Advertisement

ಭೂಮಿ ನೀಡದಿದ್ರೆ ವಿಷ ಕೊಡಿ; ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘಟನೆಗಳ ಪ್ರತಿಭಟನೆ

07:47 AM Jul 31, 2020 | mahesh |

ಚಿತ್ರದುರ್ಗ: ಭೂಮಿ ಕೊಡಿ ಇಲ್ಲವೇ ವಿಷ ಕೊಡಿ. ನಿರ್ಧಾರ ಹೇಳದಿದ್ದರೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ-ಕರ್ನಾಟಕ, ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯಿತು.

Advertisement

ಶತಮಾನಗಳಿಂದಲೂ ಶೋಷಣೆ, ದೌರ್ಜನ್ಯ, ದಬ್ಟಾಳಿಕೆ, ಅಸ್ಪೃಶ್ಯತೆಯನ್ನು ಸಹಿಸಿಕೊಂಡು ಬರುತ್ತಿರುವ ದಲಿತರು ಸ್ವಂತ ಭೂಮಿ ಉಳ್ಳವರಲ್ಲ. ಜೀವನೋಪಾಯಕ್ಕಾಗಿ ವಂಶಪಾರಂಪರ್ಯವಾಗಿ ಬಂದ ತುಂಡು ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬರುತ್ತಿರುವುದನ್ನು ಸಹಿಸದ ಕೆಲವು ಪ್ರಭಾವಿಗಳು ಅಧಿ ಕಾರಿಗಳ ಮೂಲಕ ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ ಮಾತನಾಡಿ, ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಹೋಬಳಿ ಗಿಡ್ಡಾಪುರ
ಗ್ರಾಮದ ಸ.ನಂ 5 ರಲ್ಲಿ ಗಜ್ಜಗಾನಹಳ್ಳಿ ಗ್ರಾಮದ ಭೂಮಿಯಿಲ್ಲದ ದಲಿತರಿಗೆ ಅಕ್ರಮ ಸಕ್ರಮ ಸಮಿತಿಯಲ್ಲಿ 4-3-1998 ರಲ್ಲಿ ಸಾಗುವಳಿ ಪತ್ರ ನೀಡಲಾಗಿದೆ. ಫಲಾನುಭವಿಗಳು ಕಂದಾಯದ ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ ಭೂಮಾಲೀಕರು, ಚುನಾಯಿತ ಪ್ರತಿನಿಧಿ ಗಳ ಒತ್ತಡಕ್ಕೆ ಮಣಿದು ಚಳ್ಳಕೆರೆ ತಹಶೀಲ್ದಾರ್‌ ಗಜ್ಜಗಾನಹಳ್ಳಿ ಗ್ರಾಮದ ಭೂರಹಿತ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಕೃತ್ಯಕ್ಕೆ ಕೈಹಾಕಿ ಆಶ್ರಯ ಯೋಜನೆಯೆಂದು ಘೋಷಿಸಿರುವುದು ನಿಜಕ್ಕೂ ಅಕ್ಷಮ್ಯ ಎಂದು ಕಿಡಿ ಕಾರಿದರು.

ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸೇರಿ ದಲಿತರ ಭೂಮಿಯನ್ನು ಕಿತ್ತುಕೊಂಡು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿದ್ದಾರೆ. ಎಲ್ಲಿಯೂ ಜಮಾ ಬಂಧಿಯಾಗಿಲ್ಲ . ಕೂಡಲೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ದಲಿತರ ಭೂಸಾಗುವಳಿಗೆ ಅವಕಾಶ ಕೊಡಬೇಕೆಂದು ಒತ್ತಾಯಿಸಿದರು.

ಭೀಮನಕೆರೆ ಶಿವಮೂರ್ತಿ, ದೇವರಾಜ್‌ ನಗರಂಗೆರೆ, ಎನ್‌.ಪ್ರಕಾಶ್‌, ಪಿ.ರೇಣುಕಮ್ಮ, ಪಿ.ಜಯಣ್ಣ, ಕೊಲ್ಲಾರಪ್ಪ, ಕೆಂಚಪ್ಪ, ಕಣಿವೆಮಾರಮ್ಮ ಯುವಕ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next