Advertisement

ಸತ್ತರೆ ಹೂಳಲು ಜಾಗವಿಲ್ಲ ; ರೊಚ್ಚಿಗೆದ್ದ ಗ್ರಾಮಸ್ಥರು

05:40 PM Aug 18, 2022 | Team Udayavani |

ಬಾಗಲಕೋಟೆ: ನಮ್ಮೂರಾಗ ಸತ್ತರೂ ಹೂಳಾಕ್‌ ಜಾಗಾ ಇಲ್ಲ. ಶಾಸಕರಿಗೆ, ಅಧಿಕಾರಿಗಳಿಗೆ ಕೇಳ್ಕೊಂಡು ಸಾಕಾಗೈತಿ. ಸತ್ತವರನ್ನು ನಾವು ಎಲ್ಲಿ ಅಂತ್ಯ ಸಂಸ್ಕಾರ ಮಾಡೋಣು. ನಮ್ಮೂರಿಗಿ ಸ್ಮಶಾನಕ್ಕ ಜಾಗಾ ಕೊಡಬೇಕು. ಇಲ್ಲಂದ್ರ ಡಿಸಿ ಆಫೀಸ್‌ ಎದುರೆ ಶವ ತಗೊಂಡು ಹೋಕ್ಕೀವಿ…ತಾಲೂಕಿನ ಶಿಗಿಕೇರಿ ಗ್ರಾಮಸ್ಥರು ಬುಧವಾರ ಹೀಗೆ ಆಕ್ರೋಶಭರಿತ ಮಾತುಗಳೊಂದಿಗೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

Advertisement

ಶಿಗಿಕೇರಿ ನೂರಾರು ಗ್ರಾಮಸ್ಥರು ನವನಗರ-ಇಳಕಲ್ಲ ಮಾರ್ಗದ ಪ್ರಮುಖ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಿ, ಶಾಸಕರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಗ್ರಾಮದ ಪ್ರಮುಖರು ಮಾತನಾಡಿ, ಬಾಗಲಕೋಟೆ ಹಳೇ ನಗರದಿಂದ 3 ಕಿ.ಮೀ ಹಾಗೂ ನವನಗರಕ್ಕೆ ಹೊಂದಿಕೊಂಡಿರುವ ಶಿಗಿಕೇರಿ ಗ್ರಾಮ, ಶಿಗಿಕೇರಿ ಕ್ರಾಸ್‌ ಎಂದೇ ಖ್ಯಾತಿ ಪಡೆದಿದೆ.

ಶಿಗಿಕೇರಿ ಗ್ರಾಮದ ಜತೆಗೆ ಇಲ್ಲಿ ಕದಾಂಪುರ, ಸಂಗೊಂದಿ, ಅಂಡಮುರನಾಳ, ಶಿರಗುಪ್ಪಿ ಎಲ್‌.ಟಿ ಪುನರ್ವಸತಿ ಕೇಂದ್ರಗಳು, ಪದ್ಮನಯನ ನಗರ ಪೊಲೀಸ್‌ ಕ್ವಾರ್ಟರ್‌ì, ಹೌಸಿಂಗ್‌ ಕಾಲೋನಿ ಸೇರಿದಂತೆ ಹಲವಾರು ಖಾಸಗಿ ಲೇಔಟ್‌ಗಳೂ ಇಲ್ಲಿವೆ. ಪ್ರತಿಯೊಂದಕ್ಕೂ ಪ್ರತ್ಯೇಕ ಸ್ಮಶಾನಗಳಿವೆ. ಆದರೆ, ನಮ್ಮೂರಿಗೆ ಸ್ಮಶಾನವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯವಾಗಿ ಆಲಮಟ್ಟಿ ಜಲಾಶಯ ಎತ್ತರಿಸುವುದರಿಂದ ಮುಳುಗಡೆಯಾಗುವ ಹಳೇ ನಗರದ ಜನರಿಗೆ ಪುನರ್ವಸರಿ ಕಲ್ಪಿಸಲು ನವನಗರ ಯೂನಿಟ್‌-3ರ ನಿರ್ಮಾಣಕ್ಕೆ ಇದೇ ಶಿಗಕೇರಿ ಗ್ರಾಮದ ಸಾವಿವಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು, ನಮ್ಮ ಭೂಮಿಯನ್ನೇ ತ್ಯಾಗ ಮಾಡಿದ್ದೇವೆ.ನಮ್ಮೂರಲ್ಲಿ ಯಾರೇ ಮೃತಪಟ್ಟರೂ ಅಂತ್ಯ ಸಂಸ್ಕಾರಕ್ಕೆ ಸ್ಮಶಾನ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಸಿ ಕಚೇರಿಗೆ ಶವ-ಎಚ್ಚರಿಕೆ: ನಮ್ಮೂರಿಗೆ ಪ್ರತ್ಯೇಕ ಸ್ಮಶಾನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಡಿಸಿ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ನಡೆಸಬೇಕಾಗುತ್ತದೆ. ನಮ್ಮೂರಿನ ನೂರಾರು ಎಕರೆ ಭೂಮಿ ನವನಗರ 3ನೇ ಹಂತದ ನಿರ್ಮಾಣಕ್ಕೆ ನೀಡಿದ್ದೇವೆ. ಆದರೂ, ನಮ್ಮ ತ್ಯಾಗ ಪರಿಗಣಿಸಿಲ್ಲ. ಈ ಕುರಿತು ಶಾಸಕರು, ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ವ್ಯವಸ್ಥೆ ಮಾಡಿಲ್ಲವೆಂದು ದೂರಿದರು.

