿ ಎದುರಾಗಿದೆ. ಪ್ರಮುಖ ಮನರಂಜನ ಕ್ಷೇತ್ರವಾದ ಚಿತ್ರರಂಗವು ಹಳ್ಳ ಹಿಡಿದಿದೆ, ಹೊಸ ಸಿನೆಮಾ ಮತ್ತು ಧಾರವಾಹಿಗಳು ಲಾಂಚ್‌ ಆಗುತ್ತಿಲ್ಲ. ಚಿತ್ರ ಮಂದಿರಗಳೇ ತೆರೆಯದಿರುವಾಗ ಯಾವ ನಿರೀಕ್ಷೆಯೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿವೆ. ಮಾಲ್‌, ಮಲ್ಟಿಪ್ಲೆಕ್ಸ್‌ಗಳಲ್ಲಿ ಹಣ ಹೂಡಿದವರು ಚಿಂತಾಕ್ರಾಂತರಾಗಿದ್ದಾರೆ.

Advertisement

ಇದೀಗ ವಿತ್ತ ವ್ಯವಸ್ಥೆಯಲ್ಲಿನ ಬಿಕ್ಕಟ್ಟು ಬ್ಯಾಂಕ್‌ಗಳ ಮೇಲೆ ಆಗಾಧ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ಆರ್ಥಿಕ ವಲಯಗಳ ಸಂದಿಗ್ಧತೆಯು ಬ್ಯಾಂಕ್‌ಗಳ ಮೇಲೆ ಆಘಾತಕಾರಿ ಪರಿಣಾಮ ಬೀರಲಿದೆ. ದೇಶದ ಆರ್ಥಿಕತೆಯನ್ನು ಪುನರುಜ್ಜೀವಗೊಳಿಸಲು ಬ್ಯಾಂಕ್‌ಗಳು ಬಲಿಷ್ಠ ವಾಗಬೇಕಾದದ್ದು ಅಗತ್ಯ. ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಈಗಾಗಲೇ ದುರ್ಬಲಗೊಳಿಸಿದ ಎನ್‌ಪಿಎ (ಅನುತ್ಪಾದಕ ಆಸ್ತಿ) ಜತೆಗೆ ಕೊರೊನಾ ಹಾವಳಿಯಿಂದಾಗಿರುವ ಹೊಡೆತದಿಂದ ಇಡೀ ಬ್ಯಾಂಕಿಂಗ್‌ ಕ್ಷೇತ್ರದ ಪ್ರಗತಿಗೆ ಅಡ್ಡಿಯಾಗುತ್ತಿರುವ ಸಮಸ್ಯೆಯಾಗಿದೆ. ಬ್ಯಾಂಕಿಂಗ್‌ ವಲಯವನ್ನು ಅನೇಕ ವರ್ಷಗಳಿಂದ ಕಾಡುತ್ತಿರುವ ಅನುತ್ಪಾದಕ ಆಸ್ತಿ 2020ರ ಮಾರ್ಚ್‌ಗೆ ಶೇ. 9.5ರಷ್ಟಾಯಿತು. ಸರಿಸುಮಾರು ರೂ. 9.7 ಲಕ್ಷ ಕೋಟಿ ಎನ್‌ಪಿಎ ದುಪ್ಪಟ್ಟಾಗುವ ಭಯದಲ್ಲಿವೆ ಬ್ಯಾಂಕ್‌ಗಳು. 2020ಕ್ಕೆ ಅದು ರೂ. 12.5 ಲಕ್ಷ ಕೋಟಿಗೆ ಹೆಚ್ಚಲಿದೆ ಮತ್ತು ಹತೋಟಿ ತಪ್ಪಿದರೆ ಶೇ. 15 ಕ್ಕೆ ಜಿಗಿಯುವ ಸಂಭವವಿದೆ ಎನ್ನುವ ಆಘಾತಕಾರಿ ಸೂಚನೆಯಿದೆ.

ಅನಿವಾರ್ಯವಾಗಿ ಸರಕಾರವು ಸಾಲ ಮರು ಪಾವತಿಗೆ 6 ತಿಂಗಳ ವಿನಾಯತಿ ನೀಡಿ ರುವುದರಿಂದ ಪ್ರಸಕ್ತ ಹಣಕಾಸು ವರ್ಷದ ಸಾಲಿನಲ್ಲಿ ಶೇ. 20ರಷ್ಟು ಮುಳುಗಿದರೂ ಬ್ಯಾಂಕ್‌ಗಳ ಮರು ಪಾವತಿಯಾಗದ ಸಾಲ ರೂ 20 ಲಕ್ಷ ಕೋಟಿಯಾಗಲಿದೆ. ಸ್ವಯಂ ಸರಕಾರವೇ ತನ್ನ ವೆಚ್ಚಕ್ಕಾಗಿ ಸಾಲ ಮಾಡುತ್ತಿರುವಾಗ ಬ್ಯಾಂಕ್‌ಗಳ ನಷ್ಟ ತುಂಬಿಕೊಡುವವರು ಯಾರು? ಸಾಲ ಎಂದೂ ಮಲಗೋದಿಲ್ಲ. ಬಡ್ಡಿ, ಚಕ್ರಬಡ್ಡಿ ನಡೆಯುತ್ತಿರುತ್ತದೆ. ಈ ಬಾರಿ ಉದ್ದೇಶಪೂರ್ವಕ ಸುಸ್ತಿದಾರರ ಜತೆಗೆ, ಅನಿವಾರ್ಯತೆ, ಸಂಪಾದನೆ ರಹಿತರು ಮತ್ತು ಉತ್ಪಾದನೆ ರಹಿತರು ಇಲ್ಲದಿರುವವರ ಸಂಖ್ಯೆ ಮತ್ತು ಪ್ರಮಾಣ ಹೆಚºಬಹುದು. ಸರಕಾರವು ಬ್ಯಾಂಕ್‌ ಸುಸ್ತಿ ಸಾಲ ವಸೂಲಿ ಮತ್ತು ವಂಚನೆ ಪ್ರಕರಣಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಇನ್ನೂ ಬಿಗಿಯಾದ ಕಾನೂನು ಕ್ರಮಕ್ಕೆ ಮುಂದಾಗಬೇಕು. ದೇಶವು ಇಂದು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ನಿಯಂತ್ರಣವಿಲ್ಲದ ಬಾಹ್ಯ ಸಮಸ್ಯೆಗಳಾಗಿವೆ.