Advertisement

ಈ ವೇಳೆ ಗ್ರಾಪಂ ಅಧ್ಯಕ್ಷ ಬಸವರಾಜ ಪಾಂಡು ನಾಯಕ, ಸದಸ್ಯರಾದ ಮಲ್ಲು ವಾಲಿಕಾರ, ಮಲ್ಲು ಪೂಜಾರ, ಪ್ರಶಾಂತ ಮಾಚಕನೂರ, ಪ್ರಮುಖರಾದ ಭೀಮಪ್ಪ ಗಡದಿನ್ನಿ, ನಾಗಪ್ಪ ಕೆರೂರ, ಸೋಮನಗೌಡ ಗಾಣಗೇರ, ಮಲ್ಲಪ್ಪ ಮೇಟಿ, ಸಂಗಪ್ಪ ನಾಡಗೌಡ, ಮಾರುತಿ ವಾಲಿಕಾರ, ರವಿ ಲಚ್ಚನಕರ, ಪರಶುರಾಮ ನಾಡಗೌಡ, ವೆಂಕಪ್ಪ, ಮಹಿಳಾ ಸಂಘದ ಪ್ರಮುಖರಾದ ರತ್ನವ್ವ ಮಾಚಕನೂರ, ರೇಣವ್ವ ಗಡದಿನ್ನಿ, ಗೀತಾ ಬಾರಕೇರ ಮುಂತಾದ ಪ್ರಮುಖರು ಸೇರಿದಂತೆ ಸುಮಾರು 600-700 ಜನ ಪಾಲ್ಗೊಂಡಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಾಗಲಕೋಟೆ ತಹಶೀಲ್ದಾರ್‌, ಬಿಟಿಡಿಎ ಅಧಿಕಾರಿಗಳು ಭೇಟಿ ನೀಡಿ ಶಿಗಿಕೇರಿ ಗ್ರಾಮಕ್ಕೆ ಸ್ಮಶಾನಕ್ಕೆ ಭೂಮಿ ಒದಗಿಸುವ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಹೆದ್ದಾರಿ ತಡೆ; ಪರದಾಡಿದ ವಾಹನ ಚಾಲಕರು ವಿಜಯಪುರ, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಬಾಗಲಕೋಟೆಯಿಂದ ಚಲಿಸುವ ವಾಹನಗಳು
ಹಾದು ಹೋಗುವ ಶಿಗಿಕೇರಿ ಕ್ರಾಸ್‌ನ ಪ್ರಮುಖ ಸ್ಥಳದಲ್ಲಿ ಈ ಹೋರಾಟ ನಡೆದಿದ್ದರಿಂದ ವಾಹನ ಚಾಲಕರು ತೊಂದರೆ ಅನುಭವಿಸಿದರು. ಸುಮಾರು 4ರಿಂದ 5 ಗಂಟೆಗಳ ಕಾಲ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟಿಸಿದರು. ಹೀಗಾಗಿ ನವನಗರಕ್ಕೆ ಬರುವ ಹಾಗೂ ನವನಗರದಿಂದ ತೆರಳುವ ವಾಹನಗಳು, ಹಳೇ ಬಾಗಲಕೋಟೆ ಮತ್ತು ಸಂಗಮ ಕ್ರಾಸ್‌ ಮೂಲಕ ಸಂಚರಿಸುವಂತಾಯಿತು. ಹೋರಾಟದಿಂದ ಸುಮಾರು ನಾಲ್ಕೈದು ಕಿ.ಮೀವರೆಗೂ ವಾಹನಗಳು ಸಾಲಾಗಿ ನಿಲ್ಲುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next