ಲಾಕ್‌ಡೌನ್‌ ಪರಿಣಾಮದಿಂದಾಗಿ ಉದ್ಯೋಗ ನಷ್ಟ, ಆದಾಯ ಕುಸಿತಕ್ಕೆ ಜನರ ಕೈಯಲ್ಲಿ ಹಣದ ಹರಿವನ್ನು ಹೆಚ್ಚಿಸುವ ಕ್ರಮ ಕೈಗೊಳ್ಳಬೇಕು. ಆದರೆ ಬದುಕು ಉಳಿಸಲಾಗದ ಆರ್ಥಿಕ ಪರಿಸ್ಥಿತಿಯೆಂದು ಹತಾಶರಾಗಬೇಕಿಲ್ಲ. ಗ್ರಾಹಕರಲ್ಲಿರುವ ವಿಶ್ವಾಸವು ದಾಖಲೆ ಮಟ್ಟಕ್ಕೆ ಕುಸಿದಿದೆ. ಇದೀಗ ಮುಕ್ತ ಮಾರುಕಟ್ಟೆ ಚಲನಶೀಲವಾಗಬೇಕಾಗಿದೆ. ಅದಕ್ಕೆ ಗ್ರಾಹಕರು ವಿಶ್ವಾಸದಿಂದ ಹಣ ಖರ್ಚು ಮಾಡುವ ಸ್ಥಿತಿ ಉದ್ಭವವಾಗಬೇಕು. ಈಗಿನ ಕೆಟ್ಟ ಕಾಲಘಟ್ಟದಲ್ಲಿ, ಜನರ ಆರ್ಥಿಕ ಬದುಕಿನಲ್ಲಿ ಭದ್ರತೆಯ ಭಾವ ಹೆಚ್ಚಿಸುವಲ್ಲಿ ಸರಕಾರಕ್ಕೆ ಅತ್ಯಂತ ಹೊಣೆಗಾರಿಕೆಯಿದೆ. ಜನರ ಪಾಲಿಗೆ ದುಡಿಮೆಯ ಮೂಲಗಳಾದ ಉದ್ಯೋಗ ಮತ್ತು ಉದ್ದಿಮೆಯ ಬಗ್ಗೆ ಸರಕಾರವು ಪ್ರಥಮ ಆದ್ಯತೆ ನೀಡಬೇಕು.

ಭಾರತವು ಇಂದು ಕೊರೊನಾ, ಆರ್ಥಿಕ ಹಿಂಜರಿಕೆ, ಪ್ರಾಕೃತಿಕ ವಿಕೋಪ, ನಿರುದ್ಯೋಗ ಸಮಸ್ಯೆಯ ವಿರುದ್ಧ ಸಮರವನ್ನೆದುರಿಸುತ್ತಿರುವುದಲ್ಲದೆ ಚೀನ ಮತ್ತು ಪಾಕಿಸ್ಥಾನದ ವಿರುದ್ಧ ನ್ಯಾಯಯುತ ಗಡಿರಕ್ಷಣೆಗಾಗಿ ಹೋರಾಡಬೇಕಾಗಿದೆ. ದೇಶಕ್ಕಿದು ಸತ್ವಪರೀಕ್ಷೆಯ ಕಾಲ. ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಜನ ಅಪಾರ ನಿರೀಕ್ಷೆ ಮತ್ತು ನಂಬಿಕೆಯಿಟ್ಟಿದ್ದಾರೆ. ನಿರೀ ಕ್ಷೆಗಳೆಲ್ಲವೂ ನೈಜತೆಗಳಾಗುವಂತಿದ್ದರೆ ಸಮ ಸ್ಯೆಗಳೇ ಇರುತ್ತಿರಲಿಲ್ಲ. ನಿರೀಕ್ಷೆಗಳು ಹುಸಿ ಯಾಗಲು ಎರಡು ಕಾರಣಗಳಿರುತ್ತವೆ. ಒಂದು ಬಾಹ್ಯ ಮತ್ತು ಇನ್ನೊಂದು ಆಂತರಿಕ. ಬಾಹ್ಯ ಕಾರಣಗಳ ಮೇಲೆ ಬಹುತೇಕ ಸಮಯ ನಿಯಂತ್ರಣವಿರುವುದಿಲ್ಲ. ದೇಶವು ಇಂದು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ನಿಯಂತ್ರಣವಿಲ್ಲದ ಬಾಹ್ಯ ಸಮಸ್ಯೆಗಳೇ ಆಗಿವೆ.

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next